ಚಂದ್ರಗುತ್ತಿಯಲ್ಲಿ ದನಗಳ ಬೆದರಿಸಿ ಬೆಳಕಿನ ಹಬ್ಬ ಸಂಭ್ರಮ

| Published : Oct 24 2025, 01:00 AM IST

ಚಂದ್ರಗುತ್ತಿಯಲ್ಲಿ ದನಗಳ ಬೆದರಿಸಿ ಬೆಳಕಿನ ಹಬ್ಬ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಭಾಗದಲ್ಲಿ ಇಂದಿಗೂ ಜನಪದ ಸೊಗಡು ಜೀವಂತವಾಗಿದ್ದು, ಕೃಷಿ ಪೂರಕ ಗೋವುಗಳ ಹಬ್ಬವೆಂದೇ ಕರೆಸಿಕೊಳ್ಳುವ ದೀಪಾವಳಿಯ ಬಲಿಪಾಡ್ಯಮಿ ಹಬ್ಬವನ್ನು ತಾಲೂಕಿನ ಚಂದ್ರಗುತ್ತಿ ಗ್ರಾಮದ ರೈತ ಸಮೂಹ ಸಾಂಗವಾಗಿ ಸಂಭ್ರಮ, ಸಡಗರದಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಗ್ರಾಮೀಣ ಭಾಗದಲ್ಲಿ ಇಂದಿಗೂ ಜನಪದ ಸೊಗಡು ಜೀವಂತವಾಗಿದ್ದು, ಕೃಷಿ ಪೂರಕ ಗೋವುಗಳ ಹಬ್ಬವೆಂದೇ ಕರೆಸಿಕೊಳ್ಳುವ ದೀಪಾವಳಿಯ ಬಲಿಪಾಡ್ಯಮಿ ಹಬ್ಬವನ್ನು ತಾಲೂಕಿನ ಚಂದ್ರಗುತ್ತಿ ಗ್ರಾಮದ ರೈತ ಸಮೂಹ ಸಾಂಗವಾಗಿ ಸಂಭ್ರಮ, ಸಡಗರದಿಂದ ಆಚರಿಸಿದರು.

ರೈತರು ಪ್ರೀತಿಯಿಂದ ಸಾಕಿರುವ ಜಾನುವಾರಿಗೆ ಬಗೆ ಬಗೆಯ ಬಲೂನ್ ಮತ್ತು ವಿವಿಧ ರೀತಿಯ ಅಲಂಕಾರಿಕ ಸಾಮಗ್ರಿಗಳಿಂದ ಸಿಂಗರಿಸಿ ಸಂಭ್ರಮಿಸಿದರು. ಇನ್ನು ಜಾನುವಾರುಗಳ ಕೊಟ್ಟಿಗೆ ಬಾಗಿಲುಗಳಿಗೆ ತಳಿರು ತೋರಣ ಸೇರಿದಂತೆ ಪುಷ್ಪಗಳಿಂದ ಅಲಂಕರಿಸಿದ್ದರು. ಹಸು-ಕರು ಎತ್ತುಗಳ ಮೈ ತೊಳೆದು ಶುದ್ಧಗೊಳಿಸಿ ಮೈಯಿಗೆ ಬಣ್ಣ ಬಣ್ಣದ ಪಟ್ಟೆ ಬಳಿದು ಕೊರಳಿಗೆ ಅಡಕೆ ಸಿಂಗಾರ, ಹೂವಿನಿಂದ ಅಲಂಕಾರ, ವೀಳ್ಯೆದೆಲೆ, ಸಪ್ಪೆರೊಟ್ಟಿ, ಇರುವ ಹಾರ ಹಾಕಿ ಶೃಂಗರಿಸಿದ್ದರು.

ಗೋ ಪೂಜೆ:

ಅಕ್ಕಿ, ಬೆಲ್ಲ, ಬಾಳೆಹಣ್ಣು ಮಿಶ್ರಣದಗೋಗ್ರಾಸ ಮತ್ತು ಕಡುಬನ್ನು ಗೋವುಗಳಿಗೆ ನೈವೇದ್ಯವಾಗಿ ನೀಡಿ ಕಾಲು ಪೂಜೆಯನ್ನು ಸಲ್ಲಿಸಿ ಭಕ್ತಿಯಿಂದ ಪ್ರಾರ್ಥಿಸಿದರು.

ಗ್ರಾಮಸ್ಥರು ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ಅಗ್ಸೆ ಬಾಗಿಲಿನಿಂದ ಜಾನುವಾರನ್ನು ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಿದರು. ಇನ್ನು ಹಬ್ಬದ ಹೋರಿಗಳಾದ ಚಂದ್ರಗುತ್ತಿ ಚಕ್ರವರ್ತಿ, ಚಂದ್ರಗುತ್ತಿಯ ನಾನೇ ಉಪೇಂದ್ರ, ಹಾಗೂ ವಿವಿಧ ಹೆಸರಿನ ಹೋರಿಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಜೋರಾಗಿಯೇ ಕೇಳಿ ಬರುತ್ತಿತ್ತು.

ಹಬ್ಬದ ಹಿನ್ನೆಲೆಯಲ್ಲಿಗ್ರಾಮದ ಮನೆ ಮನೆ ಬಾಗಿಲುಗಳಲ್ಲಿ ಮಾವಿನ ಎಲೆಗಳ ತೋರಣದಿಂದ ಅಲಂಕರಿಸಲಾಗಿತ್ತು. ಮನೆ ಅಂಗಳದ ಮುಂಭಾಗದಲ್ಲಿ ಬಿಡಿಸಿದ ಆಕರ್ಷಕ ರಂಗೋಲಿ ಚಿತ್ತಾರಗಳು ಗಮನ ಸೆಳೆದವು.

ರೈತರು ತಮ್ಮ ಹೊಲ-ಗದ್ದೆಗಳಲ್ಲಿ ಬೆಳೆದ ಫಸಲುತಂದುದೇವರಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ವೇಳೆ ಜನತೆ ಆಕಾಶದಲ್ಲಿ ಜಗಮಗಿಸುವ ನಕ್ಷತ್ರಗಳ ಮಧ್ಯೆ ಆಕರ್ಷಕ ಸಿಡಿಮದ್ದು ಸಿಡಿಸಿ ಸಂಭ್ರಮಿಸಿದರು.

ಉಪವಾಸ ವ್ರತಾಚರಣೆ:

ಚಂದ್ರಗುತ್ತಿ ಸಮೀಪದ ಕತವಾಯಿ ಗ್ರಾಮದಲ್ಲಿ ದೀಪಾವಳಿ ಬಲಿಪಾಡ್ಯಮಿ ದಿನದಂದು ಅನಾದಿ ಕಾಲದಿಂದಲೂ ರೂಡಿಸಿಕೊಂಡು ಬಂದ ಸಾಂಪ್ರದಾಯಕ ಪದ್ಧತಿ ಅನುಸಾರವಾಗಿ ಗ್ರಾಮಸ್ಥರು ಕಟ್ಟುನಿಟ್ಟಾಗಿ ಉಪವಾಸ ವ್ರತಾಚರಣೆ ಮಾಡಿ ಗ್ರಾಮದಲ್ಲಿರುವ ಹಾಲುಸ್ವಾಮಿ ಕಲ್ಮಠ ಅವರ ಗದ್ದುಗೆಗೆ ಲಕ್ಷ ಕರ್ಪೂರ ಬೆಳಗುವುದರ ಮೂಲಕ ವಿಶೇಷ ಪೂಜೆ ನೆರವೇರಿಸಿದರು.

ಹಬ್ಬದ ಉತ್ಸಾಹಕ್ಕೆ ಪೂರಕವಾಗಿ ಇಂದು ಜಾನುವಾರು ಸಂಖ್ಯೆ ವಿರಳ. ರಾಸಾಯನಿಕ ಬಳಕೆಯಿಂದ ಜನಾರೋಗ್ಯವೂ ಅಷ್ಟಕ್ಕಷ್ಟೆ. ಜನರ, ಕೃಷಿಯ ಆರೋಗ್ಯಕ್ಕೆ ಜಾನುವಾರು ಸಾಕಾಣಿಕೆ ಹೆಚ್ಚಿಸಲು ಪ್ರೇರಣೆ ನೀಡಲು ಸರ್ಕಾರ ಮುಂದಾಗುವುದು ಸೂಕ್ತ.

ಸುನಂದಾ ದೇಸಾಯಿ, ಚಿಂತಕಿ, ಚಂದ್ರಗುತ್ತಿ.