ಸಾರಾಂಶ
ಹಬ್ಬಗಳು ವಿವಿಧ ಕಾರಣಗಳಿಂದ ಮನದಲ್ಲಿ ಹುಟ್ಟುವ ದ್ವೇಷ, ಕೋಪ, ತಾಪವನ್ನು ತಣಿಸಿ ಪ್ರೀತಿ, ಆತ್ಮೀಯತೆ, ಸಹೋದರತೆಯನ್ನು ಹಂಚುತ್ತವೆ..
ಭಾಲ್ಕಿ: ಹಬ್ಬಗಳು ವಿವಿಧ ಕಾರಣಗಳಿಂದ ಮನದಲ್ಲಿ ಹುಟ್ಟುವ ದ್ವೇಷ, ಕೋಪ, ತಾಪವನ್ನು ತಣಿಸಿ ಪ್ರೀತಿ, ಆತ್ಮೀಯತೆ, ಸಹೋದರತೆಯನ್ನು ಹಂಚುತ್ತವೆ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಅವರು ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ, ಸಂಕ್ರಾಂತಿ ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಿದ್ದರಾಮೇಶ್ವರು ಸಕಲ ಜೀವಾತ್ಮರ ನೆಮ್ಮದಿಯ ಬದುಕಿಗಾಗಿ ಕೆರೆ, ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿಸಿಕೊಂಡು ಕರ್ಮಯೋಗಿ ಎನಿಸಿಕೊಂಡಿದ್ದರು. ಅಲ್ಲಮಪ್ರಭು ಪ್ರಭುದೇವರು ಸಿದ್ದರಾಮೇಶ್ವರರನ್ನು ಬಸವಕಲ್ಯಾಣಕ್ಕೆ ಕರೆದೊಯ್ದು ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿ ಅನುಭವ ಮಂಟಪದ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು ನಂತರ ಮಹಾಶಿವಯೋಗಿಯಾದ ಸಿದ್ದರಾಮೇಶ್ವರರು ಅನುಭವ ಮಂಟಪದ ಮೂರನೇ ಅಧ್ಯಕ್ಷರಾದರು ಎಂದು ತಿಳಿಸಿದರು.
ಜ್ಞಾನಕ್ಕೆ ಹಿರಿಯ, ಕಿರಿಯ ಎಂಬ ಭೇದವಿಲ್ಲ. ಜ್ಞಾನವುಳ್ಳವರೇ ನಿಜವಾದ ಹಿರಿಯರು. ಬೇರೆಯವರ ಮನ, ಮನೆಯನ್ನು ಕೆಡಿಸುವರು ಜೀವನದಲ್ಲಿ ಯಾವತ್ತೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎಂದು ಶರಣರು ವಚನಗಳಿಂದ ನಾವು ಅರಿಯಬಹುದು ಎಂದು ಹೇಳಿದರು.ಪ್ರವಚನಕಾರ ಸಂಜುಕುಮಾರ ಜುಮ್ಮಾ, ಶಿವಯೋಗಿ ಸಿದ್ಧರಾಮೇಶ್ವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಮುಖ್ಯ ಶಿಕ್ಷಕರಾದ ಮಹೇಶ ಮಹಾರಾಜ್, ಮಹೇಶ ಕುಲಕರ್ಣಿ, ಎಸ್ಸೆಸ್ಸೆಲ್ಸಿ ಸಂಯೋಜಕ ಪ್ರವೀಣ ಖಂಡಾಳೆ ಹಾಗೂ ಲಕ್ಷ್ಮಣ ಮೇತ್ರೆ ಇದ್ದರು.