ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ಅಹಿತರಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು. ಶಾಂತಿ ಕದಡದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ಅಹಿತರಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು. ಶಾಂತಿ ಕದಡದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹೇಳಿದರು.

ನಗರದ ಶಹರ್ ಪೊಲೀಸ್ ಠಾಣೆಯ ಆವರಣದಲ್ಲಿ ಈದ್ ಮಿಲಾದ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪೊಲೀಸ್ ಅಧಿಕಾರಿಗಳು ಮುಂಚಿತವಾಗಿಯೇ ನಿಗದಿಪಡಿಸಿದ ಮಾರ್ಗಗಳಿಗೆ ಅನುಸಾರವಾಗಿ ಮೆರವಣಿಗೆ ನಡೆಸಬೇಕು. ಕಾನೂನು ಉಲ್ಲಂಘಿಸುವ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸರ್ಕಲ್ ಇನ್ಸಪೆಕ್ಟರ್ ವೀರಾರೆಡ್ಡಿ ಮಾತನಾಡಿ, ಶಹರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶಾಂತಿ ಕದಡುವ 70 ಜನರ ಮೇಲೆ ಈಗಾಗಲೇ ಪ್ರಕರಣ ದಾಖಲಾ ಗಿದೆ. ಅಂಥವರ ಮೇಲೆ ಸದಾ ನಿಗಾ ಇಡುತ್ತೇವೆ. ಧ್ವನಿವರ್ಧಕ ಮತ್ತು ಮೆರವಣಿಗೆಗೆ ಅನುಮತಿ ಪಡೆದಿರುವ ಮುಖಂಡರು ಸಹ ಶಾಂತಿಗೆ ಭಂಗ ತರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಶಾಂತಿ ಸಭೆಗೊಸ್ಕರ ನಗರದ 200ಕ್ಕೂ ಹೆಚ್ಚು ಜನರಿಗೆ ಆಹ್ವಾನ ನೀಡಲಾಗಿದೆ. ಹಲವಾರು ಜನರು ಹಾಜರಾಗಿಲ್ಲ. ಮುಂದಿನ ಶಾಂತಿ ಸಭೆಗಳಿಗೆ ಹಾಜರಾಗುವ ವ್ಯಕ್ತಿಗಳಿಗೆ ಮಾತ್ರ ನೋಟಿಸ್ ಕಳುಹಿಸಲಾಗುವುದು. ಸಿಂಧನೂರು ತಾಲ್ಲೂಕು ಶಾಂತಿ-ಸೌಹಾರ್ದತೆಗೆ ಹೆಸರು ವಾಸಿಯಾಗಿದೆ. ಈ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.

ಸಭೆಯಲ್ಲಿ ಮುಖಂಡರಾದ ಎಂ.ಡಿ.ನದಿಮುಲ್ಲಾ, ಎಚ್.ಎನ್.ಬಡಿಗೇರ, ಶಫಿಉಲ್ಲಾ ಖಾನ್, ಸೈಯದ್ ಹುಸೇನ ಮಿಟ್ಟಿಮನಿ, ಟಿ.ಹುಸೇನಸಾಬ ಮಾತನಾಡಿದರು. ಸೈಲಾನಿ ಪಾಷ, ನಾಸಿರ ಹುಸೇನ ಚಿಟಿಗಿ, ಸುರೇಶ ಗೊಬ್ಬರಕಲ್ ಇದ್ದರು.