ಮುಸ್ಲಿಂರ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ, ಬಲಿದಾನ ಸ್ಮರಿಸುವ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುಮುಸ್ಲಿಂರ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ, ಬಲಿದಾನ ಸ್ಮರಿಸುವ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ನಗರದ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಮೆಕ್ಕಾ ಮಸೀದಿ, ಈದ್ಗಾ ಮೊಹಲ್ಲಾ ಪಕ್ಕದಲ್ಲಿರುವ ಕೌಸರ್ ಮಸೀದಿ ಸೇರಿದಂತೆ ನಗರದ ವಿವಿಧ ಮಸೀದಿಗಳಲ್ಲೂ ಮುಸ್ಲಿಂರು ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನಕ್ಕೆ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್, ಡಿವೈಎಸ್ಪಿ ಚಂದ್ರಶೇಖರ್, ಸರ್ಕಲ್ ಇನ್ಸಪೆಕ್ಟರ್ ರಾಘವೇಂದ್ರ, ನಯಾಜ್ ಅಹಮದ್, ಇರ್ಫಾನ್, ಸೈಯದ್ ಫಯಾಜ್. ಗುರುಪ್ರಸಾದ್, ಸಿಕಂದರ್ ಅವರು ಭೇಟಿ ನೀಡಿ ಮುಸ್ಲಿಂ ಸಮುದಾಯದ ಮುಖಂಡರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿ, ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಪ್ರತೀಕ. ಬಡವರಿಗೆ, ನಿರ್ಗತಿಕರಿಗೆ ದಾನ, ಧರ್ಮ ಮಾಡಲು ಅವಕಾಶ ಮಾಡಿಕೊಡುವುದೇ ಬಕ್ರೀದ್ ಹಬ್ಬದ ವಿಶೇಷತೆ ಎಂದರು. ಮನುಕುಲಕ್ಕೆ ಶಾಂತಿ ನೀಡಲಿ, ಮಳೆಯಾಗಲಿ, ಬೆಳೆಯಾಗಲಿ. ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. ಬೇರೆಯವರ ಬಗ್ಗೆ ಇರುವ ಕೆಡಕನ್ನು ನಾವೆಲ್ಲಾ ತ್ಯಾಗ ಮಾಡಬೇಕಾಗಿದೆ ಎಂದರು.ಬಕ್ರೀದ್ ಹಬ್ಬವು ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡಲಿ, ಎಲ್ಲರೂ ಕೂಡಿ ಬಾಳುವಂತಾಗಲಿ, ಉತ್ತಮ ಮಳೆ, ಬೆಳೆಯಾಗಿ ದೇಶ ಸಮೃದ್ಧಿಯಾಗಲಿ ಎಂದು ಆಶಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಬಳಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.