ಮಧುಗಿರಿ: ತಾಲೂಕಿನ ಚಿಕ್ಕಮಾಲೂರು ಗ್ರಾಪಂ ವತಿಯಿಂದ ಕೆಂಪಾಪುರ ಗ್ರಾಮದ ಹೊರವಲಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿದ್ದು, ಇದು ಕೇವಲ ಹೆಸರಿಗಷ್ಟೇ ತ್ಯಾಜ್ಯ ವಿಲೇವಾರಿ ಘಟಕವಾಗಿದ್ದು ರಾತ್ರಿಯ ಸಮಯದಲ್ಲಿ ಪುಂಡ-ಪೋಕರಿಗಳ ಅಡ್ಡೆಯಾಗಿದೆ ಮಾರ್ಪಾಟಾಗಿ ಹೊರಹೊಮ್ಮಿದೆ.
ಪ್ರತಿದಿನ ಕೆಂಪಾಪುರ ಮತ್ತು ಚಿಕ್ಕಮಾಲೂರು ಗ್ರಾಮಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿ ತಂದು ಘಟಕದ ಮುಂದೆ ಬೇಕಾಬಿಟ್ಟಿ ಡಂಪ್ ಮಾಡಲಾಗುತ್ತಿದೆ. ಸಂಗ್ರಹಿಸಿದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ಮರುಬಳಕೆ ಮಾಡದ ಕಾರಣ ಘಟಕದ ಸುತ್ತಮುತ್ತಲು ಪ್ಲಾಸ್ಟಿಕ್ ಗಳ ರಾಶಿಯೇ ತುಂಬಿಹೋಗಿದೆ.ಅಲ್ಲದೆ ಈ ಭಾಗದಲ್ಲಿ ವಾಸಿಸುವ ನಿವಾಸಿಗಳಿಗೆ ಕಸದ ವಾಸನೆ ಮೂಗಿಗೆ ಬಡಿಯುತ್ತಿದೆ. ಇದರ ನಿರ್ವಹಣೆ ಮಾಡುವವರು ಇತ್ತ ಗಮನ ಹರಿಸಿ ಸೂಕ್ತ ಕಸ ವಿಲೇವಾರಿ ಮಾಡಬೇಕೆಂದು ಈ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.ಗ್ರಾಮ ಪಂಚಾಯಿತಿ ಪಿಡಿಒಹಾಗೂ ಚಿಕ್ಕಮಾಲೂರು ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಕುರಿತು ಕ್ರಮ ಕೈಗೊಂಡಿಲ್ಲ. ಈ ತ್ಯಾಜ್ಯ ಸುರಿಯುವ ಮುಂದಿನ ರಸ್ತೆಯಲ್ಲಿ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನಾದರೂ ಕಸ ವಿಲೇವಾರಿಯನ್ನು ಸೂಕ್ತವಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸುರಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.