ಹಬ್ಬಕ್ಕೆ ಸಡಗರದ ತಯಾರಿ ನಡೆಯುತ್ತದೆ. ಎಲ್ಲರೂ ಸಂತಸದಿಂದ ಪಾಲ್ಗೊಂಡು ಅದ್ಧೂರಿಯಾಗಿ ಆಚರಿಸಿ ಸೌಹಾರ್ದತೆ ಸಾರಿದರು.
ಲಕ್ಷ್ಮೇಶ್ವರ: ವಿಶೇಷ ಶೈಲಿಯ ವಿನ್ಯಾಸದಿಂದ ಕೂಡಿದ ಉಡುಗೆ, ಸಾಂಸ್ಕೃತಿಕ ಪರಿಸರ ಹೊಂದಿದ ಸ್ಥಳದಲ್ಲಿ ವಾಸಿಸುತ್ತ ಸಂಸ್ಕೃತಿಯ ಜತೆಗೆ ಸಾಗುತ್ತಿರುವ ಬಂಜಾರ ಸಮುದಾಯದವರು ತಾಲೂಕಿನ ಹರದಗಟ್ಟಿ ತಾಂಡಾದಲ್ಲಿ ಸೌಹಾರ್ದ ಮೂಡಿಸುವ ಸಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಹಬ್ಬದ ಆಚರಣೆ ಸೊಬಗು ಸವಿಯಬೇಕಾದರೆ ಹರದಗಟ್ಟಿ ತಾಂಡಾಯತ್ತ ಮುಖಮಾಡಬೇಕು ಎನ್ನುವಂತಿತ್ತು. ಬಂಜಾರ ಸಮುದಾಯದ ತಾಂಡಾಗಳತ್ತ ಸಾಗಿದರೆ ಅಲ್ಲಿ ಪ್ರತಿ ಹಬ್ಬವೂ ವಿಶೇಷ ಆಚರಣೆಯಿಂದ ಕೂಡಿರುತ್ತದೆ. ನಾನಾ ಕೊರತೆ ನಡುವೆಯೂ ಅಲ್ಲಿ ಹುರುಪಿನ ಮನಸ್ಸುಗಳಿರುತ್ತವೆ.
ಹಬ್ಬಕ್ಕೆ ಸಡಗರದ ತಯಾರಿ ನಡೆಯುತ್ತದೆ. ಎಲ್ಲರೂ ಸಂತಸದಿಂದ ಪಾಲ್ಗೊಂಡು ಅದ್ಧೂರಿಯಾಗಿ ಆಚರಿಸಿ ಸೌಹಾರ್ದತೆ ಸಾರಿದರು. ಸೌಹಾರ್ದಕ್ಕೆ ಸಾಕ್ಷಿಯಾಗುವ ಇಂಥದೊಂದು ಹಬ್ಬ ನಾನಾ ತಾಂಡಾಗಳಲ್ಲಿ ಇತ್ತೀಚೆಗೆ ಜರುಗಿದ ಹಸಿರು ಹಬ್ಬವಾಗಿದೆ. ಬಂಜಾರ ಸಮಾಜದವರು ನಮ್ಮೊಳಗಿನ ಕಾಮ ಕ್ರೋಧಗಳು ದೂರವಾಗಲಿ ಎಂದು ನಡೆಸುವ ಆಚರಣೆಯೇ ಸಸಿ ಹಬ್ಬ.ಯುಗಾದಿ ಅಮಾವಾಸ್ಯೆ ದಿನದಿಂದ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಿಯ ಹೆಸರಲ್ಲಿ ಒಂಬತ್ತು ದಿನಗಳ ಕಾಲ ದಿನಾಲು ನಾನಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದ ಮಹಿಳೆಯರು ಶನಿವಾರ ಕೊನೆಯ ದಿನದಂದು ವಿಜೃಂಭಣೆಯಿಂದ ಗೌರಿ ಸಸಿ ಹೊಳೆಗೆ ಹೋಗುವುದು ಕಾರ್ಯಕ್ರಮ ಜರುಗಿತು.ಆಚರಣೆ ಹೇಗೆ?:
ಯುಗಾದಿ ಅಮಾವಾಸ್ಯೆ ದಿನ ಭೂಮಿತಾಯಿಗೆ ಪೂಜೆ ಸಲ್ಲಿಸಿ ಆ ಮಣ್ಣನ್ನು ಚಿಕ್ಕ ಬುಟ್ಟಿಗಳಲ್ಲಿ ಸಂಗ್ರಹಿಸಲಾಯಿತು. ನಂತರ ಬುಟ್ಟಿಯಲ್ಲಿ ಧಾನ್ಯಗಳನ್ನು ಹಾಕಲಾಯಿತು. ಅವು ಮೊಳಕೆಯೊಡೆದ ನಂತರ ನಿಗದಿತ ದಿನದಂದು ಸಾಂಪ್ರದಾಯಿಕ ದೇವರ ಹಾಡುಗಳು ಭಜನೆಯೊಂದಿಗೆ ಜಾಗರಣೆ ನಡೆಯಿತು. ಮರುದಿನ ಆ ಸಸಿಗಳಿಗೆ ಒಂದೆಡೆ ಸಾಮೂಹಿಕ ಪೂಜೆ ಸಲ್ಲಿಸಲಾಯಿತು. ಕನ್ಯೆಯರೇ ಈ ಪೂಜೆ ನಡೆಸುವುದು ವಿಶೇಷ.ಮಣ್ಣಿನಿಂದ ಗಂಡು, ಹೆಣ್ಣು ಮೂರ್ತಿಗಳನ್ನು ನಿರ್ಮಿಸಿ ಅವುಗಳನ್ನು ಪೂಜಿಸಿ ಕಾಮ, ಕ್ರೋಧ ದೂರವಾಗಲಿ ಎಂದು ಪ್ರಾರ್ಥಿಸಲಾಗುತ್ತದೆ. ಇದಕ್ಕೆ ''''ಗನಗೋರಾ'''' ಎನ್ನುತ್ತಾರೆ. ಪೂಜೆಯ ನಂತರ ಈ ಮೂರ್ತಿಗಳನ್ನು ನದಿಯಲ್ಲಿ ಹರಿಬಿಡಲಾಯಿತು.
ಸಸಿ ವಿನಿಮಯ: ಬಳಿಕ ಹಲಗೆ ನಾದ, ಹಾಡುಗಳೊಂದಿಗೆ ಹೆಜ್ಜೆ ಹಾಕುತ್ತ ಸಸಿಯೊಂದಿಗೆ ತಾಂಡಾಗಳ ಎಲ್ಲ ದೇವಸ್ಥಾನಗಳಿಗೆ ತೆರಳಿ ಅವುಗಳನ್ನು ದೇವರಿಗೆ ಸ್ಪರ್ಶಿಸಲಾಯಿತು. ತಾಂಡಾದ ಹಿರಿಯರೆಲ್ಲರೂ ಬಂದು ಪ್ರಾರ್ಥನೆ ಸಲ್ಲಿಸಿದರು. ಎಲ್ಲರೂ ಪರಸ್ಪರ ಸಸಿಗಳನ್ನು ವಿನಿಮಯ ಮಾಡಿಕೊಂಡು ಬದುಕು ಬಂಗಾರವಾಗಲಿ ಎಂದು ಶುಭ ಕೋರಿದರು. ಕನ್ಯೆಯರು ಸಸಿಗಳನ್ನು ಪಟ್ಟಗದಲ್ಲಿ ತುರಾಯಿಯಂತೆ ಇಟ್ಟುಕೊಂಡಾಗ ಆಚರಣೆಗೆ ತೆರೆ ಬೀಳುತ್ತದೆ.ತಾಂಡಾಗಳಲ್ಲಿ ಸಂಭ್ರಮ: ಅಗತ್ಯ ಸಂಬಳದ ಕೆಲಸ ಅರಸಿ ಗುಳೆ ಹೋಗುವವರಲ್ಲಿ ಜಿಲ್ಲೆಯ ಜನರಲ್ಲಿ ಬಂಜಾರರೇ ಅಧಿಕ. ಹೀಗೆ ಗುಳೆ ಹೋದ ಜನ ಮತ್ತೆ ಆಗಮಿಸಿ ತಾಂಡಾದ ಜನರ ಮೊಗದಲ್ಲಿ ಹರ್ಷ ಮೂಡಿತು. ಸಸಿ ಹಬ್ಬ ಆಚರಿಸುವ ಕಾರಣಕ್ಕೆ ಗುಳೆ ಹೋಗಿದ್ದ ಜನ ಮರಳಿ ಬಂದಿದ್ದರು. ಬಿಕೋ ಎನ್ನುತ್ತಿದ್ದ ತಾಂಡಾಗಳಲ್ಲಿ ಸಸಿ ಹಬ್ಬದ ನೆಪದಲ್ಲಿ ಜನರ ಮೆರುಗು ಕಾಣಿಸಿತು.
ಗಮನ ಸೆಳೆಯುವ ನೃತ್ಯ: ಬಂಜಾರ ಕನ್ಯೆಯರು, ಮಹಿಳೆಯರು ಹಲಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವುದನ್ನು ಸರ್ವರೂ ಕೆಲ ಕಾಲ ನಿಂತು ನೋಡುವಂತಿತ್ತು. ಹೊಸ ಬಟ್ಟೆ ಧರಿಸಿ ತಲೆ ಮೇಲೆ ಸಸಿ ಬುಟ್ಟಿ ಹೊತ್ತು ತಾಳಕ್ಕೆ ತಕ್ಕ ಹೆಜ್ಜೆ ಹಾಕಿದರು.ಬದುಕು ಸಮೃದ್ಧವಾಗಲಿ: ಸರ್ವರ ಬದುಕು ಬಂಗಾರವಾಗಲಿ ಎಂದು ಪ್ರಕೃತಿ ಮಾತೆಯನ್ನು ಪ್ರಾರ್ಥಿಸುವುದೇ ಸಸಿ ಹಬ್ಬದ ಮುಖ್ಯ ಉದ್ದೇಶ. ಉತ್ತಮ ಮಳೆಯಾಗಿ ಸರಿಯಾದ ಬೆಳೆ ಸಿಗಲಿ. ಗ್ರಾಮೀಣ ಜನರ ಬದುಕು ಸಮೃದ್ಧವಾಗಲಿ ಎಂದು ಪ್ರಾರ್ಥಿಸಲು ತಾಂಡಾದ ಎಲ್ಲ ಜನ ಈ ಹಬ್ಬದಲ್ಲಿ ಭಾಗವಹಿಸುತ್ತೇವೆ ಎಂದು ಹರದಗಟ್ಟಿ ತಾಂಡಾ ಹಿರಿಯರಾದ ಸೋಮಲಪ್ಪ ನಾಯಕ, ಜೀವಪ್ಪ ಡಾವ ತಿಳಿಸಿದರು.ಬಾಂಧವ್ಯ ಬೆಸೆಯುವ ಹಬ್ಬ: ಸಸಿ ಹಬ್ಬದ ನೆಪದಲ್ಲಿ ತಾಂಡಾದ ಎಲ್ಲ ಜನ ಒಂದೆಡೆ ಸೇರುತ್ತೇವೆ. ಇದರಿಂದ ನಮ್ಮ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಇದು ಬಾಂಧವ್ಯ ಬೆಸೆಯುವ ಹಬ್ಬವಾಗಿದೆ ಎಂದು ಹರದಗಟ್ಟಿ ತಾಂಡಾ ಯುವ ಮುಖಂಡರಾದ ಕೃಷ್ಣ ನಾಯಕ, ದೇವಪ್ಪ ಬಡಿಗೇರ ತಿಳಿಸಿದರು.