ಸಂಭ್ರಮದ ಮಳಗಿ ಮಾರಿಕಾಂಬಾದೇವಿ ಜಾತ್ರಾ ರಥೋತ್ಸವ

| Published : Mar 13 2025, 12:45 AM IST

ಸಾರಾಂಶ

ಭಾರೀ ಜನಸ್ತೋಮದೊಂದಿಗೆ ದೇವಿಯ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ದೇವತೆ ಮಾರಿಕಾಂಬಾ ದೇವಿಯ ೨೮ನೇ ಜಾತ್ರಾ ಮಹೋತ್ಸವಕ್ಕೆ ಶಾಸ್ತ್ರೋತ್ತರವಾಗಿ ಚಾಲನೆ ದೊರೆತಿದ್ದು, ಬುಧವಾರ ಭಾರೀ ಜನಸ್ತೋಮದೊಂದಿಗೆ ದೇವಿಯ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಬೆಳಿಗ್ಗೆ ದೇವಾಲಯದಿಂದ ಹೊರಟ ದೇವಿಯ ರಥೋತ್ಸವ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಪಂಚವಾದ್ಯ, ಡೊಳ್ಳು ಕುಣಿತ, ಚಂಡಿ ವಾದ್ಯ, ಗೊಂಬೆ ಕುಣಿತ, ನೃತ್ಯ ಮತ್ತು ವೇಷಭೂಷಣಗಳ ಜೊತೆಗೆ ಜಾಂಜ್ ಮೇಳ ಮುಂತಾದ ಸಾಂಸ್ಕೃತಿಕ ವೈಭವ ಹಾಗೂ ಭಕ್ತರ ಜಯ ಘೋಷದೊಂದಿಗೆ ವಿಜೃಂಭಣೆಯಿಂದ ಸಾಗಿತು.

ಮಾರ್ಗದುದ್ದಕ್ಕೂ ಸಹಸ್ರ ಭಕ್ತರು ರಥದ ಮೇಲೆ ಬಾಳೆಹಣ್ಣು, ಉತ್ತುತ್ತಿ, ದವಸ ಧಾನ್ಯ ಸೇರಿದಂತೆ ವಿವಿಧ ಹಣ್ಣು ಹಂಪಲು ಎಸೆದು ಭಕ್ತಿ ಸಮರ್ಪಿಸಿದರು. ಕೆಲ ಭಕ್ತರು ಕೋಳಿ ಮರಿಗಳನ್ನು ರಥದ ಮೇಲೆ ತೂರಿ ತಮ್ಮ ಹರಕೆ ತೀರಿಸಿದರು. ರಥ ಬೀದಿಯುದ್ದಕ್ಕೂ ಸಾಮಾಜಿಕ ಕಾರ್ಯಕರ್ತರಿಂದ ಶರಬತ್, ಮಜ್ಜಿಗೆ, ಕುಡಿಯುವ ನೀರು ಸೇರಿದಂತೆ ವಿವಿಧ ಪಾನೀಯಗಳನ್ನು ಭಕ್ತರಿಗೆ ಪೂರೈಕೆ ಮಾಡಲಾಯಿತು. ಪುರುಷರು ಮಹಿಳೆಯರು ವೃದ್ಧರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥ ಬೀದಿ ಎಂಬುದು ಜನಜಂಗುಳಿಯಿಂದ ಕೂಡಿತ್ತು.

ಮಧ್ಯಾಹ್ನ ೨ ಗಂಟೆಗೆ ಚೌತ ಮನೆ ಪ್ರವೇಶಿಸಿದ ರಥೋತ್ಸವ ಮೆರವಣಿಗೆ ದೇವಿಗೆ ಸೇವಾ ರೂಪದಲ್ಲಿ ಬಂದಂತಹ ಸೀರೆ ಮುಂತಾದ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಿತು. ಬಳಿಕ ಧಾರ್ಮಿಕ ಪೂಜಾ ವಿಧಿ ವಿಧಾನದೊಂದಿಗೆ ಜಾತ್ರಾ ಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.

ಮಾಂಗಲ್ಯ ಧಾರಣೆ:

ಇದಕ್ಕೂ ಮುನ್ನ ಮಂಗಳವಾರ ರಾತ್ರಿ ದೇವಿಯ ಪ್ರತಿಷ್ಠಾಪನಾ ಪೂಜೆ ವಿನಿಯೋಗಗಳು ಲಗ್ನ ಕಾರ್ಯಕ್ರಮ ಮಾಂಗಲ್ಯ ಧಾರಣ ಜರುಗಿತು. ದೇವಿಯ ಗದ್ದುಗೆಯ ಸುತ್ತ ಸುಂದರವಾದ ಚೌತ ಮನೆ ನಿರ್ಮಾಣ ಮಾಡಲಾಗಿದ್ದು, ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಮಾ.೧೩ರಿಂದ ೧೮ರವರೆಗೆ ಹಣ್ಣು ಕಾಯಿ, ಕಾಣಿಕೆ, ಹರಕೆ, ಬೇವಿನ ಉಡಿಗೆ, ತುಲಾಭಾರ ಮುಂತಾದ ಸೇವೆಗಳು ಜರುಗಲಿದೆ. ನಿತ್ಯ ರಾತ್ರಿ ಮನೋರಂಜನಾ ಕಾರ್ಯಕ್ರಮ ನಡೆಯಲಿವೆ ಎಂದು ದೇವಾಲಯ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾಗರಾಜ ಅಂಡಗಿ ತಿಳಿಸಿದ್ದಾರೆ.