ಬೆಂಗಳೂರಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ ಆಚರಣೆ

| Published : Aug 09 2025, 12:00 AM IST

ಸಾರಾಂಶ

ಮಹಿಳೆಯರು ಹೊಸ ಉಡುಗೆ ತೊಟ್ಟು ದೇವಿ ಮುಂದೆ ಕುಳಿತು ಸಂಕಲ್ಪ ಮಾಡಿ ವ್ರತ ಕೈಗೊಂಡಿದ್ದರು. ಮನೆಗಳಲ್ಲಿ ವರಮಹಾಲಕ್ಷ್ಮಿ ದೇವಿ ಪ್ರತಿಷ್ಠಾಪಿಸಿ, ಸೀರೆ ಉಡಿಸಿ, ಕಲಶ ಇಟ್ಟು ವಸ್ತ್ರ, ಒಡವೆ, ಧನಕನಕಾದಿಗಳನ್ನಿಟ್ಟಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಭಕ್ತಿ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು. ಮನೆ ಮನೆಗಳಲ್ಲಿ ಲಕ್ಷ್ಮಿದೇವಿ ಪ್ರತಿಷ್ಠಾಪಿಸಿ ಪೂಜಿಸಿದರೆ, ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಿತು.

ಮನೆಗಳು, ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಹಬ್ಬದ ಕಳೆ ಕಟ್ಟಿತ್ತು. ಮನೆಯೆದುರು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಬಾಗಿಲುಗಳಿಗೆ ತಳಿರು ತೋರಣಗಳಿಂದ ಅಲಂಕರಿಸಿ ದೇವರ ಮನೆಯನ್ನು ಹೂವು-ಹಣ್ಣುಗಳಿಂದ ಅಲಂಕರಿಸಿದ್ದರು. ದೇವಸ್ಥಾನಗಳಲ್ಲಿ ವಿಶೇಷವಾಗಿ ದೇವಿಯ ಮಂದಿರಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ, ಲಲಿತಾ ಸಹಸ್ರನಾಮ, ಭಜನೆ, ಕುಂಕುಮಾರ್ಚನೆಗಳು ನೆರವೇರಿದವು.

ನಗರದೆಲ್ಲೆಡೆ ತಲೆ ಎತ್ತಿದ್ದ ತಾತ್ಕಾಲಿಕ ಮಾರುಕಟ್ಟೆಗಳಲ್ಲಿ ಹಬ್ಬದ ದಿನವೂ ಗ್ರಾಹಕರ ಖರೀದಿ ಜೋರಾಗಿತ್ತು. ತರಕಾರಿ, ಹೂವು, ಹಣ್ಣು, ಪೂಜಾ ಸಾಮಗ್ರಿ ಬೆಲೆ ಹೆಚ್ಚಳ ಮಧ್ಯೆಯೂ ಖರೀದಿಗೆ ಜನರು ಮುಗಿಬಿದ್ದಿದ್ದರು. ವರಮಹಾಲಕ್ಷ್ಮಿ ಹಬ್ಬ ಮಹಿಳೆಯರ ಅಚ್ಚುಮೆಚ್ಚಿನ ಹಬ್ಭ. ಹೀಗಾಗಿ, ಹೂವು, ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್​ಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಮಹಿಳೆಯರು ಹೊಸ ಉಡುಗೆ ತೊಟ್ಟು ದೇವಿ ಮುಂದೆ ಕುಳಿತು ಸಂಕಲ್ಪ ಮಾಡಿ ವ್ರತ ಕೈಗೊಂಡಿದ್ದರು. ಮನೆಗಳಲ್ಲಿ ವರಮಹಾಲಕ್ಷ್ಮಿ ದೇವಿ ಪ್ರತಿಷ್ಠಾಪಿಸಿ, ಸೀರೆ ಉಡಿಸಿ, ಕಲಶ ಇಟ್ಟು ವಸ್ತ್ರ, ಒಡವೆ, ಧನಕನಕಾದಿಗಳನ್ನಿಟ್ಟಿದ್ದರು. ಜತೆಗೆ ಫಲವಸ್ತುಗಳು, ಅರಶಿನ ಕುಂಕುಮ, ನೈವೇದ್ಯಕ್ಕೆ ಹಣ್ಣು, ತರಕಾರಿ, ಬಗೆಬಗೆಯ ತಿನಿಸುಗಳನ್ನು ತಯಾರಿಸಿ ಮಹಾಲಕ್ಷ್ಮಿ ದೇವಿಯ ಮುಂದಿಟ್ಟು ಪೂಜಿಸಿದರು. ಹಲವೆಡೆ ಸಂಜೆ ವರಮಹಾಲಕ್ಷ್ಮಿಗೆ ಪೂಜೆ ನೆರವೇರಿಸಲಾಯಿತು. ಮುಖ್ಯವಾಗಿ ಸಂಪ್ರದಾಯದಂತೆ ಸಂಜೆ ಹೊತ್ತು ಮುತ್ತೈದೆಯರನ್ನು ಅರಶಿನ ಕುಂಕುಮಕ್ಕೆ ಕರೆದು ಬಾಗಿನ ನೀಡಿದರು.

ನಗರದ ಬನಶಂಕರಿ ದೇವಿ ದೇವಸ್ಥಾನ, ಪುಟ್ಟೇನಹಳ್ಳಿ ಲಕ್ಷ್ಮೀ ದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಲಲಿತಾ ಸಹಸ್ರನಾಮ, ಭಜನೆ, ಕುಂಕುಮಾರ್ಚನೆಗಳು ನೆರವೇರಿದವು.