ಸಾರಾಂಶ
- ಹೆಣ್ಣು ಮಗುವಿನ ಪ್ರಾಮುಖ್ಯತೆ ಅರಿವು ಕಾರ್ಯಕ್ರಮದಲ್ಲಿ ನ್ಯಾ.ಮಹಾವೀರ ಎಂ. ಕರೆಣ್ಣವರ್ ಹೇಳಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಹೆಣ್ಣಿರಲಿ, ಗಂಡಿರಲಿ ಸಂವಿಧಾನಾತ್ಮಕವಾಗಿ ಜೀವಿಸುವ ಹಾಗೂ ಶಿಕ್ಷಣ ಪಡೆಯುವ ಹಕ್ಕು ಸಮಾನವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ್ ಎಂ. ಕರೆಣ್ಣವರ ಹೇಳಿದರು.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಲಲಿತಾ ಇಂಟರ್ ನ್ಯಾಷನಲ್ ಶಾಲೆ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಮಿಷನ್ ಶಕ್ತಿ ಯೋಜನೆಯ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಅಂತರ ರಾಷ್ತ್ರೀಯ ಹೆಣ್ಣುಮಕ್ಕಳ ದಿನಾಚರಣೆ ಪ್ರಯುಕ್ತ ಹೆಣ್ಣು ಮಗುವಿನ ಪ್ರಾಮುಖ್ಯತೆ ಕುರಿತು ಹಮ್ಮಿಕೊಳ್ಳಲಾಗಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹೆಣ್ಣು ಭ್ರೂಣಹತ್ಯೆ, ಗಂಡು ಮಗು ಬೇಕು ಎಂಬ ಕುಟುಂಬದವರ ಹಂಬಲ, ಇವೆಲ್ಲ ಪರಿಸರಕ್ಕೆ ವಿರುದ್ಧ ಚಟುವಟಿಕೆಯಾಗಿದೆ. ಅಪ್ರಾಪ್ತ ವಯಸ್ಸಿನ ಗಂಡು ಮತ್ತು ಹೆಣ್ಣುಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಮಾಡುವುದರ ಕುರಿತು ಪೋಕ್ಸೋ ಕಾಯ್ದೆಯಲ್ಲಿನ ಕಾನೂನುಗಳ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಈ ರೀತಿಯ ಯಾವುದಾದರೂ ಪ್ರಕರಣಗಳು ಕಂಡುಬಂದಲ್ಲಿ 1098 ಮಕ್ಕಳ ಸಹಾಯವಾಣಿಗೆ, 112 ಏಕ ತುರ್ತು ಸಹಾಯವಾಣಿಗೆ ಕರೆ ಮಾಡಬಹುದು. ಆ ಮೂಲಕ ಅಪಾಯದಲ್ಲಿರುವ ಮಕ್ಕಳನ್ನು ರಕ್ಷಣೆ ಮಾಡಬಹುದು ಎಂದು ತಿಳಿಸಿದರು.
ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕಾನೂನುಗಳು ಇರುವುದರ ಕುರಿತಾಗಿ ಮಾಹಿತಿ ನೀಡಿದರು. ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳಿಗೆ ಉತ್ತಮ ಸ್ಥಾನಮಾನ ನೀಡಲಾಗಿದೆ. ಆದರೆ ಸುತ್ತ ಮುತ್ತಲಿನ ದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರಾಮುಖ್ಯತೆ ನೀಡಿಲ್ಲ. ಆದ್ದರಿಂದ ಆ ದೇಶಗಳಲ್ಲಿ ಅಭಿವೃದ್ಧಿ ಆಗಿಲ್ಲ. ಬೇರೆ ದೇಶಗಳು ಹಿಂದುಳಿಯುವುದಕ್ಕೆ ಇದು ಒಂದು ಪ್ರಮುಖ ಕಾರಣವಾಗಿದೆ ಎಂದ ಅವರು, ಅಂತರ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲೆ ವಿದ್ಯಾರ್ಥಿನಿಯರಿಗೆ ಕಾರ್ಯಕ್ರಮದ ಕುರಿತಾಗಿ 2 ಪುಟಗಳ ಸಾರಾಂಶವನ್ನು ಬರೆದು ತಮಗೆ ಕಳುಹಿಸಿಕೊಡುವಂತೆ ತಿಳಿಸಿದರು.ಜಿಲ್ಲಾ ವಕೀಲರ ಸಂಘದ ಮಹಿಳಾ ಪ್ರತಿನಿಧಿ ಸದಸ್ಯರಾದ ಭಾಗ್ಯಲಕ್ಷ್ಮೀ ಮಹಿಳೆಯರ ಮತ್ತು ಮಕ್ಕಳ ಸಂವಿಧಾನಾತ್ಮಕ ಹಕ್ಕುಗಳ ಕುರಿತು ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿ, ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸ್ತನ್ಯಪಾನ ಮೂಲಕ ಮಕ್ಕಳ ಶಾರೀರಿಕ, ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಭೂಮಿತಾಯಿ ಸಕಲ ಜೀವಿಗಳಿಗೆ ಬದುಕಲು ನೆಲ, ಜಲ, ಗಾಳಿ ನೀಡುತ್ತದೆ. ಇದೇ ಸ್ಥಾನ ಹೆಣ್ಣು ಮಕ್ಕಳಿಗಿದ್ದು, ಹೆಣ್ಣುಮಕ್ಕಳ ಶಿಕ್ಷಣ, ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಮಗು ತಾಯಿ ಗರ್ಭದಲ್ಲಿರುವಾಗ ಮತ್ತು ನಂತರ ಬೆಳವಣಿಗೆಯಾಗಲು ತಾಯಿಯ ಆರೈಕೆ ಅತ್ಯಗತ್ಯವಾಗಿದೆ. ಈ ಹಂತದಲ್ಲಿ ತಾಯಿಗೆ ಪೌಷ್ಠಿಕ ಆಹಾರ ಬಹಳ ಮುಖ್ಯ. ಮಗು ಹುಟ್ಟುವ ಮುನ್ನ, ನಂತರದ ಬೆಳವಣಿಗೆ ಹಾಗೂ ತನ್ನ ವಿದ್ಯಾಭ್ಯಾಸ ಮಾಡಲು ತಾಯಿಯ ಶ್ರಮ ಸಾಕಷ್ಠಿದೆ. ಮಕ್ಕಳ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ, 18 ವರ್ಷದೊಳಗಿನ ಹೆಣ್ಣುಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ ಮತ್ತು ಚಂಚಲತೆಯಿಂದ ಕೂಡಿದೆ. ಈ ಸಮಯದಲ್ಲಿ ಮನಸ್ಸನ್ನು ನಾವೇ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದರು.ಅತಿ ಹೆಚ್ಚು ಮೊಬೈಲ್ ಬಳಕೆ ಮಾಡಬಾರದು. ಹೆಣ್ಣು ಯಾವಾಗಲೂ ನಗುನಗುತ್ತಾ ಇರಬೇಕು. ಸ್ತ್ರೀಯರನ್ನು ಗೌರವಿಸಬೇಕು. ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ತ್ರವಾಗಿದ್ದು, ಈ ರಾಷ್ಟ್ರದಲ್ಲಿ ಹೆಣ್ಣುಮಕ್ಕಳಿಗೆ ಶೈಕ್ಷಣಿಕವಾಗಿ ಪೂರಕವಾದ ವಾತಾವರಣ ಸೃಷ್ಠಿಸಿ, ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ರಾಜಕೀಯ ಆರ್ಥಿಕ ಕ್ಷೇತ್ರದಲ್ಲಿ ನಿರ್ದಿಷ್ಟ ಮೀಸಲಾತಿ ನೀಡಲಾಗಿದೆ. ಜಾತಿ ಅಸಮಾನತೆ ಉಂಟಾಗಬಾರದು ಎಂದು ಸಂವಿಧಾನದಲ್ಲಿ ಪ್ರಮುಖ ಮಿಸಲಾತಿ ನೀಡಲಾಗಿದೆ. ಪ್ಲಾಸ್ಟಿಕ್‌ಮುಕ್ತ ರಾಷ್ಟ್ರವನ್ನು ಮಾಡುವುದರಲ್ಲಿ ಎಲ್ಲ ವಿದ್ಯಾರ್ಥಿನಿಯರು ಕೈ ಜೋಡಿಸಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಎಸ್. ಅಭಿಕುಮಾರ, ಪ್ರಾಚಾರ್ಯ ಕೆ.ವಿ. ಮಣಿಕಂಠನ್, ಲಲಿತಾ ಇಂಟರ್ ನ್ಯಾಷನಲ್ ಶಾಲೆ ಆಡಳಿತಾಧಿಕಾರಿ ಜಿ.ಪಿ.ಸುರೇಶ, ಶಾಲೆಯ ವಿದ್ಯಾರ್ಥಿನಿಯರು ಹಾಜರಿದ್ದರು.- - - -16ಕೆಡಿವಿಜಿ38ಃ:
ದಾವಣಗೆರೆಯಲ್ಲಿ ನಡೆದ ಅರಿವು ಕಾರ್ಯಾಗಾರವನ್ನು ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ್ ಉದ್ಘಾಟಿಸಿದರು.