ಬಡತನದ ಒಡಲ ಬೇಗೆಯನ್ನೂ ಲೆಕ್ಕಿಸದೆ ದುಡಿದ ಫ.ಗು. ಹಳಕಟ್ಟಿ

| Published : Jul 03 2024, 12:17 AM IST

ಸಾರಾಂಶ

ವಚನಗಳ ವಿಸ್ತಾರವಾದ ಪ್ರಚಾರ ಪ್ರಸಾರಕ್ಕೆ ಬಡತನದ ಒಡಲ ಬೇಗೆಯನ್ನೂ ಲೆಕ್ಕಿಸದೆ ದುಡಿದ ವಚನ ಗುಮ್ಮಟ ಫ.ಗು.ಹಳಕಟ್ಟಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.

ಹಾನಗಲ್ಲ: ವಚನಗಳ ವಿಸ್ತಾರವಾದ ಪ್ರಚಾರ ಪ್ರಸಾರಕ್ಕೆ ಬಡತನದ ಒಡಲ ಬೇಗೆಯನ್ನೂ ಲೆಕ್ಕಿಸದೆ ದುಡಿದ ವಚನ ಗುಮ್ಮಟ ಫ.ಗು.ಹಳಕಟ್ಟಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ ಫ.ಗು. ಹಳಕಟ್ಟಿ ಅವರ ಜನ್ಮದಿನ ಹಾಗೂ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಂಡಿತರ ಸ್ವತ್ತಾಗಿದ್ದ ಸಾಹಿತ್ಯವನ್ನು ಸಾಮಾನ್ಯರ ಸ್ವತ್ತಾಗಿಸಿದ, ಜನ ಭಾಷೆಯನ್ನು ದೇವಭಾಷೆ ಮಾಡಿದ ವಚನ ಸಾಹಿತ್ಯವನ್ನು ಮನೆ ಮನಸ್ಸು ಸೇರಿದಂತೆ ಎಲ್ಲರ ಮನದಾಳಕ್ಕೆ ತಲುಪಿಸಿದ ಶ್ರೇಯಸ್ಸು ಫ.ಗು. ಹಳಕಟ್ಟಿ ಅವರದಾಗಿದೆ. ಕನ್ನಡ ಭಾಷೆಯ ಪ್ರೀತಿಯನ್ನು ಮೆರೆದ ಅವರು ವಚನ ಸಾಹಿತ್ಯವನ್ನು ಹುಡುಕಿ ಬರೆದು, ಮುದ್ರಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅಚ್ಚಳಿಯದ ಸಾಹಿತ್ಯ ನೀಡಿದರು. ಮನೆ ಮಾರಿಕೊಂಡು ಮುದ್ರಣಾಲಯ ತೆರೆದು ವಚನ ಸಾಹಿತ್ಯ ಮುದ್ರಿಸಿದರು. ಇದ್ದ ಮನೆ ಮಾರಿಕೊಂಡು ಜೀವನವಿಡೀ ಬಾಡಿಗೆ ಮನೆಯಲ್ಲೇ ಕಳೆದರು. ಸ್ವಂತ ಜೀವನದ ಸುಖವನ್ನು ಲಕ್ಷಿಸದೇ ವಚನಗಳ ಮೂಲಕ ಸಮಾಜದ ಸುಖಕ್ಕೆ ಉತ್ತಮ ಸಂದೇಶದ ವಚನಗಳನ್ನು ಪರಿಚಯಿಸಿದರು. ಎಲ್ಲ ಕಾಲಕ್ಕೂ ಸಲ್ಲುವ ವಚನಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಹಳಕಟ್ಟಿ ಅವರು ವಚನ ಗುಮ್ಮಟ ಎಂದರು.ಉಪನ್ಯಾಸ ನೀಡಿದ ಶ್ರೀಕುಮಾರೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಿರಂಜೀವಿ ಆಡೂರ, ವಚನ ಸಾಹಿತ್ಯಕ್ಕಾಗಿ ಅರ್ಪಿಸಿಕೊಂಡು ಸೇವೆ ಸಲ್ಲಿಸಿದ ಫ.ಗು. ಹಳಕಟ್ಟಿ ಹಣ ಅಂತಸ್ತಿನ ದಾಸರಾಗಲಿಲ್ಲ. ಕನ್ನಡ ಸಾಹಿತ್ಯದ ಉಳಿವಿಗಾಗಿ ದಾಸರಂತೆ ಕೆಲಸ ಮಾಡಿದರು. ಅವರ ಇಡೀ ಬದುಕಿನ ಯಶಸ್ಸು ತಾಳೆಗರಿಗಳಿಂದ ವಚನಗಳನ್ನು ಅರ್ಥ ಲೋಪವಾಗದಂತೆ ಅಚ್ಚುಕಟ್ಟಾಗಿ ನೀಡಿರುವುದು. ಇಷ್ಟೊಂದು ಸೇವೆ ಅವರಿಂದ ಆಗದಿದ್ದರೆ ವಚನ ಸಾಹಿತ್ಯದ ಒಟ್ಟು ಮೊತ್ತ ನಮಗೆ ಲಭ್ಯವಾಗುತ್ತಿರಲಿಲ್ಲ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ನಿರಂಜನ ಗುಡಿ ಮಾತನಾಡಿ, ವಚನ ಸಾಹಿತ್ಯ ನಮ್ಮ ಮನೆ ಮನಸ್ಸನ್ನು ಬೆಳಗುವ ಅಪ್ಪಟ ಸಾಹಿತ್ಯ. ಎಲ್ಲ ಕಾಲಕ್ಕೂ ಸಲ್ಲುವ ವಚನಗಳು ಬದುಕಿನ ಎಲ್ಲ ಸಮಸ್ಯೆಗಳಿಗೂ ಉತ್ತರ ನೀಡುವ ಶಕ್ತಿ ಹೊಂದಿವೆ. ವಚನಗಳು ಮಕ್ಕಳನ್ನು ಮುಟ್ಟಬೇಕು. ನಾಳೆಗಾಗಿ ಒಳ್ಳೆಯ ಬದುಕು ಕಟ್ಟಿಕೊಳ್ಳಲು ವಚನಗಳು ಅತ್ಯಂತ ಶ್ರೇಷ್ಠ ಮಾರ್ಗದರ್ಶಕ ಸಂಪನ್ಮೂಲ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಪ್ರೊ.ಸಿ.ಮಂಜುನಾಥ, ಗೌರವಾಧ್ಯಕ್ಷ ರವಿಬಾಬು ಪೂಜಾರ, ಉಪಾಧ್ಯಕ್ಷ ಅಶೋಕ ದಾಸರ, ಕಾರ್ಯದರ್ಶಿ ಎಸ್.ವಿ.ಹೊಸಮನಿ, ಪ್ರವೀಣ ಬ್ಯಾತನಾಳ, ಸಂತೋಷ ದೊಡ್ಡಮನಿ, ಎಸ್.ವಿ.ಮಠದ, ಅಕ್ಕಮ್ಮ ಶೆಟ್ಟರ, ಅಕ್ಷತಾ ಶೆಟ್ಟರ, ಬಿ.ಆರ್.ಪಾಟೀಲ, ಶ್ರೀದೇವಿ ಕೋಟಿ, ದೀಪಾ ಸಾಲವಟಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.