ಅದ್ಧೂರಿ ಗಣೇಶೋತ್ಸವಕ್ಕೆ ಫೈಬರ್‌ ಗಣಪ ಲಭ್ಯ!

| Published : Sep 07 2024, 01:32 AM IST

ಅದ್ಧೂರಿ ಗಣೇಶೋತ್ಸವಕ್ಕೆ ಫೈಬರ್‌ ಗಣಪ ಲಭ್ಯ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿ ಗಣೇಶೋತ್ಸವಕ್ಕಾಗಿಯೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಬೃಹತ್‌ ಗಾತ್ರದ ‘ಫೈಬರ್‌ ಗಣೇಶ ಮೂರ್ತಿ’ಗಳು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿ ಗಣೇಶೋತ್ಸವಕ್ಕಾಗಿಯೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಬೃಹತ್‌ ಗಾತ್ರದ ‘ಫೈಬರ್‌ ಗಣೇಶ ಮೂರ್ತಿ’ಗಳು.

ರಾಸಾಯನಿಕ ಬಣ್ಣ, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಯ ತಯಾರಿಕೆ ಸಂಪೂರ್ಣವಾಗಿ ನಿಷೇಧಿಸಿರುವುದರಿಂದ ಅದ್ಧೂರಿ ಗಣೇಶೋತ್ಸವದ ಆಚರಣೆಗೆ ಸ್ವಲ್ಪ ಹಿನ್ನೆಡೆಯಾಗಿದೆ. ದೊಡ್ಡ ಗಾತ್ರದ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದು, ಶೋಭಾಯಾತ್ರೆ ನಡೆಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಸಮಸ್ಯೆಗೆ ಸದ್ಯಕ್ಕೆ ಫೈಬರ್‌ ಗಣೇಶ ಮೂರ್ತಿಗಳೇ ಪರಿಹಾರವಾಗಿದೆ.

ಪಿಒಪಿ ಮೂರ್ತಿಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಗಾತ್ರದ ಮಣ್ಣಿನ ಗಣೇಶ ಮೂರ್ತಿಗಳನ್ನು ನಿರ್ಮಿಸುವುದಕ್ಕೆ ಕೌಶಲ್ಯವಿರುವ ಕಲಾವಿದರು ದೊರೆಯುತ್ತಿಲ್ಲ. 3 ರಿಂದ 5 ಅಡಿವರೆಗೆ ಮಾತ್ರ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಲು ಸಾಧ್ಯ. ಅದಕ್ಕಿಂತ ದೊಡ್ಡ ಗಾತ್ರದ ಮೂರ್ತಿ ಸಾಧ್ಯವಾಗುತ್ತಿಲ್ಲ. ಆದರೆ, ಗಣೇಶ ಪ್ರತಿಷ್ಠಾಪನೆ ಸಮಿತಿಗಳು ಬೃಹತ್‌ ಗಾತ್ರದ ಮೂರ್ತಿಗಳ ಬೇಡಿಕೆ ಇಡುತ್ತಾರೆ. ದೊಡ್ಡ ಗಾತ್ರದ ಗಣೇಶ ಮೂರ್ತಿಗಳು ಇಲ್ಲ ಎಂದರೆ ಬೇಸರಗೊಳ್ಳುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಗೊಳ್ಳಬೇಕು. ಜತೆಗೆ, ಗಣೇಶ ಪ್ರತಿಷ್ಠಾಪಿಸುವವರ ಉತ್ಸಾಹವೂ ಕಡಿಮೆ ಆಗಬಾರದು ಎಂಬ ಕಾರಣಕ್ಕೆ ಈ ಉಪಾಯವನ್ನು ನಗರದ ಆರ್‌.ವಿ ರಸ್ತೆಯ ವಿನಾಯಕ ಆ್ಯಂಡ್‌ ಕೋ ಸಂಸ್ಥೆಯ ಗಣೇಶ ಮೂರ್ತಿ ತಯಾರಕ ಕಂಡುಕೊಂಡಿದ್ದಾರೆ.

5 ರಿಂದ 18 ಅಡಿ ಎತ್ತರದ ಫೈಬರ್‌ ಗಣೇಶ:

ಐದು ಅಡಿಯಿಂದ 18 ಅಡಿವರೆಗೆ ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಮೊದಲ ಬಾರಿ ಆಗಿರುವುದರಿಂದ ಪ್ರಾಯೋಗಿಕವಾಗಿ ಸದ್ಯಕ್ಕೆ ಕೇವಲ 50 ಫೈಬರ್ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. ಈಗಾಗಲೇ 10- 15 ಫೈಬರ್‌ ಗಣೇಶ ಮೂರ್ತಿಗಳನ್ನು ವಿವಿಧ ಸಂಘ-ಸಂಸ್ಥೆಗಳು ಬುಕ್‌ ಮಾಡಿಕೊಂಡಿದ್ದಾರೆ. ಫೈಬರ್‌ ಗಣೇಶ ಮೂರ್ತಿಗಳೊಂದಿಗೆ 3 ಅಡಿಯ ಮಣ್ಣಿನ ಮೂರ್ತಿಯನ್ನು ನೀಡಲಾಗುತ್ತದೆ. ಎರಡೂ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಶೋಭಾ ಯಾತ್ರೆ ಮುಗಿದ ಮೇಲೆ ಮಣ್ಣಿನ ಮೂರ್ತಿಯನ್ನು ಮಾತ್ರ ವಿಸರ್ಜನೆ ಮಾಡಲಾಗುತ್ತದೆ. ಫೈಬರ್‌ ಮೂರ್ತಿಗೆ ಮೂರು ಬಿಂದಿಗೆ ನೀರು ಸುರಿಯುವ ಮೂಲಕ ಮುಕ್ತಿ ನೀಡಲಾಗುತ್ತದೆ.

ಫೈಬರ್‌ ಮೂರ್ತಿ ಬಾಡಿಗೆಗೆ ಮಾತ್ರ

ಫೈಬರ್‌ ಗಣೇಶ ಮೂರ್ತಿಗಳನ್ನು ಬಾಡಿಗೆಗೆ ಮಾತ್ರ ನೀಡಲಾಗುತ್ತದೆ. ಐದು ಅಡಿ ಫೈಬರ್‌ ಗಣೇಶಕ್ಕೆ ದಿನಕ್ಕೆ 3 ರಿಂದ 5 ಸಾವಿರ ರುಪಾಯಿ ದರ ನಿಗದಿ ಪಡಿಸಲಾಗಿದೆ. 14 ಅಡಿ ಮೂರ್ತಿಗಳಿಗೆ ದಿನಕ್ಕೆ ₹30 ಸಾವಿರ ಬಾಡಿಗೆ ನಿಗದಿ ಪಡಿಸಲಾಗಿದೆ. ಠೇವಣಿ ರೂಪದಲ್ಲಿ ಒಂದರಿಂದ ಎರಡು ಲಕ್ಷ ರು. ಚೆಕ್‌ ಪಡೆಯಲಾಗುವುದು. ಫೈಬರ್‌ ಮೂರ್ತಿ ವಾಪಸ್ ನೀಡಿ ಬಾಡಿಗೆ ಕೊಟ್ಟ ಬಳಿಕ ಚೆಕ್‌ ವಾಪಾಸ್‌ ಮಾಡಲಾಗುವುದು. ಫೈಬರ್ ಗಣೇಶ ಮೂರ್ತಿಗಳಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ ಎಂದು ಫೈಬರ್‌ ಗಣೇಶ ತಯಾರಕ ಎಂ.ಶ್ರೀನಿವಾಸ್‌ ಹೇಳಿದ್ದಾರೆ.

ಕಾರ್ಗಿಲ್‌, ಅನ್ನಭಾಗ ವಿಶೇಷ ಮೂರ್ತಿ

ಈ ಬಾರಿ ಗಣೇಶ ಹಬ್ಬಕ್ಕಾಗಿ ಕಾರ್ಗಿಲ್ ವಿಜಯಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾರ್ಗಿಲ್‌ ಯುದ್ಧದ ಮಡಿದ ಭಾರತದ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಭಾರತೀಯ ಸೈನಿಕರು ಹಾಗೂ ಯೋಧರ ಉಡುಪು ತೊಟ್ಟು ಕೈಯಲ್ಲಿ ಭಾರತ ಧ್ವಜ ಹಿಡಿದ ಪ್ರಧಾನಿಯ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.

ಜತೆಗೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ರಾಜ್ಯ ಜನರಿಗೆ ನೀಡಲಾದ ಅನ್ನಭಾಗ್ಯ ಯೋಜನೆಯ ಕುರಿತು ಕಲಾಕೃತಿಗಳನ್ನು ತಯಾರಿಸಲಾಗಿದೆ. ಈ ಕಲಾಕೃತಿಗಳನ್ನು ಕೇವಲ ಜನ ಜಾಗೃತಿಗಾಗಿ ತಯಾರಿಸಲಾಗಿದ್ದು, ಮಾರಾಟ ಮಾಡುತ್ತಿಲ್ಲ ಎಂದು ಶ್ರೀನಿವಾಸ್‌ ತಿಳಿಸಿದ್ದಾರೆ.

ಪರಿಸರ ಜಾಗೃತಿ ಗಣಪ

ವಯನಾಡಿನಲ್ಲಿನಾದ ಗುಡ್ಡ ಕುಸಿತ, ಉತ್ತರ ಕನ್ನಡ- ದಕ್ಷಿಣ ಕನ್ನಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಆದ ಗುಡ್ಡ ಕುಸಿತ, ಸೇತುವೆಗಳು ಬಿದ್ದಿರುವುದು, ರಸ್ತೆಗಳು ಕೊಚ್ಚಿಹೋಗಿರುವುದು ಹೀಗೆ ನಾನಾ ಘಟನೆಗಳು ಸಂಭವಿಸಿವೆ. ಇದಕ್ಕೆ ಮನುಷ್ಯನೇ ಕಾರಣನಾಗಿದ್ದಾನೆ. ಹೀಗಾಗಿ, ಪರಿಸರದ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಯಶವಂತಪುರದ ಗಣೇಶ ಮೂರ್ತಿ ತಯಾರಕ ಆನಂದ್‌ ಈ ಬಾರಿ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಯುವ ಗಣೇಶ ಮೂರ್ತಿ ತಯಾರಿಸಿದ್ದಾರೆ.

4 ಅಡಿ ಗಣೇಶ, 2 ಅಡಿಯ ಭೂಮಿ, 5 ಅಡಿಯ ಭಾರತದ ಭೂಪಟ, ಶಿವ-ಪಾರ್ವತಿ ಸೇರಿದಂತೆ ಸುಂದರ ಚಿತ್ರಣವನ್ನು ತಯಾರಿಸಿದ್ದಾರೆ. ಇದರಲ್ಲಿ ತಿರುಗುವ ಭೂಮಿ, ಗಣೇಶನೂ ಒಂದು ಕೈಯಲ್ಲಿ ಭೂಮಿಗೆ ನೀರು ಹಾಕುವುದು, ಅದರಿಂದ ಗಿಡ ಬೆಳೆಯುವುದು, ಮತ್ತೊಂದು ಕೈಯಲ್ಲಿ ಚಂದ್ರ ಹಿಡಿರುವುದು, ಹಿಂದಿನ ಬಲ ಕೈಯಲ್ಲಿ ಭಾರತದ ತ್ರಿವರ್ಣ ಧ್ವಜ, ಎಡಗೈನಲ್ಲಿ ಸೂರ್ಯ ಹಿಡಿದಿರುವುದು, ಗಣೇಶ ಹಿಂಭಾಗದಲ್ಲಿ ಭಾರತದ ಭೂಪಟ. ಇದಕ್ಕೆಲ್ಲಾ ಶಿವ-ಪಾರ್ವತಿ ಬೆನ್ನೆಲುಬಾಗಿ ನಿಂತಿದ್ದಾರೆ.

ವಿವಿಧ ಗಣಪ

ಗದೆಯ ಮೇಲೆ ನಿಂತಿರುವ ನಾಟ್ಯ ಗಣಪ, ಓಂ ಗಣೇಶ ಸೇರಿದಂತೆ ಬಾತುಕೋಳಿ, ಇಲಿ, ನವಿಲು ಮೇಲಿನ ಗಣಪತಿ, ಸಿಂಹಾಸನ ಏರಿದ ಗಣೇಶ, ಉಯ್ಯಾಲೆ ಮೇಲೆ ಕುಳಿತಿರುವ ಗಣೇಶ, ರಾಮ ಗಣಪತಿ, ಕೊಳಲು ಹಿಡಿದಿರುವ ಕೃಷ್ಣ ಗಣೇಶ, ಮುತ್ತುಗಳನ್ನು ಪೋಣಿಸಿ ವಿನ್ಯಾಸಗೊಳಿಸಿರುವ ಗಣೇಶ, ಹೀಗೆ ವಿವಿಧ ರೂಪದ ಗಣಪತಿ ಮೂರ್ತಿಗಳು ಬೆಂಗಳೂರಿನ ಗಣೇಶೋತ್ಸವದ ಈ ಬಾರಿಯ ಆಕರ್ಷಣೆಯಾಗಿವೆ.