ಸಾಲಿಗ್ರಾಮ, ಕೆ.ಆರ್. ನಗರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ದತೆ

| Published : Mar 23 2024, 01:05 AM IST / Updated: Mar 23 2024, 01:06 AM IST

ಸಾಲಿಗ್ರಾಮ, ಕೆ.ಆರ್. ನಗರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ದತೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲಿಗ್ರಾಮ ತಾಲೂಕಿನ ಮಿರ್ಲೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಭೇರ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಚುಂಚನಕಟ್ಟೆ ಆದಿ ಚುಂಚನಗಿರಿ ಬಾಲಜಗತ್ ಪ್ರೌಢಶಾಲೆ, ಸಾಲಿಗ್ರಾಮ ಪದವಿ ಪೂರ್ವ ಕಾಲೇಜು ಮತ್ತು ಹನಸೋಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

2023-24ನೇ ಸಾಲಿನ ವಾರ್ಷಿಕ ಪರೀಕ್ಷೆ ಮಾ. 25 ರಿಂದ ಆರಂಭವಾಗಲಿದ್ದು, ಈ ಪರೀಕ್ಷೆಗೆ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕುಗಳಿಂದ ಮೂರು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಕೃಷ್ಣಪ್ಪ ಹೇಳಿದರು.

ಎರಡು ತಾಲೂಕು ವ್ಯಾಪ್ತಿಯಲ್ಲಿ 11 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಈಗಾಗಲೇ ಎಲ್ಲಾ ಸಕಲ ಸಿದ್ದತೆಗಳನ್ನು ಕೈಗೊಳ್ಳುವುದರ ಜತೆಗೆ ಪರೀಕ್ಷಾ ಕಾರ್ಯಕ್ಕೆ ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ತಾಲೂಕಿನ ಹೆಬ್ಬಾಳು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಾಲಿಗ್ರಾಮ ತಾಲೂಕಿನ ಮಿರ್ಲೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಭೇರ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಚುಂಚನಕಟ್ಟೆ ಆದಿ ಚುಂಚನಗಿರಿ ಬಾಲಜಗತ್ ಪ್ರೌಢಶಾಲೆ, ಸಾಲಿಗ್ರಾಮ ಪದವಿ ಪೂರ್ವ ಕಾಲೇಜು ಮತ್ತು ಹನಸೋಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಇದರ ಜತೆಗೆ ಕೆ.ಆರ್. ನಗರ ಪಟ್ಟಣದ ಕೃಷ್ಣರಾಜೇಂದ್ರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಜೋಸೆಪರ ಪ್ರೌಢಶಾಲೆ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ತಾಲೂಕಿನ ಹಂಪಾಪುರ ಸರ್ಕಾರಿ ಪ್ರೌಢಶಾಲೆ, ಹೆಬ್ಬಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ, ಗಂಧನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದ್ದು, ಎಲ್ಲ ಸಿದ್ದತೆ ಮಾಡಲಾಗಿದೆ ಎಂದು ಹೇಳಿದರು.

ಪರೀಕ್ಷೆಗೆ ಹಾಜರಾಗುವ 3 ಸಾವಿರ ವಿದ್ಯಾರ್ಥಿಗಳ ಪೈಕಿ 1,405 ಬಾಲಕರು ಮತ್ತು 1,421 ಬಾಲಕಿಯರ ಜತೆಗೆ 111 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 38 ಖಾಸಗಿ ಅಭ್ಯರ್ಥಿಗಳು ಇವರ ಜೊತೆಗೆ 23 ಮಂದಿ ಖಾಸಗಿ ಪುನರಾವರ್ತಿತರೊಂದಿಗೆ ಇಬ್ಬರು ಹಿಂದಿನ ಸಾಲಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು ಎಂದು ಹೇಳಿದರು.

ಪರೀಕ್ಷಾ ವೇಳಾ ಪಟ್ಟಿ : ಮಾ. 25ರಂದು ಪ್ರಥಮ ಭಾಷೆ, 27ರಂದು ಸಮಾಜ ವಿಜ್ಞಾನ, 30 ರಂದು ವಿಜ್ಞಾನ, ಏ. 2 ರಂದು ಗಣಿತ, 4 ರಂದು ತೃತೀಯ ಭಾಷೆ ಹಾಗೂ 6 ರಂದು ದ್ವಿತೀಯ ಭಾಷೆ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಪೂರ್ವ ಸಿದ್ದತೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಪರೀಕ್ಷಾ ಕಾರ್ಯಕ್ಕೆ 224 ಮಂದಿ ಕೊಠಡಿ ಮೇಲ್ವಿಚಾರಕರು, ಮೂವರು ಮಾರ್ಗಾಧಿಕಾರಿಗಳು, 13 ಮಂದಿ ತಂಗು ಜಾಗೃತ ದಳದವರು, 11 ಮಂದಿ ಮೊಬೈಲ್ ತನಿಖಾಧಿಕಾರಿಗಳು, 11 ಮಂದಿ ಮುಖ್ಯ ಅಧೀಕ್ಷಕರು, 3 ಮಂದಿ ಉಪ ಅಧೀಕ್ಷಕರ ಜತೆಗೆ 11 ಮಂದಿ ಪೇಪರ್ ಕಸ್ಟೋಡಿಯನ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಶಾಲೆಯ ಕೆಲವು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರವೇಶ ಪತ್ರಗಳನ್ನು ವಿತರಿಸಿದ ಬಿಇಒ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಣ ಸಂಯೋಜಕ ದಾಸಪ್ಪ, ಹೆಬ್ಬಾಳು ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ರಶ್ಮಿ ಇದ್ದರು.

ವಿದ್ಯಾರ್ಥಿಗಳಿಗೆ ಶಾಸಕರಿಂದ ಶುಭ ಹಾರೈಕೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ನಿರ್ಭಿತಿಯಿಂದ ಪರೀಕ್ಷಾ ಕೊಠಡಿಗಳಿಗೆ ತೆರಳಿ ಉತ್ತಮ ಅಂಕಗಳಿಕೆಯ ಧೈರ್ಯದೊಂದಿಗೆ ಉತ್ತರ ಬರೆಯಬೇಕು ಎಂದು ಶಾಸಕ ಡಿ. ರವಿಶಂಕರ್ ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.