ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಮಾ. 21 ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಎಲ್ಲ ಮುಂಜಾಗ್ರತ ಕ್ರಮ ವಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಕೃಷ್ಣಪ್ಪ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪರೀಕ್ಷಾ ಪೂರ್ವ ಸಿದ್ದತೆ ಸಂಬಂಧ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಸಲಹೆ ಸೂಚನೆ ನೀಡಿದ ನಂತರ ಅವರು ಮಾತನಾಡಿದರು.2024-25ನೇ ಸಾಲಿನಲ್ಲಿ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳ 71 ಪ್ರೌಢಶಾಲೆಗಳ ಪೈಕಿ 35 ಸರ್ಕಾರಿ, 13 ಅನುದಾನಿತ, 18 ಅನುದಾನ ರಹಿತ ಹಾಗೂ 6 ವಸತಿ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದರು. ಎರಡು ತಾಲೂಕುಗಳಿಂದ ಒಟ್ಟು 2,924 ಸಾವಿರ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಇದರ ಜತೆಗೆ 90 ಮಂದಿ ಪುನಾವರ್ತಿತಾ ವಿದ್ಯಾರ್ಥಿಗಳು ಹಾಜರಾಗಲಿದ್ದು ಒಟ್ಟು 3,014 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, 1.430 ವಿದ್ಯಾರ್ಥಿಗಳು ಮತ್ತು 1,994 ವಿದ್ಯಾರ್ಥಿನಿಯರು ಸೇರಿದ್ದಾರೆ ಎಂದು ಮಾಹಿತಿ ನೀಡಿದರು. ಪರೀಕ್ಷೆ ನಡೆಸಲು ಇಲಾಖಾ ನಿಯಮಾನುಸಾರ ಸಿದ್ದತೆ ಮಾಡಲಾಗಿದ್ದು, ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕು ವ್ಯಾಪ್ತಿಯಲ್ಲಿ 11 ಪರೀಕ್ಷಾ ಕೇಂದ್ರಗಳಿದ್ದು, ಅಲ್ಲಿ ಸಿಸಿ ಟಿವಿ ಅಳವಡಿಕೆ ಮತ್ತು ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಈಗಾಗಲೇ ರಾಜ್ಯ ಮಟ್ಟದ ಎಸ್ಸೆಸ್ಸೆಲ್ಸಿ ಪೂರ್ವಸಿದ್ದತಾ ಪರೀಕ್ಷೆಯಲ್ಲಿ ಚಾಲನೆ ಮಾಡಿ ಪರಿಶೀಲಿಸಿ ಕಾರ್ಯನಿರ್ವಹಣೆ ಬಗ್ಗೆ ದೃಢೀಕರಿಸಿಕೊಳ್ಳಲಾಗಿದೆ ಎಂದು ಹೇಳಿದರು. ಇಸಿಒ ಪೂರ್ಣಿಮಾ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಮೋಹನ, ಶಿಕ್ಷಕರಾದ ಎಸ್. ಮಂಜುನಾಥ್, ಪಿ.ಕೆ. ಸಂದೀಪ್ ಮತ್ತು ವಿದ್ಯಾರ್ಥಿಗಳು ಇದ್ದರು.