ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡಆರ್‌ಎನ್‌ಆರ್ 15048 ಭತ್ತದ ತಳಿಯು ಮಧುಮೇಹ ರೋಗಿಗಳು ಸಹ ಅನ್ನ ಊಟ ಮಾಡುವ ಹಾಗೂ ಸಾಮಾನ್ಯ ಸೋನಾ ಮಸೂರಿ ಅಕ್ಕಿಗಿಂತ ಶೇ.5ರಷ್ಟು ಹೆಚ್ಚು ಪ್ರೋಟಿನ್ ಅಂಶ ಹೊಂದಿದೆ ಎಂದು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ವಿ.ಐ. ಬೆಣಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಧಾರವಾಡ
ಆರ್‌ಎನ್‌ಆರ್ 15048 ಭತ್ತದ ತಳಿಯು ಮಧುಮೇಹ ರೋಗಿಗಳು ಸಹ ಅನ್ನ ಊಟ ಮಾಡುವ ಹಾಗೂ ಸಾಮಾನ್ಯ ಸೋನಾ ಮಸೂರಿ ಅಕ್ಕಿಗಿಂತ ಶೇ.5ರಷ್ಟು ಹೆಚ್ಚು ಪ್ರೋಟಿನ್ ಅಂಶ ಹೊಂದಿದೆ ಎಂದು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ವಿ.ಐ. ಬೆಣಗಿ ಹೇಳಿದರು.ಇಲ್ಲಿಯ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ (ವಾಲ್ಮಿ) ಆವರಣದಲ್ಲಿ ಸುಮಾರು ಏಳು ಎಕರೆ ಪ್ರದೇಶದಲ್ಲಿ ಬೆಳೆಯಲಾದ ಆರ್‌ಎನ್‌ಆರ್ 15048 ಭತ್ತದ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಆರ್‌ಎನ್‌ಆರ್ 15048 ಭತ್ತದ ತಳಿಯು ಬೆಂಕಿ ಮತ್ತು ಕವಚ ಕಾಂಡ ಮಚ್ಚೆ ರೋಗಕ್ಕೆ ನಿರೋಧಕವಾಗಿದ್ದು, ಕಡಿಮೆ ನೀರಿನಲ್ಲಿ ಇದನ್ನು ಬೆಳೆಯಬಹುದಾಗಿದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗಿದೆ. ಈ ಭತ್ತವು ಕಡಿಮೆ ಗ್ಲೆಸಿಮಿಕ್ ಸೂಚ್ಯಂಕ ಹೊಂದಿರುವುದರಿಂದ ಮಧುಮೇಹ ರೋಗಿಗಳಿಗೂ ಸಹ ಅನ್ನ ಊಟ ಮಾಡಲು ಅನುಕೂಲವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಪ್ರೊ. ಬಂಡಿವಡ್ಡರ, ವಾಲ್ಮಿಯಲ್ಲಿ ಪಾಳು ಬಿದ್ದಿದ್ದ ಭೂಮಿ ಅಭಿವೃದ್ಧಿಪಡಿಸಿ ಕೇವಲ ಐದು ಬಾರಿ ನೀರುಣಿಸುವ ಮೂಲಕ 125 ದಿನಗಳಲ್ಲಿ ಈ ವಿಶೇಷ ತಳಿ ಬೆಳೆಯಲಾಗಿದೆ ಎಂದು ತಳಿ ವೀಕ್ಷಣೆಗೆ ಆಗಮಿಸಿದ್ದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ತಮ್ಮ ಹೊಲದಲ್ಲಿ ಅಳವಡಿಸಿಕೊಂಡು ಕಡಿಮೆ ನೀರಿನಲ್ಲಿ ಭತ್ತದ ಬೆಳೆ ಬೆಳೆದು ಇತರರಿಗೆ ಮಾದರಿಯಾಗಬೇಕು ಎಂದರು.ವಾಲ್ಮಿ ಸಹಾಯಕ ಪ್ರಾಧ್ಯಾಪಕ ಮಹಾದೇವಗೌಡ ಹುತ್ತನಗೌಡರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಇಂದೂಧರ ಹಿರೇಮಠ ವಂದಿಸಿದರು. ವಾಲ್ಮಿಯ ಅಧಿಕಾರಿಗಳು ಇದ್ದರು.