2ಎ ಮೀಸಲಾತಿ ಸಿಗದಿದ್ದರೆ ಉಗ್ರ ಹೋರಾಟ: ಶಾಸಕ ಬಸನಗೌಡ ಪಾಟೀಲ

| Published : Sep 23 2024, 01:22 AM IST

2ಎ ಮೀಸಲಾತಿ ಸಿಗದಿದ್ದರೆ ಉಗ್ರ ಹೋರಾಟ: ಶಾಸಕ ಬಸನಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಂಬಂಧ ನಮ್ಮ ನಿಯೋಗಕ್ಕೆ ಮುಖ್ಯಮಂತ್ರಿ ಸ್ಪಂದಿಸದಿದ್ದರೆ ಮುಂದಿನ ಹೋರಾಟ ಉಗ್ರವಾಗಿರಲಿದೆ. ಬೆಳಗಾವಿ ಅಧಿವೇಶನದಲ್ಲಿ ಮುಂದಿನ ಹೋರಾಟ ಮಾಡೋಣ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಂಬಂಧ ನಮ್ಮ ನಿಯೋಗಕ್ಕೆ ಮುಖ್ಯಮಂತ್ರಿ ಸ್ಪಂದಿಸದಿದ್ದರೆ ಮುಂದಿನ ಹೋರಾಟ ಉಗ್ರವಾಗಿರಲಿದೆ. ಬೆಳಗಾವಿ ಅಧಿವೇಶನದಲ್ಲಿ ಮುಂದಿನ ಹೋರಾಟ ಮಾಡೋಣ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಗಾಂಧಿಭವನದಲ್ಲಿ ಭಾನುವಾರ ಲಿಂಗಾಯತ ಪಂಚಮಸಾಲಿ ಸಮಾಜದ ವಕೀಲರ ಮಹಾಪರಿಷತ್‌ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಸುವರ್ಣಸೌಧದ ಒಳಗೆ ಬರದಂತೆ ನೋಡಿಕೊಳ್ಳೋಣ. ನಮ್ಮ ನಿಯೋಗಕ್ಕೆ ಸಿಎಂ ಸ್ಪಂದಿಸದಿದ್ದರೆ, ಮುಂದಿನ‌‌ ಹೋರಾಟ ಉಗ್ರವಾಗಿರಲಿದೆ ಎಂದು ಎಚ್ಚರಿಕೆ ನೀಡಿದ ಅವರು, ನಾನು ಹಿಂದಿನ ಸಿಎಂ ಬೊಮ್ಮಾಯಿ ಜೊತೆಗೆ ನೇರವಾಗಿ ಜಗಳ ಮಾಡಿದ್ದೇನೆ ಎಂದರು.

ಕಾನೂನಾತ್ಮಕವಾದ ಅನೇಕ ವಿಚಾರಗಳನ್ನು ವಕೀಲರು ವ್ಯಕ್ತಪಡಿಸಿದ್ದಾರೆ. ಶ್ರೀಗಳು ಯಾವುದೇ ಸ್ವಾರ್ಥ ಇಲ್ಲದೆ ಸಮಾಜಕ್ಕೆ ಸಮರ್ಪಿಸಿಕೊಂಡಿದ್ದಾರೆ. ಮಠಕ್ಕೆ ಹಣ ಕೊಡುತ್ತೇವೆ ಎಂದರೆ ಕೆಲವರ ಮಾತಿನ ಶೈಲಿ ಬದಲಾವಣೆ ಆಗುತ್ತದೆ. ವೇದಿಕೆ ಮೇಲೆ ನಮ್ಮನ್ನು ಕೂರಿಸದೇ ಕೆಳಗೆ‌ ಕೂರಿಸಿದ್ದಿರಿ. ಇದ್ದಕ್ಕಾಗಿ ಧನ್ಯವಾದಗಳು ಎಂದರು.

ಈ ಹಿಂದೆ ಬೆಳಗಾವಿಯಲ್ಲಿ ನಮಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನದಲ್ಲಿ ಭೇಟಿಯಾಗುವ ಭರವಸೆ ಕೊಟ್ಟಿದ್ದರು. ಬೆಂಗಳೂರಿಗೆ ಹೋದ ಬಳಿಕ ಸಿಎಂ ಮರೆತು ಬಿಟ್ಟರು. ನಮ್ಮವರೇ ಸಿಎಂ ಅವರನ್ನು ಹೊಗಳುತ್ತಾರೆ, ಹುಲಿ ಎಂದು ಬಿಂಬಿಸಿದರು. ಬೊಮ್ಮಾಯಿ ಕಾಲದಲ್ಲಿ ನಾವು ಹಠ ಮಾಡಿ ಕೆಲಸ ಮಾಡಿಸಿದ್ದೇನೆ. ಬೊಮ್ಮಾಯಿ ನನ್ನನ್ನು ಕರೆದು ಸಚಿವನನ್ನಾಗಿ ಮಾಡುವ ಭರವಸೆ ಕೊಟ್ಟಿದ್ದರು. ಇದೆಲ್ಲ ನಾಟಕ ಬೇಡ, ನಮಗೆ ಮೀಸಲಾತಿ ಕೊಡಿ ಎಂದು ಹೇಳಿದ್ದೆ. ನಮ್ಮ ಪಕ್ಷದಲ್ಲಿ ಒಂದು ಕುತಂತ್ರ ನಡೆಯಿತು. ಚುನಾವಣೆ ಘೋಷಣೆ ಆಗುವ ದಿನ ದೊಡ್ಡ ಕುತಂತ್ರ ನಡೆಯಿತು. ಯಡಿಯೂರಪ್ಪ ಬೇಡ ಎಂದರೆ, ಅಮಿತ್ ಶಾ ಕೊಡಿ ಎಂದು ಹೇಳಿದ್ದರು. ರಾತ್ರಿ ಒಂದು ಗೆಜೆಟ್ ನೋಟಿಫಿಕೇಶನ್ ಹೊರಡಿಸಿದರು ಎಂದು ಹೇಳಿದರು.

ಇಷ್ಟು ‌ದಿನ ಎಲ್ಲರ ನಾಟಕ ನೋಡಿದ್ದೇನೆ. ಚರ್ಚೆಗೆ ಅವಕಾಶ ಕೊಡಬೇಡಿ ಎಂದು ಸ್ಪೀಕರ್‌ಗೆ ಹೇಳಿದ್ದಾರೆ. ಸ್ಪೀಕರ್ ಬಗ್ಗೆ ನಾನು ಟೀಕೆ ಮಾಡಲ್ಲ. ಯಾವುದೇ ಜಾತಿಯವರಿದ್ದರೂ ಒಳ್ಳೆಯ ಮನುಷ್ಯ. ನಾನು ಅರ್ಜಿ ಹಾಕಿದ ಮರುದಿನವೇ ಸದನದಲ್ಲಿ ಮಾತನಾಡಲು ಅವಕಾಶ ಸಿಕ್ಕಿತು. ಹತ್ತು ಜನರ ಹಿರಿಯರ ತಂಡ ಮಾಡಿ, ಸಿಎಂ‌ ಬಳಿ ಭೇಟಿಗೆ ಹೋಗಬೇಕಿದೆ. ಎಲ್ಲಾದರೂ ಸ್ವಲ್ಪ ವ್ಯತ್ಯಾಸ ಆದರೆ ಸಿಎಂ ಸಿದ್ದರಾಮಯ್ಯ ಉಲ್ಟಾ ಹೊಡೆಯುತ್ತಾರೆ. ಅದು ಗಿರಾಕಿ ವಕೀಲ ಇದೆ. ಪಾಯಿಂಟ್ ಟು ಪಾಯಿಂಟ್ ಮಾತನಾಡುವವರು ಮುಖ್ಯಮಂತ್ರಿ ಬಳಿಗೆ ಹೋಗಬೇಕು ಎಂದು ಸಲಹೆ ನೀಡಿದರು.

ವಿನಯ್ ಕುಲಕರ್ಣಿಯವರೇ ನಿಮ್ಮ ಮೇಲೆ ವಿಶ್ವಾಸ ಇದೆ. ಉಳಿದವರದ್ದು ನಾಟಕ ಕಂಪನಿ. ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಪ್ರಯತ್ನ ಮಾಡಿದರು. ನಾನು ಮಾತನಾಡಿದ್ದನ್ನು ಕೇಂದ್ರ ನಾಯಕರಿಗೆ ಹೇಳುತ್ತಾರೆ. ದೆಹಲಿಯಲ್ಲೊಬ್ಬ ಭೂಪ ಇದ್ದಾನೆ. ನೀವು ಮಾತನಾಡ್ತಿರೋದು ಸರಿಯಲ್ಲ ಎಂದು ನನಗೆ ಮೆಸೇಜ್ ಮಾಡ್ತಾನೆ. ಮೊನ್ನೆ ನಡೆದ ಸಭೆಯಲ್ಲಿ ನನ್ನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ ಎಂದು ಹೇಳಿದ್ದ ಎಂದು ಸ್ವಪಕ್ಷದ ಮುಖಂಡರ ವಿರುದ್ಧ ಹರಿಹಾಯ್ದರು.

ಅಧಿವೇಶನ ಒಳಗಾಗಿ ಯಾವುದೇ ನಿರ್ಣಯ ಆಗದೆ ಇದ್ದರೆ ಮುಂದಿನ ಹೋರಾಟ‌‌ ಮಾಡೋಣ. ಸುವರ್ಣ ಸೌಧ ಮುತ್ತಿಗೆ ಹಾಕೋಕೆ ಸಿದ್ಧರಾಗೊಣ. ಮಹಾರಾಷ್ಟ್ರದಲ್ಲಿ ನಡೆದ ಮಾದರಿಯಲ್ಲಿ ಇಲ್ಲೂ ಹೋರಾಟ ಮಾಡಬೇಕಿದೆ. ನನ್ನ ಸಕ್ಕರೆ ಕಾರ್ಖಾನೆ ಬಂದ್ ಮಾಡಿಸಿದರು. ಹೈಕೋರ್ಟ್‌ನಲ್ಲಿ ಗೆದ್ದೆ. ನಾನು ಸುಪ್ರೀಂ ಕೋರ್ಟ್‌ಗೆ ಹೋದೆ ನನ್ನ ವಿರುದ್ಧ ವಾದ ಮಾಡಲು ಕಪಿಲ್ ಸಿಬಲ್‌ರನ್ನು ಕಳಿಸಿದರು. ನಮ್ಮ ಸಮಾಜದ ಒಬ್ಬ ನಾಯಕನೇ ನನ್ನ ವಿರುದ್ಧ ಪಿತೂರಿ ಮಾಡ್ತಿದ್ದಾನೆ ಎಂದು ಆರೋಪಿಸಿದರು.

ಅಕ್ಟೋಬರ್‌ 15ರಂದು ಕರೆದಿರುವ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೂ ಮೀಸಲಾತಿ ಕೊಡ್ತಿರೋ? ಇಲ್ಲವೋ? ಎಂದು ನೇರವಾಗಿ ಕೇಳಬೇಕು. ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ಕೊಡಲು ಸಿಎಂಗೆ ಆಸಕ್ತಿ ಇಲ್ಲ. ನಮ್ಮ ಸಮಾಜದ ಬಗ್ಗೆ ಸಿಎಂಗೆ ಅಲರ್ಜಿ ಇದೆ. ನಮಗೆ ಕೊಡುವುದು ಡೌಟು. ಸಿಎಂ ಮುಂದೆ ಏನು ಮಾತನಾಡಬೇಕು ಎಂದು ಮೊದಲೇ ತೀರ್ಮಾನ ಮಾಡಬೇಕು.

-ಬಸನಗೌಡ ಯತ್ನಾಳ, ಶಾಸಕ ವಿಜಯಪುರ