ಆದಿತ್ಯ ಠಾಕ್ರೆ ಹೇಳಿಕೆ ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ

| Published : Dec 12 2024, 12:34 AM IST

ಸಾರಾಂಶ

ಎಂಇಎಸ್ ಪುಂಡಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು: ಮೊಹಮ್ಮದ್ ಜಿಕ್ರಿಯಾ

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಿವಸೇನೆ(ಯುಬಿಟಿ)ಶಾಸಕ ಆದಿತ್ಯ ಠಾಕ್ರೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂಬ ಒತ್ತಾಯ ಮಾಡಿರುವುದು ಹಾಸ್ಯಾಸ್ಪದ. ಇಂಥ ಹೇಳಿಕೆಗಳನ್ನು ಮಹಾರಾಷ್ಟ್ರದ ನಾಯಕರು ನೀಡಬಾರದು. ಎಂಇಎಸ್ ಪುಂಡಾಟಕ್ಕೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂದು ಸುವರ್ಣ ಕರ್ನಾಟಕ ಹಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು, ಬೆಳಗಾವಿಯು ಕರ್ನಾಟಕಕ್ಕೆ ಸೇರಿದ್ದು. ಮಹಾಜನ್ ವರದಿಯೇ ಅಂತಿಮ. ಅಂದಿನಿಂದ ಇಂದಿನವರೆಗೂ ಮುಂದೆಂದೂ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು. ಆದಿತ್ಯ ಠಾಕ್ರೆಯದ್ದು ಉದ್ದಟತನ, ಶಾಂತಿ ಕದಡುವ ಹೇಳಿಕೆಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು. ಶಿವಸೇನೆ ಮೊದಲಿನಿಂದಲೂ ಬೆಳಗಾವಿಯಲ್ಲಿ ಮರಾಠಿಗರು, ಕನ್ನಡಿಗರ ನಡುವೆ ವೈಷಮ್ಯ ಉಂಟುಮಾಡಲು ಸಂಚು ರೂಪಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಕನ್ನಡಿಗರೆಲ್ಲರೂ ಇಂಥ ಹೇಳಿಕೆ ಖಂಡಿಸಬೇಕಿದೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ ಎಂಬುದು ಶುದ್ಧ ಸುಳ್ಳು. ಕನ್ನಡ ನಾಡಿನಲ್ಲಿದ್ದುಕೊಂಡು ಕನ್ನಡ ವಿರೋಧಿ ಕೆಲಸ ಮಾಡಿದರೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಇದು ದಬ್ಬಾಳಿಕೆಯಲ್ಲ, ಕಾನೂನು ಕ್ರಮ. ಬೆಳಗಾವಿ ಕೇಂದ್ರಾಡಳಿತ ಪ್ರದೇಶವಾಗಬೇಕೆಂಬ ನಿಲುವು ಎಂದಿಗೂ ಬದಲಾಗದು ಎಂಬ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಕನ್ನಡ ವಿರೋಧಿ ಧೋರಣೆ ಯಾವ ಮಟ್ಟಕ್ಕೆ ಇದೆ ಎಂಬುದು ಗೊತ್ತಾಗುತ್ತದೆ. ಹೇಳಿಕೆ ವಾಪಸ್ ಪಡೆಯದಿದ್ದರೆ ಕರ್ನಾಟಕದಲ್ಲಿ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.