ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಅರವತ್ತು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಹಿಂದೂಗಳ ಭಾವನೆಗೆ ಧಕ್ಕೆಯುಂಟಾಗಲಿದೆ. ಇಂದು ವೇಳೆ ಸಮುದಾಯಭವನ ನಿರ್ಮಾಣಕ್ಕೆ ಮುಂದಾದಲ್ಲಿ ಸಾವಿರಾರು ಭಕ್ತರೊಂದಿಗೆ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ ತಿಪಟೂರು ಬಂದ್‌ಗೆ ಕರೆ ಕೊಡಲಾಗುವುದು ಎಂದು ನಿವೃತ್ತಿ ಎಸಿಪಿ ಹಾಗೂ ಸಮಾಜ ಸೇವಕ ಲೋಕೇಶ್ವರ ಎಚ್ಚರಿಕೆ ನೀಡಿದರು.ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮಧ್ಯಭಾಗದಲ್ಲಿರುವ ಈ ದೇವಸ್ಥಾನವು ನಾಲ್ಕು ಗುಂಟೆಯ ವಿಸ್ತೀರ್ಣದಲ್ಲಿದೆ. ಕಳೆದ 60ವರ್ಷಗಳಿಂದಲೂ ಇಲ್ಲಿ ಭಕ್ತರು ಪ್ರತಿ ವರ್ಷ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬಂದು ಮಾಲೆ ಹಾಕಿಸಿಕೊಂಡು ಪೂಜೆ ಪುನಸ್ಕಾರ ಮಾಡುತ್ತಾರೆ. ವರ್ಷದ ಎರಡು ತಿಂಗಳಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಬಂದು 48ದಿನಗಳ ಕಾಲ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಯ್ಯಪ್ಪಸ್ವಾಮಿ ದೇವಸ್ಥಾನದ ಜಾಗದಲ್ಲಿ ಏಕಾಏಕಿ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಉದ್ದೇಶಪೂರ್ವಕವಾಗಿದೆ ಎಂದರು.
ಇದು ಶಾಸಕರ ತೀರ್ಮಾನವೋ ಅಥವಾ ಸರ್ಕಾರದ ತೀರ್ಮಾನವೋ ಗೊತ್ತಿಲ್ಲ. ಸನಾತವಾಗಿ ನಡೆದುಕೊಂಡು ಬಂದಿರುವ ಈ ದೇವಸ್ಥಾನಕ್ಕೆ ಧಕ್ಕೆಯುಂಟಾದರೆ ಸುಮ್ಮನೆ ಕೂರಲ್ಲ. ಬೀದಿಗಿಳಿದು ಹೋರಾಟ ಮಾಡುತ್ತೇವೆ. ನಾವು ಕೇಳಿರುವುದು ಕೇವಲ ನಾಲ್ಕು ಗುಂಟೆ ಅಷ್ಟೇ ಈ ಬಗ್ಗೆ ತಹಸೀಲ್ದಾರ್, ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಜಿಲ್ಲಾಧಿಕಾರಿಗಳೇ ಖುದ್ದು ತಹಸೀಲ್ದಾರ್‌ಗೆ ಜಾಗ ಬಿಟ್ಟುಕೊಡುವಂತೆ ಪತ್ರ ಬರೆದಿದ್ದಾರೆ. ಇಷ್ಟೆಲ್ಲಾ ಇದ್ದರೂ ಇದೇ ಜಾಗದಲ್ಲಿ ಸಮುದಾಯ ಭವನ ಕಟ್ಟಲು ಯೋಚನೆ ಮಾಡುವುದು ತಪ್ಪು. ಈ ಯೋಚನೆಯನ್ನು ನಿಲ್ಲಿಸದಿದ್ದರೆ ಯಾವ ಮಟ್ಟದ ಹೋರಾಟಕ್ಕೂ ಸಿದ್ದರಿದ್ದೇವೆ. ಸ್ವಲ್ಪ ದಿನದಲ್ಲಿಯೇ ದೊಡ್ಡ ಮೆರಣಿಗೆಯ ಮೂಲಕ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸುತ್ತೇವೆ ಇದಕ್ಕೂ ಬಗ್ಗದಿದ್ದರೆ ತಾಲೂಕು ಬಂದ್ ಆಗಲಿದೆ ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ನಿರ್ದೇಶಕ ಬಸವರಾಜು, ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಾರಾಯಣಮೂರ್ತಿ, ವೆಂಕಟಾಲಪತಿ, ಗುರುಸ್ವಾಮಿ, ಡಾಬಾ ಶಿವಶಂಕರ್, ನಗರಸಭೆ ಸದಸ್ಯರಾದ ಸೊಪ್ಪುಗಣೇಶ್, ಭಾರತಿ ಮಂಜುನಾಥ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರು, ಸೇವಾಕರ್ತರು, ಟ್ರಸ್ಟ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.