ಮತಾಂತರಕ್ಕೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ

| Published : Dec 30 2023, 01:15 AM IST

ಮತಾಂತರಕ್ಕೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಮತಾಂತರಕ್ಕೆ ಕಡಿವಾಣ ಹಾಕಬೇಕು ಎಂದು ಅಂಬಾರಗೊಪ್ಪ ತಾಂಡ ಜನತೆ ಗುರುವಾರ ರಾತ್ರಿ ಆಗ್ರಹಿಸಿ, ಬ್ರದರನ್ ಚರ್ಚ್ ಫಾಸ್ಟರ್ ಸುರೇಶ್ ಮತ್ತವರ ಬೆಂಬಲಿಗರ ವಿರುದ್ಧ ಮುಖಂಡ ಲೋಹಿತ್‌ ನಾಯ್ಕ ನೇತೃತ್ವದಲ್ಲಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಅಂಬಾರಗೊಪ್ಪದಲ್ಲಿ ಗುರುವಾರ ರಾತ್ರಿ ಮತಾಂತರ ಪ್ರಯತ್ನ ನಡೆದಿದ್ದು ಅದರ ವಿರುದ್ಧ ಇಡೀ ಗ್ರಾಮ ಒಗ್ಗಟ್ಟಾಗಿ ನಿಂತಿದ್ದಾರೆ. ಆದರೆ, ಮುಖಂಡರನ್ನು ಗುರಿಯಾಗಿಸಿಕೊಂಡು ಸುಳ್ಳು ಮೊಕ್ಕದ್ದಮೆ ದಾಖಲಿಸುವ ಕೆಲಸ ನಡೆಯುತ್ತಿದೆ. ಅದಕ್ಕೆ ಅವಕಾಶ ನೀಡಬಾರದು. ಬ್ರದರನ್ ಚರ್ಚ್ ಫಾಸ್ಟರ್ ಸುರೇಶ್ ಮತ್ತವರ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಬಣಜಾರ ಸಮಾಜ ಮುಖಂಡ ಲೋಹಿತ್‌ ನಾಯ್ಕ ಆಗ್ರಹಿಸಿದರು.

ಬಣಜಾರ ತಾಂಡಾಗಳಲ್ಲಿ ಮತಾಂತರ ತಡೆಗಟ್ಟುವಂತೆ ಆಗ್ರಹಿಸಿ ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿ, ಗ್ರಾಮಾಂತರ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಶ್ರೀಮಂತ ಸಂಸ್ಕೃತಿ ಹೊಂದಿರುವ, ಬಡತನ ಹೆಚ್ಚಿರುವ ಲಂಬಾಣಿ ಜನಾಂಗ ಗುರಿಯಾಗಿಸಿಕೊಂಡು ಮತಾಂತರ ಮಾಡುವ ಅವಿರತ ಪ್ರಯತ್ನ ತಾಲೂಕಿನಾದ್ಯಂತ ಹೆಚ್ಚಾಗಿದೆ. ಅದನ್ನು ಸಂಪೂರ್ಣ ತಡೆಗಟ್ಟಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಮುಖಂಡ ಹುನ್ಯಾನಾಯ್ಕ ಮಾತನಾಡಿ, ಬಂಜಾರ ಸಮಾಜದ ಆಚರಣೆ ಪದ್ಧತಿ, ಜೀವನಶೈಲಿ, ಸಾಮಾಜಿಕ ಸ್ಥಿತಿಗತಿ ಗಮನಿಸಿ, ಮೀಸಲಾತಿ ನೀಡಲಾಗುತ್ತದೆ. ನಮ್ಮ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗಳ ಸಾಮಾಜಿಕ ಸ್ಥಾನಮಾನ ಸ್ಥಿತ್ಯಂತರ ಆಗುತ್ತದೆ. ಆಚರಣೆ, ಜೀವನ ಪದ್ಧತಿ ಬದಲಾಗುತ್ತದೆ. ಅದಕ್ಕಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ಸರ್ಕಾರ ಮೀಸಲಾತಿ ಸೌಲಭ್ಯ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಅನಂತರದಲ್ಲಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜೀಕ್ಯಾನಾಯ್ಕ, ಬಸವರಾಜ ನಾಯ್ಕ, ರಘು ನಾಯ್ಕ, ಅನಂತ ನಾಯ್ಕ, ಸೋಮ್ಲ ನಾಯ್ಕ, ರಾಮ ನಾಯ್ಕ, ಪೀತ್ಯಾ ನಾಯ್ಕ, ಅಣ್ಣಪ್ಪ ನಾಯ್ಕ, ಕೃಷ್ಣ ನಾಯ್ಕ, ಹನುಮಂತ ನಾಯ್ಕ, ರವಿ ನಾಯ್ಕ ಮತ್ತಿತರರು ಹಾಜರಿದ್ದರು.

- - - ಕೋಟ್‌ ಕ್ರೈಸ್ತ ಧರ್ಮವನ್ನು ಆಚರಿಸುವ ಜನರನ್ನು ಹೆಚ್ಚಳ ಮಾಡುವ ದುರುದ್ದೇಶದಿಂದ ಗ್ರಾಮೀಣ ಪ್ರದೇಶದ ಬಂಜಾರ ಸಮಾಜದ ಬಡವರು, ರೋಗಿಗಳನ್ನು ಗುರಿಯಾಗಿಸಿಕೊಂಡು ಅವರ ರೋಗ ನಿವಾರಣೆ ಮಾಡುತ್ತೇವೆ, ಕಷ್ಟಕ್ಕೆ ಹಣ ನೀಡುತ್ತೇವೆ, ಯುವಕರಿಗೆ ಉದ್ಯೋಗ ನೀಡುತ್ತೇವೆ ಎನ್ನುವ ಭರವಸೆಗಳನ್ನು ನೀಡುತ್ತಿದ್ದಾರೆ. ಅಲ್ಲದೇ, ಪ್ರಾರ್ಥನೆಗೆ ಕರೆದುಕೊಂಡು ಹೋಗಿ ಅವರನ್ನು ಮತಾಂತರ ಮಾಡುತ್ತಿದ್ದಾರೆ

- ಲೋಹಿತ್‌ ನಾಯ್ಕ, ಬಂಜಾರ ಮುಖಂಡ

- - -

-29ಕೆಎಸ್.ಕೆಪಿ1:

ಶಿಕಾರಿಪುರದಲ್ಲಿ ಶುಕ್ರವಾರ ಅಂಬಾರಗೊಪ್ಪ ತಾಂಡಾ ಜನರು ಗ್ರಾಮದಲ್ಲಿನ ಮತಾಂತರ ಪ್ರಯತ್ನ ವಿರುದ್ಧ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.