ಗದಗ: ತಾಲೂಕಿನ ಮಲಪ್ರಭಾ ಕಾಲುವೆ ಹೊಂದಿರುವ ನೀರಾವರಿ ಜಮೀನುಗಳಿಗೆ ಮಾ. 15ರ ವರೆಗೆ ಜಲಾಶಯದಿಂದ ಕಾಲುವೆಗೆ ನೀರು ಪೂರೈಕೆ ಮಾಡದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದೆಂದು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ತಿಳಿಸಿದರು.
ಗುರುವಾರ ರೈತ ಸಂಘ ಹಾಗೂ ಹಸಿರುಸೇನೆಯ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿ, ಪ್ರಸಕ್ತ ವರ್ಷ ಮಲಪ್ರಭಾ ಜಲಾಶಯ ಸಂರ್ಪೂಣ ಭರ್ತಿಯಾಗಿದೆ. ಮೇಲಾಗಿ ಸದ್ಯ ಜಲಾಶಯದಲ್ಲಿ 16 ಟಿಎಂಸಿ ನೀರು ಇದೆ. ಇದರಲ್ಲಿ 4 ಟಿಎಂಸಿ ನೀರು ಜಲಜೀವಿಗಳಿಗೆ, 4 ಟಿಎಂಸಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನರಿಗೆ ಕುಡಿಯಲು ಸಾಕಾಗುವುದು. ಉಳಿದ 6 ಟಿಎಂಸಿ ನೀರನ್ನು ಮಲಪ್ರಭಾ ಜಲಾಶಯ ಅಧಿಕಾರಿಗಳು ಮುಂದಿನ ಮಾ. 20ರ ವರೆಗೆ ನೀರು ಪೂರೈಕೆ ಮಾಡಲು ಸಾಧ್ಯವಿದ್ದರೂ ದಿಢೀರ್ ಫೆ. 21ಕ್ಕೆ ಕಾಲುವೆ ನೀರು ಸ್ಥಗಿತ ಮಾಡಲಾಗುವುದೆಂದು ಹೇಳಿದ್ದು ಖಂಡನೀಯ ಎಂದರು.ಹಿಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರು ಗೋವಿನಜೋಳ, ಈರುಳ್ಳಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಈ ಬೆಳೆಗಳಿಗೆ ಮುಂದಿನ ದಿನ ಇನ್ನು ಎರಡು ನೀರನ್ನು ಬೆಳೆಗಳಿಗೆ ಕೊಟ್ಟರೆ ಮಾತ್ರ ಈ ಬೆಳೆಗಳು ರೈತನ ಕೈಗೆ ಮುಟ್ಟುತ್ತವೆ. ಆದ್ದರಿಂದ ಸರ್ಕಾರ ಮಲಪ್ರಭಾ ಜಲಾಶಯ ಮಹಾಮಂಡಳಿಯವರು ಮತ್ತು ಅಧಿಕಾರಿಗಳು ಮಾ. 15ರ ವರೆಗೆ ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಪೂರೈಕೆ ಮಾಡಲು ಆದೇಶಿಸದಿದ್ದರೆ ತಾಲೂಕಿನ ರೈತರು ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದರು.
ಅಪರ ಜಿಲ್ಲಾಧಿಕಾರಿ ದುರಗೇಶ ಕೆ.ಆರ್. ಅವರು ರೈತರ ಮನವಿ ಸ್ವೀಕರಿಸಿದರು. ರೈತ ಮುಖಂಡರಾದ ಶೇಖರಗೌಡ ಪೊಲೀಸಪಾಟೀಲ, ಹನುಮಂತ ಅಣ್ಣಿಗೇರಿ, ಅನೀಲ ಕಳಸಣ್ಣವರ, ಕೃಷ್ಣಪ್ಪ ಚವಾಣ, ಇಸ್ಮಾಯಿಲ್ ಮುದಕವಿ, ಶೇಕತಲಿ ಸನ್ನಿ, ಸೇರಿದಂತೆ ಮುಂತಾದವರು ಇದ್ದರು.