2 ವರ್ಷದಲ್ಲಿ 50 ಸಾವಿರ ಹುದ್ದೆ ಭರ್ತಿ: ಸಚಿವ ಈಶ್ವರ ಖಂಡ್ರೆ ಭರವಸೆ

| Published : Jan 17 2024, 01:51 AM IST

2 ವರ್ಷದಲ್ಲಿ 50 ಸಾವಿರ ಹುದ್ದೆ ಭರ್ತಿ: ಸಚಿವ ಈಶ್ವರ ಖಂಡ್ರೆ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಅಭಿವೃದ್ಧಿಗೆ ಸರ್ಕಾರದಿಂದ ಹಲವಾರು ಯೋಜನೆಗಳು ಜಾರಿ ಮಾಡಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವರು ತಿಳಿಸಿದರು. ಬೀದರ್‌ನಲ್ಲಿ ಮಹಿಳಾ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್‌

ಕಲ್ಯಾಣ ಕರ್ನಾಟಕ ಭಾಗದಲ್ಲಿನ ಉದ್ಯೋಗ ಸಮಸ್ಯೆ ನಿವಾರಣೆಗೆ ಕಲಂ 371 ಜೆ ಅಡಿಯಲ್ಲಿ 50ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಜರುಗಿಸಲಾಗುತ್ತಿದ್ದು ಒಂದೆರೆಡು ವರ್ಷದ ಒಳಗಾಗಿ ಹುದ್ದೆಗಳ ಭರ್ತಿ ಮಾಡುವ ಮೂಲಕ ಮಹಿಳೆಯರಿಗೂ ಉದ್ಯೋಗಾವಕಾಶಗಳು ಕೈಗೆಟಕುವಂತೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯವು ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿರುವ ಮಹಿಳಾ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ 18ನೇ ಶಕ್ತಿ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಮಹಿಳಾ ಪದವಿ ಕಾಲೇಜು ಸಬಲೀಕರಣಕ್ಕಾಗಿ ₹5 ಕೋಟಿ:

ಸರ್ಕಾರ ಆರ್ಥಿಕವಾಗಿ ಸಬಲವಾಗಿದೆ. ಬೀದರ್‌ನ ಸರ್ಕಾರಿ ಮಹಿಳಾ ಪದವಿ ಕಾಲೇಜು ಸಬಲೀಕರಣಕ್ಕಾಗಿ ಮೂರು ಹಂತದಲ್ಲಿ ಮ್ಯಾಕ್ರೋ ಯೋಜನೆಯಡಿ 5 ಕೋಟಿ ರು. ಅನುದಾನ ನೀಡಿದ್ದೇವೆ. ಇದಲ್ಲದೆ ಸಚಿವ ರಹೀಮ್‌ ಖಾನ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿಯವರು 5 ಕೋಟಿ ರು.ಗಳನ್ನು ನೀಡಿದ್ದಲ್ಲದೆ ಇನ್ನಷ್ಟು ಅಭಿವೃದ್ಧಿಗಾಗಿ 5 ಕೋಟಿ ರು.ಗಳ ಅನುದಾನ ಒದಗಿಸುವುದಾಗಿ ತಿಳಿಸಿದರು.

ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜು ಅಭಿವೃದ್ಧಿ:

ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಶಿಥಿಲಾವಸ್ಥೆ ಕಂಡು ಇದೇ ವರ್ಷ ಹೆಚ್ಚುವರಿಯಾಗಿ 3 ಕೋಟಿ ರು. ನೀಡಲು ನಿರ್ಧರಿಸಿರುವುದಾಗಿ ಹಾಗೂ ಜಿಲ್ಲೆಯಲ್ಲಿ ಮಹಿಳೆಯರಿಗಾಗಿ ಕೌಶಲ್ಯ ತರಬೇತಿ, ಮಹಿಳಾ ಅಕ್ಕಮಹಾದೇವಿ ಮಹಾವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಸರ್ಕಾರ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಅನೇಕ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತಿದೆ. ಈಗ ಪದವೀಧರರಿಗೆ ಯುವನಿಧಿ ಕಾರ್ಯಕ್ರಮದಲ್ಲಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದು ವಿವರಿಸಿದರು.

ಸ್ವಾತಂತ್ರ್ಯ ನಂತರ ತೊಟ್ಟಿಲು ತೂಗುವ ಕೈ ದೇಶವನ್ನಾಳುತ್ತದೆ ಎಂಬುವುದನ್ನು ತೋರಿಸಿಕೊಟ್ಟಿದ್ದು, ಮಾಜಿ ಪ್ರಧಾನಿ ಇಂದಿರಾಗಾಂಧಿ ಆಡಳಿತದಲ್ಲಿ ಮಹಿಳೆಯರಿಗಾಗಿ ಬಡವರಿಗಾಗಿ, ಶೋಷಿತರಿಗಾಗಿ ಎಲ್ಲ ವರ್ಗದವರಿಗಾಗಿ ಇಂದಿರಾ ಆವಾಜ್‌ ಕಾರ್ಯಕ್ರಮ, ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು ನಿರ್ಮಾಣಕ್ಕೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದವರು ನೆಹರು ಅವರಿಂದ ಆರಂಭವಾಯಿತು ಎಂದರು.

ಯುವ ಶಕ್ತಿ ಅಣು ಶಕ್ತಿಯಿದ್ದಂತೆ: ಯುವ ಶಕ್ತಿ ಅಣು ಶಕ್ತಿಯಿದ್ದಂತೆ, ಮನಸ್ಸು ಮಾಡಿದರೆ ಏನೇ ಬದಲಾವಣೆ ತರಬಹುದು, ನಮ್ಮಲ್ಲಿರುವ ಯುವಶಕ್ತಿಯಿಂದಾಗಿ ಜಗತ್ತು ನಮ್ಮ ತಿರುಗಿ ನೋಡುತ್ತಿದೆ. ಸಣ್ಣ ಗ್ರಾಮಗಳಿಂದ ಪ್ರತಿಭೆಗಳು ಹುಟ್ಟುತ್ತಿವೆ. ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳಾಗಿದ್ದಾರೆ. ದೇಶ ವಿದೇಶದಲ್ಲಿ ಅವರೆಲ್ಲ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಭಾರತ ದೇಶವು ವಾಪಸ್‌ ತರೆಸಿಕೊಂಡಲ್ಲಿ ವಿದೇಶದ ಆಡಳಿತ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಹಿಳೆಯರಿಗೆ ಗೌರವ ಕೊಡುವುದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಮಹಿಳೆಯರಿಗೆ ಗೌರವ ಇರುವ ಕಡೆ ದೇವರು ನೆಲೆಸಿರುತ್ತಾನೆ. ಜೀವನ ಚಕ್ರ ನಡೆಯಲು ಪುರುಷ, ಮಹಿಳೆಯರಿಬ್ಬರೂ ಬೇಕು. ಪುರುಷ ಹಾಗೂ ಮಹಿಳೆ ಒಂದೇ ನಾಣ್ಯದ ಎರಡು ಮುಖಗಳು. ಸೃಷ್ಟಿ ನಿರ್ಮಾಣ ಮಹಿಳೆಯರಿಂದ ಮಾತ್ರವಾಗಿದೆ. ಎಲ್ಲರಿಗೂ ಜನ್ಮ ಕೊಟ್ಟು ಪಾಲನೆ ಪೋಷಣೆ ಮಾಡಿದ ಕೀರ್ತಿ ಮಹಿಳೆಯರಿಗೆ ಸಲ್ಲುತ್ತದೆ ಎಂದರು.

ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್‌ ಖಾನ್‌, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಬಿಕೆ ತುಳಸಿ ಮಾಲಾ, ನಿವೃತ್ತ ಕುಲಪತಿ ಪ್ರೊ. ಬಿಜಿ ಮೂಲಿಮನಿ, ಬಿಜಾಪೂರ ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿ ಕ್ಷೇಮಾಧಿಕಾರಿ ಪ್ರೊ. ವಿಷ್ಣು ಶಿಂಧೆ, ಬೀದರ್ ಕಾಲೇಜಿನ ಪ್ರಾಚಾರ್ಯ ಪ್ರೊ ಮನೋಜಕುಮಾರ, ಪ್ರೊ. ರಾಜಕುಮಾರ ಹೊಸದೊಡ್ಡಿ ಇದ್ದರು.