52.25 ಕೋಟಿ ರು. ಮೈಷುಗರ್‌ ವಿದ್ಯುತ್‌ ಬಿಲ್‌ ಬಾಕಿ

| Published : Jun 30 2024, 12:50 AM IST

ಸಾರಾಂಶ

ಹಲವು ವರ್ಷಗಳಿಂದ ಹಲವಾರು ಕಾರಣಗಳಿಂದ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದ್ದ ಸಕ್ಕರೆ ಕಾರ್ಖಾನೆ, ಕಳೆದ ವರ್ಷ ಕಾಂಗ್ರೆಸ್ ಸರ್ಕಾರದ ಮುತುವರ್ಜಿಯಿಂದ ಪುನರಾರಂಭಗೊಂಡಿತು. ರಾಜ್ಯ ಸರ್ಕಾರ ಕಾರ್ಖಾನೆ ಪ್ರಾರಂಭೋತ್ಸವ, ಹಾಗೂ ಗ್ಯಾಂಗ್ ಗಳಿಗೆ ನೀಡಲು 15 ಕೋಟಿ ರು. ದುಡಿಯುವ ಬಂಡವಾಳಕ್ಕಾಗಿ (ವರ್ಕಿಂಗ್ ಕ್ಯಾಪಿಟಲ್) 35 ಕೋಟಿ ರು. ಸೇರಿ ಒಟ್ಟು 50 ಕೊಟಿ ರು. ಹಣವನ್ನು ಕಾರ್ಖಾನೆಯ ಪುನಶ್ಚೇತನಕ್ಕೆ ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಆರ್ಥಿಕ ಸಂಕಷ್ಟದಲ್ಲಿರುವ ಮೈಷುಗರ್‌ ಕಾರ್ಖಾನೆ 25 ವರ್ಷಗಳಿಂದ ವಿದ್ಯುತ್‌ ಬಿಲ್‌ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಒಟ್ಟು 52.25 ಕೋಟಿ ರು. ವಿದ್ಯುತ್‌ ಬಿಲ್ ಬಾಕಿ ಪಾವತಿಸುವಂತೆ ಸೆಸ್ಕಾಂ ಈಗಾಗಲೇ ನೋಟಿಸ್‌ ಜಾರಿಗೊಳಿಸಿದೆ. ಆದ್ದರಿಂದ ರಾಜ್ಯಸರ್ಕಾರ ವಿದ್ಯುತ್‌ ಬಿಲ್‌ ಬಾಕಿ ಮನ್ನಾ ಮಾಡುವಂತೆ ವಿಧಾನಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಅವರು ರಾಜ್ಯಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಇಂಧನ ಸಚಿವ ಕೆ.ಜೆ.ಜಾರ್ಜ್, ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿರುವ ಅವರು, ಕಾರ್ಖಾನೆ ಕೆಲವು ಅನಿವಾರ್ಯ ಕಾರಣಗಳಿಂದ ಕಳೆದ 25 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟಿಲ್ಲ. 52.25 ಕೋಟಿ ರು. ವಿದ್ಯುತ್ ಬಿಲ್ ಬಾಕಿ ಇರುವ ಬಗ್ಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಕಾರ್ಖಾನೆ ನೋಟಿಸ್ ನೀಡಿದೆ. 7 ದಿನಗಳಲ್ಲಿ ವಿದ್ಯುತ್ ಪಾವತಿ ಮಾಡುವಂತೆ ಜೂನ್ 3 ರಂದೇ ನೀಡಿದ ನೋಟಿಸ್ ನಲ್ಲಿ ತಿಳಿಸಲಾಗಿದೆ. ಆದರೆ, ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲ. ಕೋಟ್ಯಂತರ ರು. ನಷ್ಟದಲ್ಲಿದೆ. ಅಷ್ಟೊಂದು ಹಣವನ್ನು ವಿದ್ಯುತ್ ಬಿಲ್ ಗೆ ಪಾವತಿಸಿದರೆ, ಈ ಹಂಗಾಮಿನಲ್ಲಿ ಕಬ್ಬು ನುರಿಸುವುದೇ ಕಷ್ಟವಾಗಬಹುದು. ಇದರಿಂದ‌ ಈಗಾಗಲೇ ಕಾರ್ಖಾನೆ ನಂಬಿ ಕಬ್ಬು ಬೆಳೆದಿರುವ ರೈತರಿಗೆ ನಷ್ಟವಾಗಬಹುದು ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಂಡು ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಮನವಿ ಮಾಡಿದ್ದಾರೆ.ಹಲವು ವರ್ಷಗಳಿಂದ ಹಲವಾರು ಕಾರಣಗಳಿಂದ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದ್ದ ಸಕ್ಕರೆ ಕಾರ್ಖಾನೆ, ಕಳೆದ ವರ್ಷ ಕಾಂಗ್ರೆಸ್ ಸರ್ಕಾರದ ಮುತುವರ್ಜಿಯಿಂದ ಪುನರಾರಂಭಗೊಂಡಿತು. ರಾಜ್ಯ ಸರ್ಕಾರ ಕಾರ್ಖಾನೆ ಪ್ರಾರಂಭೋತ್ಸವ, ಹಾಗೂ ಗ್ಯಾಂಗ್ ಗಳಿಗೆ ನೀಡಲು 15 ಕೋಟಿ ರು. ದುಡಿಯುವ ಬಂಡವಾಳಕ್ಕಾಗಿ (ವರ್ಕಿಂಗ್ ಕ್ಯಾಪಿಟಲ್) 35 ಕೋಟಿ ರು. ಸೇರಿ ಒಟ್ಟು 50 ಕೊಟಿ ರು. ಹಣವನ್ನು ಕಾರ್ಖಾನೆಯ ಪುನಶ್ಚೇತನಕ್ಕೆ ನೀಡಲಾಗಿತ್ತು.

ಇದರ ಪರಿಣಾಮ ಕಳೆದ ವರ್ಷ ಕಾರ್ಖಾನೆ ರೈತರು ಬೆಳೆದ 2 ಲಕ್ಷ 41 ಸಾವಿರ ಟನ್ ಕಬ್ಬು ನುರಿಸಿತ್ತು. ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಹಣವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ. ಕಾರ್ಖಾನೆಯಿಂದ ರೈತರಿಗೆ ತುಂಬಾ ಅನುಕೂಲವಾಗುತ್ತಿದೆ. ಈ ವರ್ಷ ಕನಿಷ್ಠ 2 ಲಕ್ಷ 5 ಸಾವಿರ ಟನ್ ಕಬ್ಬನ್ನು ನುರಿಸುವ ಸಂಬಂಧ ರೈತರು ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಮೈಷುಗರ್‌ ಕಾರ್ಖಾನೆ 2024-25ನೇ ಸಾಲಿನ ಕಬ್ಬು ಅರೆಯುವಿಕೆ ಆರಂಭಿಸುವ ಸಲುವಾಗಿ ಜೂ.30ರಂದು ಬಾಯ್ಲರ್‌ಗೆ ಬೆಂಕಿ ಹಾಕಲಾಗುತ್ತಿದೆ. ಮುಂದಿನ ಒಂದು ವಾರ ಅಥವಾ ಹದಿನೈದು ದಿನದಲ್ಲಿ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭಗೊಳ್ಳುವುದರಿಂದ ಕಾರ್ಖಾನೆ ಯಾವುದೇ ಅಡಚಣೆ ಇಲ್ಲದೆ ಸರಾಗವಾಗಿ ನಡೆಯಲು ವಿದ್ಯುತ್‌ ಬಿಲ್ ಬಾಕಿ ಮನ್ನಾ ಮಾಡಬೇಕು ಎಂದು ಕೋರಿದ್ದಾರೆ.