ರಾಮನಗರ ಜಿಲ್ಲೆಯಲ್ಲಿ 56.45 ಕೋಟಿ ರು. ಮೊತ್ತದ ಉಚಿತ ವಿದ್ಯುತ್

| Published : Sep 01 2024, 01:53 AM IST

ರಾಮನಗರ ಜಿಲ್ಲೆಯಲ್ಲಿ 56.45 ಕೋಟಿ ರು. ಮೊತ್ತದ ಉಚಿತ ವಿದ್ಯುತ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹಜ್ಯೋತಿ ಯೋಜನೆಗೆ ಒಂದು ವರ್ಷ ಪೂರ್ಣಗೊಂಡಿದ್ದು, ಈ ಯೋಜನೆಯಡಿ ರಾಮನಗರ ಜಿಲ್ಲೆಯಲ್ಲಿ 56.45 ಕೋಟಿ ರುಪಾಯಿಗಳಿಗೂ ಅಧಿಕ ಮೊತ್ತದ ಉಚಿತ ‍ವಿದ್ಯುತ್ ಸರಬರಾಜು ಮಾಡಲಾಗಿದೆ.

ಗೃಹಜ್ಯೋತಿ ಯೋಜನೆಗೆ ಒಂದು ವರ್ಷ

ಈ ಯೋಜನೆ ಅಡಿಯಲ್ಲಿ 3,18,688 ಗ್ರಾಹಕರಿಗೆ ಶೂನ್ಯ ಬಿಲ್ । 2024ರ ಜುಲೈ ತಿಂಗಳಲ್ಲಿ 12.74 ಕೋಟಿ ರು. ಮೊತ್ತದ ವಿದ್ಯುತ್ ಪೂರೈಕೆ ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಗೃಹ ಬಳಕೆಗಾಗಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹಜ್ಯೋತಿ ಯೋಜನೆಗೆ ಒಂದು ವರ್ಷ ಪೂರ್ಣಗೊಂಡಿದ್ದು, ಈ ಯೋಜನೆಯಡಿ ರಾಮನಗರ ಜಿಲ್ಲೆಯಲ್ಲಿ 56.45 ಕೋಟಿ ರುಪಾಯಿಗಳಿಗೂ ಅಧಿಕ ಮೊತ್ತದ ಉಚಿತ ‍ವಿದ್ಯುತ್ ಸರಬರಾಜು ಮಾಡಲಾಗಿದೆ.

ಈ ಯೋಜನೆ ಅಡಿಯಲ್ಲಿ ಅರ್ಹ ಎಲ್ಲಾ ಕುಟುಂಬಗಳನ್ನು ನೋಂದಣಿ ಮಾಡಿ, ಬೆಸ್ಕಾಂ ವತಿಯಿಂದ ಜುಲೈ ಅಂತ್ಯದ ವೇಳೆಗೆ 12.74 ಕೋಟಿ ರು.ಗಳಷ್ಟು ಮೊತ್ತದ ಉಚಿತ ವಿದ್ಯುತ್ ಪೂರೈಕೆ ಮಾಡಿದ್ದರೆ, 2023ರ ಆಗಸ್ಟ್ ನಿಂದ 2024ರ ಜುಲೈ ತಿಂಗಳ ಅಂತ್ಯಕ್ಕೆ ಅದರ ಮೊತ್ತ ಒಟ್ಟು 56.45 ಕೋಟಿ ರು.ಗಳಾಗಿದ್ದು, ಹೆಚ್ಚಿನ ಗುರಿಯನ್ನು ಸಾಧಿಸಲಾಗಿದೆ.

ಜಿಲ್ಲೆಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಅರ್ಹರಿರುವ 3,18,688 ಕುಟುಂಬಗಳನ್ನು ಗೃಹಜ್ಯೋತಿ ಯೋಜನೆಯಡಿ ಈಗಾಗಲೇ ನೋಂದಣಿ ಮಾಡಿ ಅವರಿಗೆ ಶೂನ್ಯ ದರದ ವಿದ್ಯುತ್ ಬಿಲ್ ವಿತರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ (ಎಲ್.ಟಿ.1) ಮತ್ತು ಗೃಹಬಳಕೆಯ (ಎಲ್.ಟಿ.1) ಸೇರಿದಂತೆ ಒಟ್ಟು ಇರುವ ಸ್ಥಾವರ (ಮೀಟರ್) ಗಳ ಸಂಖ್ಯೆ 3,59,143 ಆಗಿದ್ದು, ಇದರಲ್ಲಿ ಯೋಜನೆಗೆ ಅರ್ಹವಾಗಿಲ್ಲದ ಸ್ಥಾವರಗಳು, ವಿವಿಧ ಕಾರಣಗಳಿಂದ ನೋಂದಣಿ ತಿರಸ್ಕರಿಸಿದ ಮತ್ತು ನೋಂದಣಿಗೆ ಆಸಕ್ತಿ ತೋರದ ಗ್ರಾಹಕರು ಇದ್ದಾರೆ. ಬಾಕಿ ಉಳಿದ ಎಲ್ಲಾ 3,18,688 ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯಡಿ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಕನಕಪುರ ತಾಲೂಕಿನಲ್ಲಿ 82,607 ಮತ್ತು ಅತಿ ಕಡಿಮೆ ಹಾರೋಹಳ್ಳಿ ತಾಲೂಕಿನಲ್ಲಿ 24,905 ಅರ್ಹ ಕುಟುಂಬಗಳನ್ನು ಗೃಹಜ್ಯೋತಿ ಯೋಜನೆ ಅಡಿಯಲ್ಲಿ ನೋಂದಣಿ ಮಾಡಲಾಗಿದೆ. ಉಳಿದಂತೆ ರಾಮನಗರ ತಾಲೂಕಿನಲ್ಲಿ 85,420, ಚನ್ನಪಟ್ಟಣ ತಾಲೂಕಿನಲ್ಲಿ 72,721 ಹಾಗೂ ಮಾಗಡಿ ತಾಲೂಕಿನಲ್ಲಿ 53,035 ಅರ್ಹ ಕುಟುಂಬಗಳು ನೋಂದಣಿಯಾಗಿವೆ.

ಗೃಹಜ್ಯೋತಿ ಯೋಜನೆ ಜಾರಿಯಾದಾಗಿನಿಂದ 2024ರ ಜುಲೈವರೆಗೆ ಜಿಲ್ಲೆಯಲ್ಲಿ ಬೆಸ್ಕಾಂನಿಂದ 56.45 ಕೋಟಿ ರು.ಗಳಿಗೂ ಅಧಿಕ ಮೊತ್ತದ ಉಚಿತ ವಿದ್ಯುತ್ ವಿತರಿಸಲಾಗಿದ್ದು, ರಾಮನಗರ ತಾಲೂಕಿನಲ್ಲಿ 19.85 ಕೋಟಿ, ಚನ್ನಪಟ್ಟಣ ತಾಲೂಕಿನಲ್ಲಿ 13.22 ಕೋಟಿ, ಕನಕಪುರ ತಾಲೂಕಿನಲ್ಲಿ 11.27 ಕೋಟಿ , ಹಾರೋಹಳ್ಳಿ ತಾಲೂಕಿನಲ್ಲಿ 4.57 ಕೋಟಿ ಹಾಗೂ ಮಾಗಡಿ ತಾಲೂಕಿನಲ್ಲಿ 7.53 ಕೋಟಿ ರುಪಾಯಿ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯನ್ನು ಶೇ. 100 ರಷ್ಟು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬೆಸ್ಕಾಂ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಲಾಖೆಯ ಸಿಬ್ಬಂದಿ ಜಿಲ್ಲೆಯ ಪ್ರತಿ ಮನೆಗಳಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಮಾಹಿತಿ ನೀಡುವುದರ ಮೂಲಕ ಹಾಗೂ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷ ಕ್ಯಾಂಪ್ ಗಳನ್ನು ಆಯೋಜಿಸಿ ಗ್ರಾಹಕರ ನೋಂದಣಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ರಾಮನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು. ಗೃಹಜ್ಯೋತಿ ಯೋಜನೆಯಡಿ ಜುಲೈ 2024 ರ ವರೆಗೆ 56.45 ಕೋಟಿ ರು. ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಿದ್ದು, ಪ್ರಸ್ತುತ ಆಗಸ್ಟ್ 2024 ರ ಮಾಹೆಯ ವಿದ್ಯುತ್ ಬಳಕೆಯ ಬಿಲ್ ಗಳು ಜನರೇಟ್ ಆಗಲಿವೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಬೆಸ್ಕಾಂ ವತಿಯಿಂದ ಅರ್ಹ ಎಲ್ಲ ಕುಟುಂಬಗಳನ್ನು ನೋಂದಣಿ ಮಾಡಿ, ಉಚಿತ ವಿದ್ಯುತ್ ಸರಬರಾಜು ಮಾಡುವ ಮೂಲಕ ಸಾಧನೆ ಮಾಡಲಾಗಿದೆ.

- ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ರಾಮನಗರ.

3.18 ಲಕ್ಷ ಕುಟುಂಬಗಳಿಗೆ ಶೂನ್ಯ ಬಿಲ್

ಕಳೆದ ಒಂದು ವರ್ಷದಲ್ಲಿ ಗೃಹಜ್ಯೋತಿ ಯೋಜನೆಗೆ 17.15 ಮಿಲಿಯನ್ ಯೂನಿಟ್ ಉಚಿತ ವಿದ್ಯುತ್ ಪೂರೈಕೆ ಮಾಡಲಾಗಿದ್ದು, 3.18 ಲಕ್ಷ ಕುಟುಂಬಗಳು ಶೂನ್ಯ ಬಿಲ್‌ಗೆ ಅರ್ಹತೆ ಪಡೆದಿದ್ದಾರೆ. ಉಳಿದ ಕುಟುಂಬಗಳು ನಿಗದಿತಗಿಂತ ಹೆಚ್ಚು ಯೂನಿಟ್ ಬಳಸಿದ್ದರಿಂದ ಅಲ್ಪ ಮೊತ್ತದ ದಂಡ ಅಥವಾ ಶುಲ್ಕ ಪಾವತಿಸುತ್ತಿದ್ದಾರೆ ಎಂದು ಬೆಸ್ಕಾಂನ ಮೂಲಗಳು ತಿಳಿಸಿವೆ.

ಇಂದಿಗೂ ನೋಂದಣಿ ಅವಕಾಶ

ಇಂದಿಗೂ ಗೃಹಜ್ಯೋತಿ ಯೋಜನೆಯ ನೋಂದಣಿಗೆ ಅವಕಾಶವಿದೆ. ಮನೆ ಬದಲಾವಣೆ ಮಾಡಿಕೊಳ್ಳುವವರು, ಹೊಸ ಮನೆ ಕಟ್ಟುವವರು ಕೂಡ ನೋಂದಣಿ ಮಾಡಿಕೊಳ್ಳಬಹುದು. ಅವರಿಗೆ ನಿಯಮಗಳಂತೆ ನಿಗದಿತ ಯೂನಿಟ್‌ಗಳು ಮಾತ್ರ ಉಚಿತ ಇರುತ್ತವೆ.

ಗೃಹ ವಿದ್ಯುತ್‌ ಗ್ರಾಹಕರು ಕಳೆದ ಒಂದು ವರ್ಷದಲ್ಲಿ ಮಾಸಿಕ ಬಳಸಿದ ಸರಾಸರಿ ಯೂನಿಟ್‌ಗೆ ಶೇಕಡಾ 10 ರಷ್ಟು ಹೆಚ್ಚುವರಿ ಯೂನಿಟ್‌ ಉಚಿತವಾಗಿರುತ್ತದೆ. ಅದಕ್ಕಿಂತ ಹೆಚ್ಚು ಬಳಸುವ ವಿದ್ಯುತ್‌ಗೆ ದರ ಪಾವತಿಸಬೇಕಾಗುತ್ತದೆ.

ಗೃಹಜ್ಯೋತಿ ಯೋಜನೆ ಅಂಕಿ ಅಂಶಗಳು

ನೋಂದಣಿಯಾದವರು - 3,18,688 ಲಕ್ಷ ಗ್ರಾಹಕರು

ಈವರೆಗೂ ಖರ್ಚಾದ ವೆಚ್ಚ - 56.45 ಕೋಟಿ ರು.

ಯೋಜನೆಯ ಮಾಸಿಕ ವೆಚ್ಚ - 12.74 ಕೋಟಿ ರು.