ಬ್ಯಾಡಗಿ ಮುಖ್ಯ ರಸ್ತೆ ಅಗಲೀಕರಣಕ್ಕಾಗಿ ಮತ್ತೆ ಹೋರಾಟ: ಗಂಗಣ್ಣ ಎಲಿ

| Published : May 20 2025, 01:38 AM IST

ಬ್ಯಾಡಗಿ ಮುಖ್ಯ ರಸ್ತೆ ಅಗಲೀಕರಣಕ್ಕಾಗಿ ಮತ್ತೆ ಹೋರಾಟ: ಗಂಗಣ್ಣ ಎಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯರಸ್ತೆ ಹೋರಾಟಕ್ಕೆ 14 ವರ್ಷ ತುಂಬುತ್ತ ಬಂದಿದೆ. ಇಷ್ಟಾದರೂ ಸಮಸ್ಯೆ ಪರಿಹಾರವಾಗಿಲ್ಲ.

ಬ್ಯಾಡಗಿ: ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು, ಕಂದಾಯ, ಪುರಸಭೆ, ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸತತ ವೈಫಲ್ಯದಿಂದಾಗಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಸಮಸ್ಯೆ ಇತ್ಯರ್ಥವಾಗದೇ ಉಳಿದಿದ್ದು, ಸಮಸ್ಯೆಗೆ ಪರಿಹಾರ ಆಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಅಗಲೀಕರಣ ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಎಚ್ಚರಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳೆಗಾಲ ಶುರುವಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಇದೇ ಸಮಯದಲ್ಲಿ ತಮ್ಮ ಎಲ್ಲ ಕೆಲಸ ಬದಿಗಿಟ್ಟು ಬ್ಯಾಡಗಿ ಪಟ್ಟಣಕ್ಕೆ ಭೇಟಿ ಕೊಟ್ಟಲ್ಲಿ ನಮ್ಮ ಜನರ ಗೋಳಿನ ಪ್ರತ್ಯಕ್ಷ ದರ್ಶನವಾಗಲಿದೆ. ನಮ್ಮಂತೆ ನೀವು ಮನುಷ್ಯರೇ ತಾನೇ? ಬನ್ನಿ ಮುಖ್ಯರಸ್ತೆಗೆ ಭೇಟಿ ಕೊಡಿ ಎಂದು ಸವಾಲು ಹಾಕಿದರು.

ಬೃಹತ್ ಹೋರಾಟ: ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಪಟ್ಟಣದ ಜನತೆಗೆ ಮೂಲ ಸೌಕರ‍್ಯಗಳನ್ನು ಕೇಳುವ ಹಕ್ಕನ್ನು ನಮ್ಮನ್ನಾಳುವ ಜನಪ್ರತಿನಿಧಿಗಳು ಕಳೆದ 13 ವರ್ಷಗಳಿಂದ ಕಿತ್ತುಕೊಂಡಿದ್ದಾರೆ. ಅಗಲೀಕರಣ ಸಮಸ್ಯೆಯನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಗೆಹರಿಸದೇ ಜೀವಂತವಾಗಿಡುವ ಕೆಲಸ ತೆರೆಮರೆಯಲ್ಲಿ ನಿರಂತರವಾಗಿ ಸಾಗಿದೆ ಎಂದು ಆರೋಪಿಸಿದರಲ್ಲದೇ ಇನ್ನು ಮುಂದೆ ಯಾರ ಭರವಸೆಗೂ ಬಗ್ಗಲ್ಲ ಜಗ್ಗಲ್ಲ. ಈ ಬಾರಿ ನಮ್ಮ ಹೋರಾಟ ಅಗಲೀಕರಣ ಆದ ನಂತರವೇ ಮುಗಿಯಲಿದೆ. ಇದಕ್ಕೆ ಸೂಕ್ತ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಕೂಡಲೇ ಬೃಹತ್ ಹೋರಾಟ ಆರಂಭವಾಗಲಿದೆ ಎಂದರು.25ರಂದು ಪೂರ್ವಭಾವಿ ಸಭೆ: ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ಮಾತನಾಡಿ, ಮುಖ್ಯರಸ್ತೆ ಹೋರಾಟಕ್ಕೆ 14 ವರ್ಷ ತುಂಬುತ್ತ ಬಂದಿದೆ. ಇಷ್ಟಾದರೂ ಸಮಸ್ಯೆ ಪರಿಹಾರವಾಗಿಲ್ಲ. ಈ ನಿಟ್ಟಿನಲ್ಲಿ ಮತ್ತೆ ಹೋರಾಟ ಅನಿವಾರ್ಯವಾಗಿದೆ. ಇದಕ್ಕೆ ಪಟ್ಟಣದ ಎಲ್ಲ ಸಂಘ- ಸಂಸ್ಥೆಗಳು, ಹೋರಾಟಗಾರರು, ನೌಕರರು ವರ್ತಕರ ಸಂಘ ಸೇರಿದಂತೆ ಪಟ್ಟಣದ ಜನರು ಹೋರಾಟಕ್ಕೆ ರೂಪುರೇಷೆಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮೇ 25ರಂದು ಪೂರ್ವಬಾವಿ ಏರ್ಪಡಿಸಲಾಗಿರುವ ಸಭೆಯಲ್ಲಿ ಎಲ್ಲರೂ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಸೂಚನೆ ನೀಡಿ ಹೋರಾಟಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪಾಂಡುರಂಗ ಸುತಾರ, ಈಶ್ವರ ಮಠದ, ಶಿವು ಕಲ್ಲಾಪುರ, ಚಂದ್ರು ಗದಗಕರ, ಹರೀಶ ರಿತ್ತಿ, ಪ್ರವೀಣ ಶಿಲ್ಪಿ, ಫರೀದಾಬಾನು ನದಿಮುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.