ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ೨೭೪ ಕೊಳವೆ ಬಾವಿಗಳನ್ನು ನಿರ್ಮಿಸಲಾಗಿತ್ತು. ಅವುಗಳ ನಿರ್ವಹಣೆಗಾಗಿ ೩೧ ಮಂದಿ ಪಂಪ್ ಆಪರೇಟರ್‌ಗಳನ್ನು ನೇಮಿಸಲಾಗಿತ್ತು. ಈಗ ನಿರ್ವಹಣೆಯನ್ನು ನಗರಸಭೆಯು ಜಲಸಿರಿ ಸುಪರ್ದಿಗೆ ನೀಡಲಾಗಿದ್ದು, ಬಹುತೇಕ ಪಂಪ್ ಆಪರೇಟರ್‌ಗಳನ್ನು ಕೈಬಿಡಲಾಗಿದೆ. ಇದರಿಂದಾಗಿ ನಗರಸಭೆಯಲ್ಲಿ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ನೀರಿನ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ನಗರಸಭೆ ಹಾಗೂ ಜಲಸಿರಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ವಿಪಕ್ಷ ನಾಯಕ ಎಚ್. ಮಹಮ್ಮದ್ ಆಲಿ ಎಚ್ಚರಿಕೆ ನೀಡಿದ್ದಾರೆ.ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಲಸಿರಿ ಯೋಜನೆ ಕಾಮಗಾರಿ ಸಂಪೂರ್ಣಗೊಳ್ಳುವ ಮೊದಲೇ ನೀರಿನ ಸಮಸ್ಯೆಯ ಸಾಧಕ- ಬಾಧಕಗಳನ್ನು ಪರಿಶೀಲಿಸದೆ ನಗರಸಭೆ ನೀರು ಸರಬರಾಜು ನಿರ್ವಹಣೆಯನ್ನು ಸುಯೇಜು ಕಂಪೆನಿ (ಜಲಸಿರಿ)ಯವರಿಗೆ ಪ್ರಾಯೋಗಿಕವಾಗಿ ನೀಡಿದೆ. ಜಲಸಿರಿಯವರು ೧೭೦ ಕೊಳವೆ ಬಾವಿಗಳ ನೀರು ಒದಗಿಸುವ ನಿರ್ವಹಣೆ ಮಾಡುತ್ತಿದ್ದ ೩೧ ಆಪರೇಟರ್‌ಗಳನ್ನು ಕೈಬಿಟ್ಟು ನಾಲ್ಕೈದು ಪಂಪ್ ಆಪರೇಟರ್‌ಗಳನ್ನು ಬಳಸಿಕೊಂಡು ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದಾಗಿ ನಗರಸಭೆಯ ಯಾವುದೇ ಝೋನ್‌ಗಳಿಗೆ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಅಲ್ಲದೆ ಜಲಸಿರಿಯ ಹೊಸ ಯೋಜನೆಯಿಂದಲೂ ನೀರು ವಿತರಣೆ ಆಗುತ್ತಿಲ್ಲ. ಜನರಿಗೆ ಅತ್ತ ಕೊಳವೆ ಬಾವಿಯಿಂದ ಇತ್ತ ಜಲಸಿರಿ ಯೋಜನೆಯಿಂದಲೂ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ನಗರಸಭೆಯ ಆಡಳಿತದಿಂದ ಆಗಿರುವ ಎಡವಟ್ಟು ಇದಕ್ಕೆಲ್ಲಾ ಕಾರಣವಾಗಿದೆ. ಹಿಂದೆ ಎಡಿಬಿ ಯೋಜನೆಯಲ್ಲಿ ಅನುಷ್ಠಾನಗೊಂಡ ಕುಡಿಯುವ ನೀರು ಯೋಜನೆ ವಿಫಲವಾಗಿದ್ದು, ಈಗಿನ ಜಲಸಿರಿ ಯೋಜನೆಯೂ ವಿಫಲವಾದಂತಾಗಿದೆ. ತಕ್ಷಣ ನೀರಿನ ಅಂಶ ಕಡಿಮೆ ಇರುವಲ್ಲಿ ಹೊಸದಾಗಿ ಕೊಳವೆಬಾವಿ ತೆರೆದು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಜಲಸಿರಿ ಹಾಗೂ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯ ರಿಯಾಝ್ ಪರ್ಲಡ್ಕ, ಮಾಜಿ ಸದಸ್ಯ ಮುಖೇಶ್ ಕೆಮ್ಮಿಂಜೆ, ನಗರ ಕಾಂಗ್ರೆಸ್ ಮುಖಂಡ ವಿಕ್ಟರ್ ಪಾಯಸ್ ಹಾಜರಿದ್ದರು.