ಸಾರಾಂಶ
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆ ಹೋಗಲಾಡಿಸಲು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟ ಮಾಡಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಖುಷ್ಕಿ ಪ್ರದೇಶದಲ್ಲಿ ನಿರೀಕ್ಷೆಗಿಂತ ಹೆಚ್ಚಿಗೆ ಬಿತ್ತನೆ ಮಾಡಲಾಗಿದೆ. ಇನ್ನೂ ಆಣೆಕಟ್ಟುಗಳ ಭರ್ತಿಯಾಗಿದ್ದರಿಂದ ನೀರಾವರಿ ಪ್ರದೇಶದಲ್ಲೂ ಬಿತ್ತನೆ ಮಾಡಲಾಗಿದೆ. ಬೆಳೆಗಳಿಗೆ ಈಗ ರಸಗೊಬ್ಬರದ ಅಗತ್ಯವಿದೆ. ಆದರೆ ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ನೀಡುತ್ತಿಲ್ಲ. ಇದರಿಂದ ರೈತರಿಗೆ ತೀವ್ರ ರಸಗೊಬ್ಬರ ಅಭಾವ ಉಂಟಾಗಿದೆ. ಇದರ ಮದ್ಯೆ ರಸಗೊಬ್ಬರದ ಅಕ್ರಮ ದಾಸ್ತಾನು ಮಾಡಿ ದುಪ್ಪಟ್ಟು ಬೆಲೆಗೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಇದು ಕೃಷಿ ಇಲಾಖೆಗೂ ಮಾಹಿತಿ ಇದೆ. ರಸಗೊಬ್ಬರ ಸಂಗ್ರಹಿಸಿದ ವ್ಯಕ್ತಿಗಳಿಗೆ ರಾಜಕೀಯ ಪ್ರಭಾವವಿದ್ದು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನ್ಯಾನೊ ಲಿಕ್ವಿಡ್ ಗೊಬ್ಬರ ಬಳಕೆ ಹೇಗೆಂದು ರೈತರಿಗೆ ಮಾಹಿತಿ ನೀಡಿಲ್ಲ. ಇದರಿಂದ ರೈತರು ನ್ಯಾನೊ ರಸಗೊಬ್ಬರ ಪಡೆಯುತ್ತಿಲ್ಲ. ಅಲ್ಲದೇ ನ್ಯಾನೋ ಗೊಬ್ಬರ ಕಂಪನಿಗಳ ಲಾಭಿಯೂ ರಸಗೊಬ್ಬರದ ಅಭಾವಕ್ಕೆ ಕಾರಣವಾಗಿರಬಹುದು. ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುತ್ತಾ ಕಾಲಹರಣ ಮಾಡದೇ ಕೂಡಲೇ ರಸಗೊಬ್ಬರಗಳ ವಿತರಣೆ ಮಾಡಬೇಕೆಂದು ಆಗ್ರಹಿಸಿದರು.ರೈತರಿಗೆ ಮಾರಕವಾದ ನೀತಿಗಳ ಪ್ರಕಟಿಸುತ್ತಿರುವ ಪ್ರಧಾನಿ ಮೋದಿ ಹಾಗೂ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಬಹುರಾಷ್ಟೀಯ, ಬಂಡವಾಳಗಾರರ ಪರವಾಗಿ ಕೆಲಸ ಮಾಡುತ್ತಿದ್ದು ಇದನ್ನು ಖಂಡಿಸಿ ಇದೇ ತಿಂಗಳ 13ರಂದು ಸಂಯುಕ್ತ ಕಿಸಾನ ಮೋರ್ಚಾದಿಂದ ಟ್ರಂಪ್ ಹಾಗೂ ಮೋದಿ ಪ್ರಕೃತಿ ದಹನ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಹನುಮನಗೌಡ, ಮಲ್ಲಣ್ಣ ಗೌಡೂರು, ಸೂಗೂರಯ್ಯ ಆದರ್ಶಮಠ, ಬಸನಗೌಡ ಸೇರಿದಂತೆ ಇದ್ದರು.