ಅನ್ಯಾಯ, ದೌರ್ಜನ್ಯದ ವಿರುದ್ಧವೂ ಹೋರಾಟ ಮಾಡಿ: ಪ್ರಭಾಕರ ನಾಯ್ಕ

| Published : Aug 19 2024, 12:47 AM IST

ಸಾರಾಂಶ

ಅನ್ನ ಕೊಡುವ ರೈತರನ್ನು, ದೇಶ ಕಾಯುವ ಯೋಧರನ್ನು, ದೇಶಾಭಿಮಾನ ಮೂಡಿಸುವ ಗುರುಗಳನ್ನು ಗೌರವಿಸಬೇಕು ಎಂದು ನಿವೃತ್ತ ಭಾರತೀಯ ಸೇನಾಧಿಕಾರಿ ಪ್ರಭಾಕರ ನಾಯ್ಕ ತಿಳಿಸಿದರು.

ಯಲ್ಲಾಪುರ: ದೇಶ ಕಾಯುವ ಕಾರ್ಯ ಗಡಿ ಕಾಯುವುದಕ್ಕೊಂದೇ ಸೀಮಿತವಾಗಿರದೇ, ದೇಶದ ಒಳಗೆ ನಡೆಯುವ ಅನ್ಯಾಯ, ದೌರ್ಜನ್ಯ ವಿರೋಧಿಸಿ, ಹೋರಾಡುವುದೂ ಸ್ವಾತಂತ್ರ್ಯ ಹೋರಾಟದ ಲಕ್ಷಣವೇ ಆಗಿದೆ. ಇಂದು ಎಲ್ಲ ಪ್ರಜೆಗಳೂ ಈ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಭಾರತೀಯ ಸೇನಾಧಿಕಾರಿ ಪ್ರಭಾಕರ ನಾಯ್ಕ ಹೇಳಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ಅವರು ಸಂದೇಶ ನುಡಿಗಳನ್ನಾಡಿದರು. ಅನ್ನ ಕೊಡುವ ರೈತರನ್ನು, ದೇಶ ಕಾಯುವ ಯೋಧರನ್ನು, ದೇಶಾಭಿಮಾನ ಮೂಡಿಸುವ ಗುರುಗಳನ್ನು ಗೌರವಿಸಬೇಕು. ನಾವಿಂದು ಸ್ವಾತಂತ್ರ್ಯದ ಸುಖ ಅನುಭವಿಸುತ್ತಿದ್ದೇವೆ. ಆದರೆ ಅದು ಅಷ್ಟು ಸುಲಭವಾಗಿ ದಕ್ಕಿಸಿಕೊಂಡಿದ್ದಲ್ಲ. ಅನೇಕ ಯೋಧರು ತಮ್ಮ ಪ್ರಾಣವನ್ನು ತೆತ್ತು ಸ್ವಾತಂತ್ರ‍್ಯವನ್ನು ಗಳಿಸಿಕೊಟ್ಟಿದ್ದಾರೆ. ಆದ್ದರಿಂದ ಇಂದು ನಾವೆಲ್ಲರೂ ಬಲಿದಾನ ನೀಡಿದ ಆ ಹುತಾತ್ಮರನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು.

ಧ್ವಜಾರೋಹಣ ನೆರವೇರಿಸಿದ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕೇವಲ ಶಿಕ್ಷಣ ಸಂಸ್ಥೆ, ಇಲಾಖೆಗಳು ಸ್ವಾತಂತ್ರ್ಯೋತ್ಸವ ಆಚರಿಸಿ, ಸಂಭ್ರಮಿಸುವ ರೂಢಿಯಿತ್ತು. ಆದರೆ, ಇಂದು ಹರ್ ಘರ್ ತಿರಂಗಾ ಅಭಿಯಾನವನ್ನು ನಮ್ಮ ಸರ್ಕಾರ ಘೋಷಿಸಿ, ಪ್ರತಿ ಮನೆಮನೆಗಳಲ್ಲಿ ಪ್ರತಿ ಪ್ರಜೆಯೂ ಸ್ವಾತಂತ್ರ್ಯವನ್ನು ಸಂಭ್ರಮಿಸುವ ಅವಕಾಶ ಕೊಟ್ಟಿದೆ. ದೇಶದ ಲಾಂಛನಗಳನ್ನು ಗೌರವಿಸುತ್ತಾ ಸತ್ಪ್ರಜೆಗಳಾಗೋಣ ಎಂದರು.

ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಪ್ರೇಮಾ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಮಹೇಶ್ ನಾಯ್ಕ ವಂದಿಸಿದರು. ಸಂತೋಷಿ ಜನರಲ್ ಸ್ಟೋರ್ಸ್ ಮಾಲೀಕ ವಾಮನ್ ನಾಯ್ಕ ಸಿಹಿ ವಿತರಿಸಿದರು.