ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ರೈತರ ಮೇಲೆ ನೈಸ್ ಕಂಪನಿ ನಡೆಸುತ್ತಿರುವ ದೌರ್ಜನ್ಯ ಮತ್ತು ರೈತ ಹೋರಾಟಗಾರರ ಮೇಲಿನ ಅಪಪ್ರಚಾರ ಖಂಡಿಸಿ ಆ. 29ರಂದು ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಹಾಗೂ ನೈಸ್ ಭೂ ಸ್ವಾಧೀನ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್. ವೆಂಕಟಾಚಲಯ್ಯ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಿಂದ ಮೈಸೂರಿನವರೆಗೆ ವೇಗದ ಹೆದ್ದಾರಿ ರಸ್ತೆ ನಿರ್ಮಾಣ ಸಂಬಂಧ ಸರ್ಕಾರ ನೈಸ್ ಕಂಪನಿ ಜೊತೆ ಮಾಡಿಕೊಂಡ ಕ್ರಿಯಾ ಒಪ್ಪಂದ ಮಾಡಿಕೊಂಡು 28 ವರ್ಷಗಳು ಕಳೆದಿದ್ದು, ನೈಸ್ ರಸ್ತೆ ನಿರ್ಮಾಣ ಕಾರ್ಯಗತವಾಗಿಲ್ಲ ಎಂದು ದೂರಿದರು.
ಈ ಯೋಜನೆಯಲ್ಲಿ 111 ಕಿ.ಮೀ. ಬೆಂಗಳೂರಿನಲ್ಲಿ 41ಕಿ.ಮೀ. ಫೆರಿಪೆರಲ್ ರಸ್ತೆ, 9.8 ಕಿ.ಮೀ. ಲಿಂಕ್ ರಸ್ತೆ ಹಾಗೂ ನಿಯೋಜಿತ ಸ್ಥಳಗಳಲ್ಲಿ 5 ಟೌನ್‌ಶಿಪ್‌ಗಳನ್ನು ನಿರ್ಮಾಣ ಮಾಡಬೇಕಾಗಿತ್ತು. ಇದ್ಯಾವ ಕೆಲಸಗಳು ಇದುವರೆಗೆ ಆಗಿಲ್ಲ. ಸರ್ಕಾರ ಈ ಯೋಜನೆಗೆ ಗುರುತಿಸಲಾಗಿದ್ದ ರೈತರ ಭೂಮಿಯ ಸ್ವಾಧೀನವನ್ನು ರದ್ದುಪಡಿಸದೆ ಹಾಗೇಯೆ ಮುಂದುವರೆಸಿಕೊಂಡು ಬರುತ್ತಿರುವುದು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಹೇಳಿದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿಪಡಿಸಿದ ಮೇಲೆ ಬಿಎಂಐಸಿ ಹೆದ್ದಾರಿ ಅಪ್ರಸ್ತುತವಾಗಿದೆ. ಆದರೆ ಬೆಂಗಳೂರು ದಕ್ಷಿಣ ತಾಲೂಕಿಗೆ ಹೊಂದಿಕೊಂಡ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ರೈತರಿಗೆ 28 ವರ್ಷದ ಹಿಂದಿನ ಭೂ ಸ್ವಾಧೀನವನ್ನು ನೆನಪಿಸಿ ಸಿವಿಲ್ ನ್ಯಾಯಾಲಯಗಳ ಆಜ್ಞೆ ತಂದು ಭೂಮಿ ತೆರವುಗೊಳಿಸುವಂತೆ ಬಲವಂತಪಡಿಸಲಾಗುತ್ತಿದೆ ಎಂದು ದೂರಿದರು.
ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಬಿ.ಎಂ.ಕಾವಲ್ ಅರಣ್ಯ ಇಲಾಖೆ ಮತ್ತು ಬಂಜಾರಪಾಳ್ಯದ ಸರ್ಕಾರಿ ಗೋಮಾಳ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಇದನ್ನು ಪ್ರಶ್ನಿಸಿದ ಸ್ಥಳೀಯ ರೈತರ ಮೇಲೆ ಗೂಂಡಾಗಳನ್ನು ಬಿಟ್ಟು ಬೆದರಿಸಿಲಾಗುತ್ತಿದೆ. ಅಲ್ಲದೆ ಹೋರಾಟ ಮಾಡುತ್ತಿರುವ ನಮ್ಮಗಳನ್ನು ನಕಲಿ ಹೋರಾಟ ಗಾರರೆಂದು ಬಿಂಬಿಸಿ, ಅಪಪ್ರಚಾರ ಮಾಡಿ ರೈತರಿಗೆ ಅಪಮಾನ ಮಾಡಲಾಗುತ್ತಿದೆ ಎಂದು ನೋವು ತೋಡಿ ಕೊಂಡರು.ಸುಮಾರು 28 ವರ್ಷಗಳ ಹಿಂದಿನ ಒಪ್ಪಂದವನ್ನು ಪರಿಶೀಲಿಸಿ ಒಪ್ಪಂದ ಉಲ್ಲಂಘನೆ, ರಿಯಲ್ ಎಸ್ಟೇಟ್ ಭೂ ಕಬಳಿಕೆ ಹಗರಣಗಳ ದೂರು, ನೈಸರ್ ಯೋಜನೆಯನ್ನು ಸಂಪೂರ್ಣ ರದ್ದು ಪಡಿಸುವ ಟಿ.ಬಿ.ಜಯಚಂದ್ರರವರ ಅಧ್ಯಕ್ಷತೆ ಸದನ ಸಮಿತಿ ಶಿಫಾರಸ್ಸು, ಭೂ ಸ್ವಾಧೀನ ಹೊರಡಿಸಿದರು ಯೋಜನೆ ಕಾರ್ಯಗತವಾಗಿಲ್ಲ. ಈ ಸಂಬಂಧ ಕೆಐಎಡಿಬಿ ಭೂ ಸ್ವಾಧೀನ ರದ್ದು ಪಡಿಸಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ನೈಸ್ ಯೋಜನೆಯ ಅಕ್ರಮಗಳಿಗೆ ಕಡಿವಾಣ ವಿಧಿಸಿರುವ ಸುಪ್ರೀ ಕೋರ್ಟ್ ರೈತರು ತಮ್ಮ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ಪ್ರಶ್ನಿಸಿ ಸಲ್ಲಿಸಿರುವ ವಿಚಾರಣಾ ಹಂತದಲ್ಲಿರುವ ಸಹಸ್ರಾರು ದಾವೆಗಳ ಹಿನ್ನೆಲೆಯಲ್ಲಿ ಯೋಜನೆ ಬಗ್ಗೆ ಕ್ರಮ ವಹಿಸಲು ಸಲಹೆ ನೀಡುವಂತೆ ಗೃಹ ಸಚಿವ ಜಿ.ಪರಮೇಶ್ವರ ರವರ ನೇತೃತ್ವದಲ್ಲಿ ಹಲವಾರು ಸಚಿವರನ್ನೊಳಗೊಂಡ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ. ಆದರೂ ನೈಸ್ ಕಂಪನಿ ತನ್ನ ಹಳೆಯ ಚಾಳಿಯನ್ನು ಬಿಡದೇ ಮುಂದುವರೆಸಿ ಕಾನೂನಿನ ಆಳ್ವಿಕೆಗೆ ಸವಾಲು ಹಾಕುತ್ತಿದೆ ಎಂದು ವೆಂಕಟಚಾಲಯ್ಯ ಆರೋಪಿಸಿದರು.ಸುದ್ದಿಗೋಷ್ಟಿಯಲ್ಲಿ ನೈಸ್ ಭೂ ಸ್ವಾಧೀನ ಹೋರಾಟ ಸಮಿತಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷ ರಾದ ಸಿದ್ದರಾಮಯ್ಯ, ಕುಂಟೀರಪ್ಪ, ಜಿಲ್ಲಾ ಕಾರ್ಯ ದರ್ಶಿ ಚಂದ್ರಶೇಖರ್, ಸಹ ಕಾರ್ಯದರ್ಶಿ ರಾಜೇಶ್, ನಗರ ಜಿಲ್ಲಾ ಉಪಾಧ್ಯಕ್ಷ ಸಣ್ಣ ರಂಗಯ್ಯ ಮತ್ತಿತರರು ಇದ್ದರು.
28ಕೆಆರ್ ಎಂಎನ್ 2.ಜೆಪಿಜಿನೈಸ್ ಭೂ ಸ್ವಾಧೀನ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ವೆಂಕಟಾ ಚಲಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.