ಕೃಷಿ ಕಾಯ್ದೆ ವಿರುದ್ಧ ಹೋರಾಟ: ರೈತರ ಮೇಲಿನ ಪ್ರಕರಣ ಜಿಲ್ಲಾ ನ್ಯಾಯಾಲಯದಲ್ಲಿ ರದ್ದು

| Published : Jan 09 2025, 12:45 AM IST

ಕೃಷಿ ಕಾಯ್ದೆ ವಿರುದ್ಧ ಹೋರಾಟ: ರೈತರ ಮೇಲಿನ ಪ್ರಕರಣ ಜಿಲ್ಲಾ ನ್ಯಾಯಾಲಯದಲ್ಲಿ ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ 3 ಕರಾಳ ಕೃಷಿ ಕಾನೂನು ವಿರೋಧಿಸಿ ಹೋರಾಟ ನಡೆಸಿದ ಜಿಲ್ಲೆಯ ರೈತ ಮುಖಂಡರ ಮೇಲೆ ದಾಖಲಾದ ಪ್ರಕರಣವನ್ನು ಜ.7ರಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಿಂಪಡೆದಿರುವುದಾಗಿ ಘೋಷಿಸಿದ ಹಿನ್ನೆಲೆ ನ್ಯಾಯಾಲಯದಿಂದ ಹೊರಬಂದ ರೈತ ಮುಖಂಡರು ರೈತ ಸಂಘದ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಹರ್ಷ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಈ ಸಂದರ್ಭ ರೈತ ಮುಖಂಡ ನಜೀರಸಾಬ ಮೂಲಿಮನಿ ಮಾತನಾಡಿ, 2020ರಲ್ಲಿ ರೈತ ಹೋರಾಟ ಬೆಂಬಲಿಸಿ ದೇಶಾದ್ಯಂತ ಪ್ರತಿಭಟನೆ ನಡೆದಿದ್ದವು. ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯು ಸಹಿತ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯ ಮುಂದಿನ ರಾಜ್ಯ ಹೆದ್ದಾರಿಯ ಮುಂದೆ ಪ್ರತಿಭಟನೆ ಮಾಡಿ ಅರ್ಧ ಗಂಟೆಗಳ ಕಾಲ ರಸ್ತೆ ತಡೆ ಮಾಡಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಜಿಲ್ಲೆಯ 30 ರೈತ ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗಿತ್ತು ಎಂದರು.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ರೈತರನ್ನು ಸುಮಾರು ನಾಲ್ಕು ವರ್ಷಗಳ ಕಾಲ ಕೊಪ್ಪಳದ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿತ್ತು. 2023ರಲ್ಲಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಮೇಲೆ ಇರುವ ಪ್ರಕರಣ ಹಿಂಪಡೆಯುತ್ತೇವೆ ಎಂದು ಭರವಸೆಯನ್ನು ನೀಡಿತ್ತು. ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ತನ್ನ ಮಾತನ್ನು ಉಳಿಸಿಕೊಂಡಿದೆ ಎಂದರು.

ಈ ಸಂದರ್ಭ ಶಂಕರಗೌಡ ಪಾಟೀಲ್, ಮಹಾಂತಮ್ಮ ಪಾಟೀಲ್, ಆರ್.ಕೆ. ದೇಸಾಯಿ, ವೆಂಕಟೇಶ್ ಕುಲಕರ್ಣಿ, ಶರಣಯ್ಯ ಮುಳ್ಳೂರು ಮಠ, ರವಿ ಅರಿಯರ್, ವೀರೇಶ್ ಹಣವಾಳ, ದೊಡ್ಡನಗೌಡ ಬಿಜಿಕಲ್, ಈರಣ್ಣ ಇಂದ್ರಗಿ, ಶಿವಪ್ಪ ಇಂದಿರಗಿ, ಸುಂದರರಾಜ್ ಕಾರಟಗಿ, ಬಸವರಾಜ್ ಮರಕುಂಬಿ, ಗಣೇಶ್ ರೆಡ್ಡಿ, ಶರಣಪ್ಪ ಕಮತರ, ಶರಣಪ್ಪ ಬಚಲಾಪುರ್, ಬಾಲಪ್ಪ ಆಡಿನ ಇತರರಿದ್ದರು.