ಗಲ್ಲಿ ಕ್ರಿಕೆಟ್‌ನಲ್ಲಿ ಮಕ್ಕಳ ನಡುವಿನ ಜಗಳ ವಿಷಯ ದೊಡ್ಡವರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಮಾರಾಮಾರಿ ನಡೆದು, ಕಲ್ಲು ತೂರಾಟ ಕೂಡ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕ್ರಿಕೆಟ್ ಆಟವಾಡುತ್ತಿದ್ದ ಹುಡುಗರ ಮಧ್ಯ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಮಾರಾಮಾರಿ ಹಾಗೂ ಕಲ್ಲು ತೂರಾಟ ನಡೆದ ಘಟನೆ ನಗರದ ಶಹಪೂರ ಪ್ರದೇಶದ ಅಳ್ವಾನ ಗಲ್ಲಿಯಲ್ಲಿ ಗುರುವಾರ ನಡೆದಿದೆ. ಗಲಾಟೆಯಲ್ಲಿ 8 ಜನರು ಗಾಯಗೊಂಡಿದ್ದಾರೆ.

ಗಲ್ಲಿ ಕ್ರಿಕೆಟ್‌ನಲ್ಲಿ ಮಕ್ಕಳ ನಡುವಿನ ಜಗಳ ವಿಷಯ ದೊಡ್ಡವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೈ ಕೈಮೀಲಾಸುವ ಹಂತಕ್ಕೆ ಹೋಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಕೈಯಲ್ಲಿ ತಲ್ವಾರ್‌ ಹಿಡಿದು ಓಡಾಟ ಮಾಡಲಾಗಿದೆ ಎಂದು ಸ್ಥಳೀಯರಲ್ಲಿ ಚರ್ಚೆ ನಡೆದಿದೆ. ಘಟನೆ ಕುರಿತು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆಗೆ ಮುಂದಾದ ಶಹಾಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳೀಯರು ಪೊಲೀಸ್‌ ಠಾಣೆಯ ಮುಂದೆ ಜಮಾಯಿಸಿ ಪರಸ್ಪರ ಆರೋಪ ಮಾಡುತ್ತ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಜನರನ್ನು ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್, ಡಿಸಿಪಿ ರೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

-------ಕ್ರಿಕೆಟ್ ಆಡುವಾಗ ಸಣ್ಣ ಗಲಾಟೆ ಆಗಿದೆ. ಅದಾದ ಬಳಿಕ ಎಲ್ಲರೂ ಮನೆಗೆ ತೆರಳಿದ್ದಾರೆ. ಇದಾದ ಬಳಿಕ ಸ್ವಲ್ಪ ಜಗಳ ಆಗಿದೆ. ತಕ್ಷಣ ನಮ್ಮ ಪೊಲೀಸರು ಸ್ಥಳಕ್ಕೆ ತೆರಳಿ ಕಾನೂನು ಸುವ್ಯವಸ್ಥೆ ಹತೋಟಿಗೆ ತಂದಿದ್ದಾರೆ. ಈಗ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗ ದೂರ ದಾಖಲಾಗುತ್ತಿದೆ. ನಮ್ಮ ತನಿಖೆಯಲ್ಲಿ ಸಿಸಿ ಟಿವಿ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಕ್ರಿಕೆಟ್ ವಿಚಾರಕ್ಕೆ ಗಲಾಟೆಯಾಗಿದೆ. ಅದನ್ನು ನಾವು ನಿಭಾಯಿಸುತ್ತಿದ್ದೇವೆ.

-ಇಡಾ ಮಾರ್ಟಿನ್‌, ಪೊಲೀಸ್ ಆಯುಕ್ತ.