ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಕೆಎಸ್ಆರ್ ಟಿಸಿ ಗ್ರಾಮಾಂತರ ಬಸ್ ನಿಲ್ದಾಣ ಸ್ಥಳಾಂತರಕ್ಕೆ ಮೈಸೂರು ಕೆಎಸ್ಆರ್ ಟಿಸಿ ಸಬರ್ಬನ್ ಬಸ್ ನಿಲ್ದಾಣ ಉಳಿಸಿ ಹೋರಾಟ ಸಮಿತಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ.ನಗರದ ಹೃದಯ ಭಾಗದಲ್ಲಿರುವ ಕೇಂದ್ರ ಬಸ್ ನಿಲ್ದಾಣವನ್ನು ಯಾವುದೇ ಕಾರಣಕ್ಕೂ ಬನ್ನಿಮಂಟಪಕ್ಕೆ ಸ್ಥಳಾಂತರ ಮಾಡಬಾರದು ಎಂದು ಸಮಿತಿ ಸಂಚಾಲಕರಾದ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ಈಗಾಗಲೇ ನರ್ಮ್ ಯೋಜನೆಯಡಿ ಸಾತಗಳ್ಳಿ, ನಾಯ್ಡುನಗರ, ಇಲವಾಲ, ಕುವೆಂಪುನಗರ ಬಸ್ ಡಿಪೋಗಳ ಬಳಿ ನಿರ್ಮಾಣ ಮಾಡಿರುವ ಬಸ್ ನಿಲ್ದಾಣಗಳೆಲ್ಲವೂ ನಿಷ್ಕ್ರಿಯವಾಗಿವೆ. ನೂರಾರು ಕೋಟಿ ವೆಚ್ಚ ಮಾಡಿ ಕಟ್ಟಿದ್ದರೂ ನಿರುಪಯುಕ್ತವಾಗಿವೆ. ಈಗ ಸಬರ್ಬನ್ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರ ಮಾಡಿದರೆ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತದೆ. ಅದು ಕೂಡ ನಿರುಪಯುಕ್ತವಾಗುವ ಸಾಧ್ಯತೆ ಇದೆ ಎಂದರು.ಸಬರ್ಬನ್ ಬಸ್ ನಿಲ್ದಾಣ ನಗರದ ಹೃದಯ ಭಾಗದಲ್ಲಿರುವುದರಿಂದ ಎಲ್ಲದಕ್ಕೂ ಅನುಕೂಲವಾಗಿದೆ. ದಸರಾ ಸಂಧರ್ಭದಲ್ಲಿ ಮಾತ್ರ ಒಂದಷ್ಟು ಜನ ದಟ್ಟಣೆಯಾಗುತ್ತದೆಯೇ ಹೊರತು ಉಳಿದ ಸಮಯದಲ್ಲಿ ಏನೂ ಸಮಸ್ಯೆ ಆಗುವುದಿಲ್ಲ. ಕೇಂದ್ರ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರ ಮಾಡುವ ಬದಲು ಪಕ್ಕದಲ್ಲೇ ಇರುವ ಪೀಪಲ್ಸ್ ಪಾರ್ಕ್ ಮತ್ತು ಸರ್ಕಾರಿ ಅತಿಥಿಗೃಹ ಆವರಣದ ಒಂದಷ್ಟು ಜಾಗವನ್ನು ಪಡೆದು ವಿಸ್ತರಣೆ ಮಾಡಬಹುದು ಎಂದು ಅವರು ತಿಳಿಸಿದರು.ಯಾವುದೇ ಕಾರಣಕ್ಕೂ ಕೇಂದ್ರ ಬಸ್ ನಿಲ್ದಾಣವನ್ನು ಸ್ಥಳಾಂತರ ಮಾಡಬಾರದು ಎಂದು ಮುಖ್ಯಮಂತ್ರಿ, ಸಾರಿಗೆ ಸಚಿವರಿಗೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಇದೆ ಎಂದು ಅವರು ಹೇಳಿದರು.ಈಗಿರುವ ಬಸ್ ನಿಲ್ದಾಣವು ಎಲ್ಲದಕ್ಕೂ ಹತ್ತಿರದಲ್ಲಿದ್ದು, ಎಲ್ಲರಿಗೂ ಅನುಕೂಲಕರವಾಗಿದೆ. ಒಂದು ವೇಳೆ ಇದನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸಿದಲ್ಲಿ ಎಲ್ಲಾ ಸ್ಥಳಗಳಿಗೂ ಹೋಗಿ ಬರುವುದು ಪ್ರವಾಸಿಗಳು ಹಾಗೂ ಸಾರ್ವಜನಿಕರಿಗೆ ಕಷ್ಟಕರವಾಗಲಿದೆ ಎಂದರು.ಸಮಿತಿ ಅಧ್ಯಕ್ಷ ರವಿಶಾಸ್ತ್ರಿ, ಉಪಾಧ್ಯಕ್ಷರಾದ ಶ್ರೀಹರಿ, ಕೆ.ಬಿ. ಲಿಂಗರಾಜು, ಬಿ.ಎಸ್. ಪ್ರಶಾಂತ್, ರವಿಕುಮಾರ್, ಕಾರ್ಯದರ್ಶಿ ಸಿ.ಎ. ಜಯಕುಮಾರ್, ಸಹ ಕಾರ್ಯದರ್ಶಿಗಳಾದ ಮಹೇಶ್ ಕಾಮತ್, ಎಸ್.ಜೆ. ಅಶೋಕ್ ಇದ್ದರು.