ಸಾರಾಂಶ
-ವಿದ್ಯಾರ್ಥಿಗಳಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಕರೆ
----ಕನ್ನಡಪ್ರಭವಾರ್ತೆ ಚಿತ್ರದುರ್ಗ
ವಿದ್ಯಾರ್ಥಿಗಳು ಭ್ರಷ್ಚಾಚಾರ ವಿರುದ್ಧ ಹೋರಾಡುವ ಮನೋಭಾವ ರೂಢಿಸಿಕೊಳ್ಳಬೇಕೆಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಕರೆ ನೀಡಿದರು.ಸಮಾಜ ಕಲ್ಯಾಣ ಇಲಾಖೆಯಿಂದ ನಗರದಲ್ಲಿ ನಡೆಸುತ್ತಿರುವ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯಗಳು ಹಾಗೂ ಮಕ್ಕಳ ರಕ್ಷಣಾ ಘಟಕದಿಂದ ನಿರ್ವಹಿಸುತ್ತಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಭ್ರಷ್ಟಾಚಾರದಿಂದ ದೇಶ ಇನ್ನೂ ಅಭಿವೃದ್ಧಿಯಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಇಂದಿನ ಯುವಜನತೆಯ ಕೈಯಲ್ಲೇ ದೇಶದ ಮುಂದಿನ ಭವಿಷ್ಯವಿದೆ. ಮುಂದುವರೆದ ರಾಷ್ಟ್ರಗಳ ಸಾಲಿಗೆ ದೇಶವು ಸೇರ್ಪಡೆಯಾಗಬೇಕು. ಇದಕ್ಕೆ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.ನ್ಯಾ.ಕೆ.ಎನ್.ಫಣೀಂದ್ರ ನಗರದ ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಸ್ಟೆಲ್ ನಿರ್ವಹಣೆಯಲ್ಲಿ ಸಾಕಷ್ಟು ಲೋಪದೋಷ ಕಂಡು ಬಂದಿದ್ದವು. ಆದರೆ, ಹಾಸ್ಟೆಲ್‍ಗಳಲ್ಲಿ ಇದಕ್ಕೆ ಆಸ್ಪದ ನೀಡಿಲ್ಲ ಎಂದರು.
ಜಿಲ್ಲೆಯ ಹಾಸ್ಟೆಲ್‍ಗಳ ನಿರ್ವಹಣೆಗೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ವಾರಕ್ಕೊಮ್ಮೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ವಿದ್ಯಾರ್ಥಿಗಳೊಂದಿಗೆ ಆಹಾರ ಸೇವಿಸಿ ಗುಣಮಟ್ಟ ಪರೀಕ್ಷಿಸುತ್ತಾರೆ. ಮೂಲಭೂತ ಸೌಕರ್ಯಗಳ ಬಗ್ಗೆಯೂ ವರದಿ ನೀಡುತ್ತಾರೆ. ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು ಹಾಗೂ ಆಸ್ಪತ್ರೆಗಳ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಡಿಎಂಎಫ್, ಕೆಎಂಇಆರ್‌ಸಿ, ಸಿಎಸ್‍ಆರ್ ಅನುದಾನದಲ್ಲಿ ಹೆಚ್ಚಿನ ಹಣವನ್ನು ಈ ಕ್ಷೇತ್ರಗಳ ಅಭಿವೃದ್ಧಿ ಮೀಸಲಿರಿಸಿರುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಜಿಪಂ ಸಿಇಒ ಎಸ್.ಜೆ ಸೋಮಶೇಖರ್, ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ವಿವರಿಸಿದರು.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿನ ಪಿಯು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕಾ ಕೇಂದ್ರ ಹಾಗೂ ಲೈಬ್ರರಿ ತೆರೆಯಲು ನ್ಯಾ. ಕೆ.ಎನ್.ಫಣೀಂದ್ರ ಸೂಚಿಸಿದರು. ಸರ್ಕಾರಿ ನೇಮಕಾತಿಗಳಲ್ಲಿ ಕಂಪ್ಯೂಟರ್ ಸಾಕ್ಷರತೆ ಕಡ್ಡಾಯಗೊಳಿಸಲಾಗಿದೆ. ಉನ್ನತ ಶಿಕ್ಷಣಕ್ಕೂ ಕಂಪ್ಯೂಟರ್ ಜ್ಞಾನ ಅವಶ್ಯಕ. ವಿದ್ಯಾರ್ಥಿಗಳು ಕಲಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅನುಕೂಲವಾಗುವಂತೆ, ಸಿಎಸ್‍ಆರ್ ನಿಧಿಯಡಿ ಕಂಪ್ಯೂಟರ್ ಕೇಂದ್ರ ಹಾಗೂ ಲೈಬ್ರರಿ ತೆರೆಯಲು ಹೇಳಿದರು.
ಪೋಷಕರು ಬಾಲಮಂದಿರ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಾಲಮಂದಿರದ ಮಕ್ಕಳಿಗೆ ಜಿಪಂ ಸಿಇಒ ಸೋಮಶೇಖರ್ ಅವರು ಸ್ವಂತ ಹಣದಲ್ಲಿ ವಿವಿಧ ಬಗೆಯ ಆಟಿಕೆಗಳನ್ನು ಪೂರೈಸಿದ್ದನ್ನು ತಿಳಿದು, ನ್ಯಾಯಮೂರ್ತಿಗಳು ಸಂತಸ ವ್ಯಕ್ತಪಡಿಸಿದರು.ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾ.ಕಿರಣ್ ಪಿ.ಎಂ ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ.ಎಂ.ವಿಜಯ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ್ ಇದ್ದರು.
-------------ಪೋಟೋ: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಬಾಲಕಿಯರ ಹಾಸ್ಟೆಲ್ ಗೆ ಭೇಟಿ ನೀಡಿ ಸಂವಾದ ನಡೆಸಿದರು.
-------ಫೋಟೋ: 25 ಸಿಟಿಡಿ2