ಖರೀದಿ ಕೇಂದ್ರದ ಎದುರು ವಾರಗಟ್ಟಲೆ ಮೆಕ್ಕೆಜೋಳ ಚೀಲ ತುಂಬಿಸಿಕೊಂಡ ಟ್ರ್ಯಾಕ್ಟರ್‌ಗಳು ಸರದಿ ಸಾಲಿನಲ್ಲಿ ನಿಂತಲ್ಲಿಯೇ ನಿಂತಿದ್ದು, ಸ್ವಂತ ಟ್ರ್ಯಾಕ್ಟರ್ ಇಲ್ಲದ ರೈತರು ವಿನಾಕಾರಣ ಬಾಡಿಗೆ ತುಂಬಬೇಕಾಗಿದ್ದು, ಖರೀದಿ ಅಧಿಕಾರಿಗಳ ವಿರುದ್ಧ ಅವರು ರೊಚ್ಚಿಗೆದ್ದಿದ್ದಾರೆ.
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಈವರೆಗೆ ನೋಂದಣಿ ಆಗಿರುವ ಎಲ್ಲ ರೈತರಿಂದ ಮೆಕ್ಕೆಜೋಳ ಖರೀದಿಸಬೇಕು. ಇಲ್ಲದಿದ್ದರೆ ಕೇಂದ್ರದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಸಮಗ್ರ ರೈತಪರ ಹೋರಾಟಗಾರರ ಮುಖಂಡರಾದ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ ಎಚ್ಚರಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬರೋಬ್ಬರಿ ಹದಿನೆಂಟು ದಿನಗಳ ಹೋರಾಟದ ನಂತರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಜಿಲ್ಲಾಡಳಿತ ಖರೀದಿ ಕೇಂದ್ರ ಆರಂಭಿಸಿದೆ. ಆದರೆ ಖರೀದಿ ಮಾತ್ರ ಆಮೆವೇಗದಲ್ಲಿ ನಡೆದಿರುವುದು ಅನುಮಾನಗಳಿಗೆ ಕಾರಣವಾಗಿದೆ. ತಪಾಸಣೆ ನೆಪದಲ್ಲಿ ಮಾರಾಟಕ್ಕೆ ತಂದಿರುವ ಮೆಕ್ಕೆಜೋಳವನ್ನು ಖರೀದಿಸುತ್ತಿಲ್ಲ. ಅಲ್ಲದೆ ಸರದಿ ಪ್ರಕಾರ ಖರೀದಿ ನಡೆಯುತ್ತಿಲ್ಲ ಎಂದರು.ಖರೀದಿ ಕೇಂದ್ರದ ಎದುರು ವಾರಗಟ್ಟಲೆ ಮೆಕ್ಕೆಜೋಳ ಚೀಲ ತುಂಬಿಸಿಕೊಂಡ ಟ್ರ್ಯಾಕ್ಟರ್‌ಗಳು ಸರದಿ ಸಾಲಿನಲ್ಲಿ ನಿಂತಲ್ಲಿಯೇ ನಿಂತಿದ್ದು, ಸ್ವಂತ ಟ್ರ್ಯಾಕ್ಟರ್ ಇಲ್ಲದ ರೈತರು ವಿನಾಕಾರಣ ಬಾಡಿಗೆ ತುಂಬಬೇಕಾಗಿದ್ದು, ಖರೀದಿ ಅಧಿಕಾರಿಗಳ ವಿರುದ್ಧ ಅವರು ರೊಚ್ಚಿಗೆದ್ದಿದ್ದಾರೆ. ಕಾರಣ ಜಿಲ್ಲಾಧಿಕಾರಿಗಳು ಬೇಗನೇ ಸಮಸ್ಯೆ ಬಗೆಹರಿಸಿ ನೋಂದಣಿ ಮಾಡಿರುವ ಎಲ್ಲ ರೈತರಿಂದ ಮೆಕ್ಕೆಜೋಳ ಖರೀದಿಸುವಂತೆ ಸೂಚಿಸಬೇಕು. ರೈತರಿಂದ ಯಾವುದೇ ರೀತಿಯ ಹಣ ತೆಗೆದುಕೊಳ್ಳದಂತೆ ಆದೇಶಿಸಬೇಕು. ಇಲ್ಲದಿದ್ದರೆ ಕೇಂದ್ರದ ಆರಂಭಕ್ಕಾಗಿ ನಡೆದ ಹೋರಾಟವನ್ನೇ ಮತ್ತೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ರವಿಕಾಂತ ಅಂಗಡಿ, ಪೂರ್ಣಾಜಿ ಖರಾಟೆ ಮಾತನಾಡಿ, ಮೆಕ್ಕೆಜೋಳ ಖರೀದಿಸಲು ರೈತರಿಂದ ಹಣ ಪಡೆದುಕೊಳ್ಳುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಇದರೊಂದಿಗೆ ಖರೀದಿ ಮಾಡುವವರು ರೈತರ ಮೆಕ್ಕೆಜೋಳವನ್ನು ಸರಿಯಾಗಿ ಪರೀಕ್ಷೆ ಮಾಡದೆ ಹಣ ಕೊಟ್ಟವರ ಫಸಲನ್ನು ಮಾತ್ರ ಖರೀದಿಸುತ್ತಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಗಮನ ಹರಿಸಿ ಆದಷ್ಟು ಬೇಗನೇ ಎಲ್ಲ ರೈತರಿಂದ ಮೆಕ್ಕೆಜೋಳ ಖರೀದಿಸಲು ಆದೇಶಿಸಬೇಕು. ಈವರೆಗೆ ಮಾರಾಟ ಮಾಡಿರುವ ರೈತರ ಖಾತೆ ನಯಾಪೈಸೆ ಕೂಡ ಬಂದಿಲ್ಲ. ಆದಷ್ಟು ಬೇಗನೇ ರೈತರ ಖಾತೆಗೆ ಹಣ ಹಾಕಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಟಾಕಪ್ಪ ಸಾತಪುತೆ, ಬಸವರಾಜ ಹಿರೇಮನಿ, ಪವನ ಬಂಕಾಪುರ, ಎನ್.ಆರ್. ಸಾತಪುತೆ ಮತ್ತಿತರರು ಇದ್ದರು.