ಹಿಂದಿ ಬಲವಂತದ ಹೇರಿಕೆಯಾದರೆ ಹೋರಾಟ: ಶಿವರಾಮೇಗೌಡ

| Published : Dec 29 2024, 01:18 AM IST

ಸಾರಾಂಶ

ಹಿಂದಿ ಭಾಷೆ ಹೇರುವ ಮೊದಲು ಕೇಂದ್ರ ಸರ್ಕಾರದ ಕಚೇರಿಗಳು ಹಿಂದಿಮಯವಾಗಿವೆ.

ಕುರುಗೋಡು: ಹಿಂದಿ ಬಲವಂತದ ಹೇರಿಕೆಯಾದರೆ ಹೋರಾಟ ಮುಂದುವರೆಯುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಶಿವರಾಮೇಗೌಡ ಎಚ್ಚರಿಸಿದರು.

ಪಟ್ಟಣದಲ್ಲಿ ದೊಡ್ಡ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ವತಿಯಿಂದ ಮಂಗಳವಾರ ಜರುಗಿದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದಿ ಭಾಷೆ ಹೇರುವ ಮೊದಲು ಕೇಂದ್ರ ಸರ್ಕಾರದ ಕಚೇರಿಗಳು ಹಿಂದಿಮಯವಾಗಿವೆ. ಹಿಂದಿ ಕಡ್ಡಾಯಗೊಳಿಸಿದರೆ ರಾಜ್ಯದ ಕಚೇರಿಗಳಲ್ಲೂ ಹಿಂದಿ ಪ್ರಭಾವ ಹೆಚ್ಚಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯ ಏಕೀಕರಣವಾಗಿ ಹಲವು ದಶಕ ಕಳೆದರೂ ಮಹಾರಾಷ್ಟ್ರ ಗಡಿಯಲ್ಲಿ ಕನ್ನಡಿಗರ ಮೇಲೆ ಹಿಂಸಾಚಾರ ನಿಂತಿಲ್ಲ. ಮುಂದುವರೆದರೆ ಹೋರಾಟದ ದಾರಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಬಳ್ಳಾರಿ ಗಡಿ ಭಾಗದ ಅಡ್ಲಿಗೆ, ಬಸರಗೋಡು, ಕಚ್ಚಿಡು ಗ್ರಾಮಗಳ ವಸತಿ ಶಾಲೆಗಳಿಗೆ ಹೆಚ್ಚಿನ ಅನುದಾನ ಕೊಡುತ್ತೇನೆ. ಕನ್ನಡದ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ ಎಂದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕರವೇ ಜಿಲ್ಲಾಧ್ಯಕ್ಷ ಕೆ.ರಾಜಶೇಖರ್, ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಕರವೇ ಯುವ ಜಿಲ್ಲಾಧ್ಯಕ್ಷ ಅಧ್ಯಕ್ಷ ಮೃತ್ಯುಂಜಯ, ರಾಯಚೂರು ಜಿಲ್ಲೆ ಕರವೇ ಜಿಲ್ಲಾಧ್ಯಕ್ಷ ಅಶೋಕ್, ಕರವೇ ತಾಲೂಕು ಅಧ್ಯಕ್ಷ ಗುಡಿಸಿಲಿ ರಾಜು, ಹಂಪಿ ಬಸವರಾಜ, ಲೋಕೇಶ್ ಯಾದವ್ ಇದ್ದರು.