ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ತಾಲೂಕಿನ ಪಡುಕೊಣಾಜೆ ಹಾಗೂ ಮೂಡುಕೊಣಾಜೆ ಗ್ರಾಮದ ರೈತರ ಕೆಲವು ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಿರುವುದು ರೈತ ವಿರೋಧಿ ಹಾಗೂ ಕಾನೂನುಬಾಹಿರ. ರೈತರ ಮೇಲೆ ದಬ್ಬಾಳಿಕೆ ಮುಂದುವರಿದಲ್ಲಿ, ತೀವ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಎಚ್ಚರಿಸಿದ್ದಾರೆ.ಅವರು ಕೃಷಿ ಭೂಮಿ, ಮಠ, ಮಂದಿರ, ರುದ್ರಭೂಮಿಯ ಆಸ್ತಿಗಳನ್ನು ವಕ್ಫ್ ಕಾಯ್ದೆ ಹೆಸರಿನಲ್ಲಿ ಕಬಳಿಸುತ್ತಿರುವುದರ ವಿರುದ್ಧ ಹಾಗೂ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಮೂಡುಬಿದಿರೆ ತಾಲೂಕು ಸಂಘಟನೆಯು ಶುಕ್ರವಾರ ನಡೆಸಿದ ಪ್ರತಿಭಟನಾ ಜಾಥಾವನ್ನುದ್ದೇಶಿಸಿ ಮಾತನಾಡಿದರು.ಅಳಿಯೂರು ಘಟಕದ ಅಧ್ಯಕ್ಷ ಪ್ರವೀಣ್ ಭಟ್ ಕಾನಂಗಿ ಮನವಿ ಪತ್ರವನ್ನು ವಾಚಿಸಿದರು. ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ವಕೀಲ, ಪ್ರಗತಿಪರ ಕೃಷಿಕ ಎಂ.ಎಸ್. ಕೋಟ್ಯಾನ್, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ಉಪಾಧ್ಯಕ್ಷ ವಲೇರಿಯನ್ ಕುಟಿನ್ಹ, ಗುಣಪಾಲ್ ಮುದ್ಯ, ರಾಧಾಕೃಷ್ಣ ಶೆಟ್ಟಿ ಮಾರ್ಪಾಡಿ, ಪ್ರಾಂತ ಸದಸ್ಯ ಸುಬ್ರಾಯ ರೈ ಪುತ್ತೂರು, ಪಾಲಡ್ಕ ಗ್ರಾ.ಪಂ. ಸದಸ್ಯ ಜಗದೀಶ್ ಕೋಟ್ಯಾನ್, ಪ್ರಗತಿಪರ ಕೃಷಿಕರಾದ ಸುಧಾಕರ್ ಅಂಚನ್, ಜಗದೀಶ್ ಕೋಟ್ಯಾನ್ ಕಲ್ಲೊಟ್ಟು, ರೈತ ಮುಖಂಡರು, ರೈತರು ಉಪಸ್ಥಿತರಿದ್ದರು. ಸರ್ಕಾರಿ ಆಸ್ಪತ್ರೆಯ ಮುಂಭಾಗದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಜಾಥದ ಮೂಲಕ ಸಾಗಿ ಪ್ರಭಾರ ತಹಸೀಲ್ದಾರ್ ಪಿ. ಶ್ರವಣ್ ಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.