ಕೇಂದ್ರದ ಅನ್ಯಾಯ ವಿರುದ್ಧ ನಾಳೆ ದೆಹಲಿಯಲ್ಲಿ ಹೋರಾಟ: ಶಾಸಕ ಬಿಆರ್‌ ಪಾಟೀಲ್‌

| Published : Feb 06 2024, 01:31 AM IST / Updated: Feb 06 2024, 01:45 PM IST

ಕೇಂದ್ರದ ಅನ್ಯಾಯ ವಿರುದ್ಧ ನಾಳೆ ದೆಹಲಿಯಲ್ಲಿ ಹೋರಾಟ: ಶಾಸಕ ಬಿಆರ್‌ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದಿಂದ ಐದು ವರ್ಷದಲ್ಲಿ ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಫೆ.7ರಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ರಾಜ್ಯದ ಜನಹಿತ ಕಾಯುವುದಕ್ಕಾಗಿ ಪ್ರತಿಭಟನೆ ನಡೆಸೋದಾಗಿ  ಶಾಸಕ ಬಿ.ಆರ್. ಪಾಟೀಲ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಆಳಂದ

ಕೇಂದ್ರ ಸರ್ಕಾರದಿಂದ ಐದು ವರ್ಷದಲ್ಲಿ ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ 62 ಸಾವಿರ ಕೋಟಿ ರು.ಗಳು ನಷ್ಟ ಹಾಗೂ ಬರ ಪರಿಹಾರ ನಿರ್ಲಕ್ಷ್ಯ ಸೇರಿ ರಾಜ್ಯಕ್ಕೆ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಫೆ.7ರಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ರಾಜ್ಯದ ಜನಹಿತ ಕಾಯುವುದಕ್ಕಾಗಿ ಪ್ರತಿಭಟನೆ ನಡೆಸೋದಾಗಿ ಸಿಎಂ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಹೇಳಿದ್ದಾರೆ.

ಖಜೂರಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಿಪಂ ಹಾಗೂ ತಾಪಂ ಆಡಳಿತ ಆಶ್ರಯದಲ್ಲಿ ಹಮ್ಮಿಕೊಂಡ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಹಕ್ಕಿಗಾಗಿ ಹೋರಾಟ: ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚಗ್ಯಾರಂಟಿ ಮೂಲಕ ಬಡವರಿಗೆ ಮತ್ತು ಮಹಿಳೆಯರಿಗೆ ನೆರವಾದರೆ ಕೇಂದ್ರ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆ ಹುಸಿಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಜನರ ಖಾತೆಗೆ ತಲಾ 15 ಲಕ್ಷ ರುಪಾಯಿ ನೀಡುತ್ತೇವೆ. ವರ್ಷಕ್ಕೆ 2 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುತ್ತೇವೆ ಮತ್ತು ರೈತರ ಬೆಳೆದ ಉತ್ಪನ್ನಗಳಿಗೆ ದುಪ್ಪಟ್ಟು ಬೆಲೆ ಕೊಡುವ ಭರವಸೆ ಸಂಪೂರ್ಣ ಹುಸಿಗೊಳಿಸಿ ಜನತೆಗೆ ಮೋಸಮಾಡಿ, ಜನತೆಯ ತೆರಿಗೆ ಹಣವನ್ನು ಬಂಡವಾಳ ಶಾಹಿಪರವಹಿಸಿದೆ ಎಂದು ಆರೋಪಿಸಿದರು.

ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಕಾಂಗ್ರೆಸ್ ಪ್ರತಿಪಾದಿಸಿ ಈ ದಿಕ್ಕಿನಲ್ಲಿ ಸಾಗಿದರೆ, ಬಿಜೆಪಿ ಜಾತಿ, ಧರ್ಮಗಳ ಮಧ್ಯ ಕಂದಕವನ್ನು ಸೃಷ್ಟಿಸಿ ಜನರಿಗೆ ಸುಳ್ಳು ಭರವಸೆಗಳು ನೀಡಿ ಮೋಸಮಾಡಿ ಅಧಿಕಾರಕ್ಕೆ ಬರುತ್ತಿದೆ. ಜನ ಸಾಮಾನ್ಯರಿಗೆ ಯಾರಿಂದ ಜನಪರ ಕೆಲಸ ನಡೆದಿವೆ ಎಂಬುದು ಅರಿತುಕೊಂಡಿದ್ದಾರೆ ಬಿಜೆಪಿ ಸುಳ್ಳಿನ ಸಾಮ್ರಾಜ್ಯ ಇನ್ನೂಮುಂದೆ ನಡೆಯುವುದಿಲ್ಲ ಎಂದರು.

ಪಿಡಿಒ ಅಮಾನತಿಗೆ ಸೂಚನೆ: ಖಜೂರಿಯಲ್ಲಿ ನಡೆದ ಪಂಚಗ್ಯಾರಂಟಿ ಸಮಾವೇಶದಲ್ಲಿ ಜನತೆಗೆ ನೆರಳು, ಆಸನಗಳ ಕೊರತೆಯಂತಹ ಅವ್ಯವಸ್ಥೆಗೆ ಸಿಡಿಮಿಡಿಗೊಂಡ ಶಾಸಕರು ಪಿಡಿಒನನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಜಿಪಂ ಸಿಇಒ ಅವರಿಗೆ ಕರೆ ಮಾಡಿ ಸೂಚನೆ ನೀಡಿದರು.

ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ಪ್ರಚಾರದಂತ ಕಾರ್ಯಕ್ರಮಗಳಿಗೆ ನಿರ್ಲಕ್ಷ್ಯ ವಹಿಸುವ ಯಾರೇ ಆಗಿರಲಿ ಅವರನ್ನು ತಕ್ಕ ಶಾಸ್ತಿ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಸಭೆಯಲ್ಲಿ ಅಧಿಕಾರಿಗಳ ವಿರುದ್ಧವೂ ಸಹ ಶಾಸಕರು ಗುಡಗಿದರು. ತಾಪಂ ಇಒ ಮಾನಪ್ಪ ಕಟ್ಟಿಮನಿ ಮಾತನಾಡಿ, ಸಮಾವೇಶಕ್ಕೆ ನಿರೀಕ್ಷೆ ಮೀರಿ ಜನ ಬಂದಿದೆ. ಸುವ್ಯವಸ್ಥೆಗೆ ತೊಂದರೆ ಆಗಿದೆ ಎಂದು ಜನತೆಗೆ ಕ್ಷಮೆ ಕೋರಿದರು.

ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಗ್ರಾಪಂ ಅಧ್ಯಕ್ಷೆ ಸುನೀತಾ ಮಗರೆ, ಉಪಾಧ್ಯಕ್ಷ ತಿಪ್ಪಣ್ಣಾ ಬಂಡೆ, ಕೆಪಿಸಿಸಿ ಸದಸ್ಯ ರಾಜಶೇಖರ ಪಾಟೀಲ ಚಿತಲಿ, ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ, ಭೀಮರಾವ್ ಢಗೆ, ಸಿಪಿಐ ಮಹಾದೇವ ಪಂಚಮುಖಿ, ಸಿಡಿಪಿಒ ಶ್ರೀಕಾಂತ ಮೇಂಗಜಿ, ಜೆಸ್ಕಾಂ, ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಮತ್ತು ವಲಯದ ಮುಖಂಡರು, ಅಧಿಕಾರಿಗಳು ಫಲಾನುಭವಿಗಳು ಉಪಸ್ಥಿತರಿದ್ದರು.

ಶಾಸಕರ ಭರವಸೆ: ಖಜೂರಿಗೆ ಸರ್ಕಾರಿ ಡಿಗ್ರಿ ಕಾಲೇಜು, ಅಂತರ್ಜಲ ವೃದ್ಧಿ ರಸ್ತೆ ಶಾಲಾ ದುರಸ್ಥಿ ಸೇರಿ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಶಾಸಕ ಬಿ.ಆರ್. ಪಾಟೀಲ ಭರವಸೆ ನೀಡಿದರು. ಶಾಸಕ ಬಿ.ಆರ್. ಪಾಟೀಲರಿಗೆ ಕೋರಣೇಶ್ವರ ಟ್ರಸ್ಟ್‌ ಮುಖಂಡರು, ನ್ಯಾಯ ಬೆಲೆ ಅಂಗಡಿಗಳ ಸಂಘ ಸೇರಿ ರೈತರು ಸನ್ಮಾನಿಸಿದರು. ದಿನವೀಡಿ ಗೃಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಯುವ ಶಕ್ತಿ ಯೋಜನೆಗಳ ವಂಚಿತ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲು ಸಂಬಂಧಿತ ಇಲಾಖೆಯ ಕೇಂದ್ರ ತೆರೆದು ಅರ್ಜಿ ವಿಲೆವಾರಿ ನಡೆಯಿತು.