ಸಾರಾಂಶ
ಯಲ್ಲಾಪುರ: ಸಮಾಜದಲ್ಲಿ ತುಳಿತಕ್ಕೊಳಗಾದ ೬ ಸಮುದಾಯದ ಜನರ ಬದುಕಿಗೆ ಮಾರ್ಗದರ್ಶನದ ಜೊತೆ ಕಣ್ಣನ್ನೇ ನೀಡಿದ ಅದರಲ್ಲೂ ಬುಡಕಟ್ಟು ಸಮುದಾಯದ ಬೆನ್ನಿಗೆ ನಿಂತ ಶಿವಪ್ಪ ಪೂಜಾರಿ ಕಟ್ಟಿ ಬೆಳೆಸಿದ ಟೀಡ್ ಸಂಸ್ಥೆ. ಅದರಲ್ಲೂ ಅರಣ್ಯ ವಾಸಿಗಳ ಬದುಕಿಗೆ ನೆಲೆ ನೀಡುತ್ತಿರುವ ಈ ಸಂಸ್ಥೆ ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಮಹತ್ವದ್ದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಅವರು ಬುಧವಾರ ಪಟ್ಟಣದ ಶಾರದಾಗಲ್ಲಿಯ ಬುಡಕಟ್ಟು ಜನರ ಶೈಕ್ಷಣಿಕ ಮತ್ತು ಪರಿಸರ ಅಭಿವೃದ್ಧಿ ಟೀಡ್ ಟ್ರಸ್ಟ್ ಶಿವಪ್ಪ ಪೂಜಾರಿ ಗ್ರಾಮೀಣಾಭಿವೃದ್ಧಿ ಸಂಪನ್ಮೂಲ ಕೇಂದ್ರದ ಸಭಾಭವನದಲ್ಲಿ ರಜತಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
೨೦೦೬ರಲ್ಲಿ ಕೇಂದ್ರ ಸರ್ಕಾರ ಅರಣ್ಯ ವಾಸಿಗಳಿಗಾಗಿ ಕಾನೂನು ತಂದ ಪರಿಣಾಮ ಅನೇಕರಿಗೆ ಆ ಜಮೀನಿನ ಹಕ್ಕು ಲಭಿಸಿದೆ. ಕಾನೂನಿನ ಹಲವು ತೊಡಕುಗಳಿಂದಾಗಿ ಇನ್ನು ಅನೇಕರಿಗೆ ಜಮೀನಿನ ಹಕ್ಕು ಲಭಿಸಿಲ್ಲ. ಈ ಕುರಿತು ರಾಜ್ಯ ಸರ್ಕಾರ ಕಾನೂನಿಗೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ನಾನು ಸಚಿವನಾಗಿರುವಾಗಿನಿಂದಲೂ ಈ ಕುರಿತು ರಾಜ್ಯ ಕೇಂದ್ರದ ಮೇಲೆ ಒತ್ತಡ ಹೇರಿದ್ದೇನೆ. ರವೀಂದ್ರನಾಥ ನಾಯ್ಕ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಜಿಲ್ಲೆಯಲ್ಲಿ ೧,೧೬,೦೦೦ ಅರಣ್ಯ ವಾಸಿಗಳಿದ್ದಾರೆ. ಇವರೆಲ್ಲರಿಗೂ ನ್ಯಾಯ ದೊರೆಯುವಂತೆ ಪಕ್ಷಾತೀತ ನೆಲೆಯಲ್ಲಿ ನಾವೆಲ್ಲ ಹೋರಾಟ ನಡೆಸಬೇಕು ಎಂದ ಅವರು, ಶಿವಪ್ಪನವರ ನಿಧನದ ನಂತರ ಮೋಹಿನಿ ಪೂಜಾರಿ ಸ್ತ್ರೀಶಕ್ತಿ ಸಂಘಟನೆ ಮೂಲಕ ಸಮಾಜಮುಖಿಯಾಗಿ ಮಾದರಿಯಾದ ಕೆಲಸವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ ಎಂದರು.ಪಂಚಾಯತ ರಾಜ್ಯ ವಿಕೇಂದ್ರೀಕರಣ ಯೋಜನೆ-ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ಸವಾಲು ಸಹಜ. ಅದನ್ನು ಎದುರಿಸಿ ಮೋಹಿನಿ ಅಪೂರ್ವ ಸಾಧನೆ ಮಾಡಿದ್ದಾರೆ. ಪುರುಷರೇ ತಾವು ಮೇಲೆಂಬ ಭ್ರಮೆಯಿದೆ. ಆದರೆ ಜಗತ್ತಿನಲ್ಲಿ ತಾಯಂದಿರ ಶಕ್ತಿಯನ್ನು ಎಲ್ಲ ಕ್ಷೇತ್ರದಲ್ಲಿ ಕಾಣುತ್ತಿದ್ದೇವೆ. ಮಹಿಳಾ ಶಕ್ತಿ ಅಗಾಧವಾದುದು. ಮಹಿಳೆಯರಷ್ಟು ನಿಷ್ಠೆ, ಪ್ರಾಮಾಣಿಕತನ ಪುರುಷರಲ್ಲಿ ಕಾಣಲಾಗದು. ಆ ದೃಷ್ಟಿಯಿಂದ ಸ್ವಉದ್ಯೋದಲ್ಲಿ ಮಹಿಳೆಯರು ಮುಂದೆ ಬಂದು ಜಗತ್ತಿನ ಭವಿಷ್ಯತ್ತು ರೂಪಿಸಲು ಕಾರಣರಾಗಬೇಕು ಎಂದರು.
ಟೀಡ್ ಟ್ರಸ್ಟ್‌ನ ಟ್ರಸ್ಟೀ ಡಾ.ವಿಜಯಲಕ್ಷ್ಮೀ ಭೋಸ್ಲೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸಿಎ ಎಸ್.ಬಿ. ಶೆಟ್ಟಿ ರಜತ ಮಹೋತ್ಸವ ನಿಮಿತ್ತ "ಪಯಣ " ಕಿರುಹೊತ್ತಿಗೆ ಬಿಡುಗಡೆಗೊಳಿಸಿದರು.
ಬುಡಕಟ್ಟು ಜನರ ಜಂಟಿ ಕ್ರಿಯಾ ವೇದಿಕೆ ಪ್ರವರ್ತಕ ಎಂ.ಟಿ.ಗೌಡ, ಚೇತನಾ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಕಾಮಾಕ್ಷಿ ರಾಯ್ಕರ್, ಮುಂಡಗೋಡಿನ ಜ್ಞಾನಜ್ಯೋತಿ ಒಕ್ಕೂಟದ ಅಧ್ಯಕ್ಷೆ ಗುತ್ತೆವ್ವ ಮಣ್ಣೂರು ಸಾಂದರ್ಭಿಕವಾಗಿ ಮಾತನಾಡಿದರು.ಹುಣಶೆಟ್ಟಿಕೊಪ್ಪದ ಆರಾಧನಾ ಸ್ವಸಹಾಯ ಸಂಘದ ಸದಸ್ಯರು ಪ್ರಾರ್ಥಿಸಿದರು. ಟ್ರಸ್ಟ್ ಮುಖ್ಯಸ್ಥೆ ಮೋಹಿನಿ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಬೊಮ್ಮು ತೋರ್ವತ್ ಸ್ವಾಗತಿಸಿದರು. ವನಿತಾ ಮಹಾಂತೇಶ ನಿರ್ವಹಿಸಿದರು. ಶಾಂತಿ ಸಿದ್ದಿ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))