ಬಸನಗೌಡ ಪಾಟೀಲ ಯತ್ನಾಳರು ಜಾತಿಗಳ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು, ನೀವು ಕರೆದಲ್ಲಿ ನಾನು ಬರುತ್ತೇನೆ. ನಿಮ್ಮ ಬಳಿ ಧಮ್ ಇದ್ದರೆ ನೇರಾ ನೇರವಾಗಿ ಪ್ರಶ್ನೋತ್ತರ ಮಾಡೋಣ. ನೇರವಾಗಿ ನನ್ನ ಜೊತೆ ಹೋರಾಡಿ ರಾಜಕೀಯವಾಗಿ ಮೇಲೆ ಬರಲು ಪ್ರಯತ್ನಿಸಿ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಶಾಸಕ ಯತ್ನಾಳರಿಗೆ ಸವಾಲು ಹಾಕಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಸನಗೌಡ ಪಾಟೀಲ ಯತ್ನಾಳರು ಜಾತಿಗಳ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು, ನೀವು ಕರೆದಲ್ಲಿ ನಾನು ಬರುತ್ತೇನೆ. ನಿಮ್ಮ ಬಳಿ ಧಮ್ ಇದ್ದರೆ ನೇರಾ ನೇರವಾಗಿ ಪ್ರಶ್ನೋತ್ತರ ಮಾಡೋಣ. ನೇರವಾಗಿ ನನ್ನ ಜೊತೆ ಹೋರಾಡಿ ರಾಜಕೀಯವಾಗಿ ಮೇಲೆ ಬರಲು ಪ್ರಯತ್ನಿಸಿ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಶಾಸಕ ಯತ್ನಾಳರಿಗೆ ಸವಾಲು ಹಾಕಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮುಸ್ಲಿಂ ಎಂಬ ಕಾರಣಕ್ಕೆ ಶಾಸಕ ಯತ್ನಾಳರು ಜಾತಿ ಜಾತಿಗಳ ಮಧ್ಯೆ ಹಾಗೂ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಶೇ.30ರಷ್ಟು ಹಿಂದೂಗಳೂ ನನಗೆ ಮತ ಹಾಕಿದ್ದಾರೆ. ಹಾಗಾಗಿ ಹಿಂದೂ-ಮುಸ್ಲಿಂ ಎರಡೂ ಜನರು ನನಗೆ ಎರಡು ಕಣ್ಣುಗಳಿದ್ದಂತೆ. ಅಂತಹ ಜನರ ಮೇಲೆ ನಾವು ದಬ್ಬಾಳಿಕೆ ಮಾಡಿಲ್ಲ, ಮಾಡುವುದೂ ಇಲ್ಲ ಎಂದರು.ಮಾತೆತ್ತಿದರೆ ಹಿಂದೂ-ಮುಸ್ಲಿಂ ಎನ್ನುವ ನೀವು ಮಾತನಾಡುವುದನ್ನು ಬಿಟ್ಟು ಒಳ್ಳೆಯ ಕನ್ನಡ ಶಾಲೆಗಳನ್ನು ನಿರ್ಮಿಸಲಿ ನಾನು ಗೂಂಡಾ ಇದ್ದೇನೆ ಎಂದು ಹೇಳುವ ಯತ್ನಾಳರೇ ಸ್ವತಃ ಗೂಂಡಾ ಆಗಿದ್ದಾರೆ. ಬಿಜೆಪಿಯವರು ಅವರನ್ನು ಹೊರಗೆ ಹಾಕಿದ್ದಾರೆ. ಆದರೂ ಬಿಜೆಪಿಯ ಜಪ ಮಾಡುತ್ತಾರೆ. ತಮಗೆ ಹಿಂದೂಗಳು ಯಾರು ವೋಟ್ ಹಾಕಿಲ್ಲವೋ ಅವರ ವೋಟು ಕತ್ತರಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಗರ ಮತಕ್ಷೇತ್ರದ ಮತದಾರರಿಗೆ ವಿನಾಕಾರಣ ಗೊಂದಲ ಮಾಡಬಾರದು. ಈಗಾಗಲೇ ಮೃತಪಟ್ಟವರು ಹಾಗೂ ಊರು ಬಿಟ್ಟು ಹೋಗಿರುವವರನ್ನು, ಎರಡೂ ಕಡೆಗಳಲ್ಲಿ ಮತದಾರರಾಗಿರುವವರನ್ನು ತೆಗೆದುಹಾಕಿ ಒಂದೇ ಕಡೆ ಉಳಿಸಬೇಕು. ಆದರೆ ಎಸ್‌ಐಆರ್ ವಿಚಾರದಲ್ಲಿ ಅಧಿಕಾರಿಗಳು ಶಾಸಕ ಯತ್ನಾಳರ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿದರು.ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, ಕಳೆದ 40 ವರ್ಷಗಳಿಂದ ಹಮೀದ ಮುಶ್ರೀಫ್ ಅವರು ಹಿಂದೂ-ಮುಸ್ಲಿಂ ಎನ್ನುವ ಬೇಧಭಾವ ಇಲ್ಲದೆ ಸಮಾಜ ಸೇವೆ ಮಾಡುತ್ತಿದ್ದಾರೆ. ಆದರೆ ರಾಜಕೀಯ ದೃಷ್ಟಿಯಿಂದ ವೈಯಕ್ತಿಕವಾಗಿ ಮಾತನಾಡುವುದು ಯತ್ನಾಳರಿಗೆ ಶೋಭೆ ತರುವಂತಹದ್ದಲ್ಲ. ಬಿಜೆಪಿಯಲ್ಲಿ ಶಿಸ್ತಿನಿಂದ ಇಲ್ಲದ್ದರಿಂದಲೇ ಅವರನ್ನು ಹೊರಹಾಕಿದ್ದಾರೆ. ಜನರಲ್ಲಿ ಧಾರ್ಮಿಕ ವಿಷಬೀಜ ಬಿತ್ತಿ ಮತ ಪಡೆಯುವುದು ಇವರ ಚಾಳಿಯಾಗಿದೆ. ಇನ್ನುಮೇಲೆ ನಿಮ್ಮ ಆಟ ನಡೆಯುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮುಖಂಡರಾದ ಅಪ್ಪು ಪೂಜಾರಿ, ವಸಂತ ಹೊನಮೊಡೆ, ಸಂತೋಷ ಬಾಲಗಾವಿ, ಫಯಾಜ್ ಕಲಾದಗಿ ಇದ್ದರು.