ಕೋಲಾರ ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳಿಲ್ಲದ ಕಾರಣ ರೈತರು ಕೃಷಿಗೆ ಮಳೆಯನ್ನೇ ಆಶ್ರಯಿಸುವಂತಾಗಿದೆ. ಕುಡಿಯಲೂ ನೀರಿಲ್ಲ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸುವಲ್ಲಿ ಜನಪ್ರತಿನಿಗಳು ಸಂಪೂರ್ಣವಾಗಿ ವಿಫಲವಾಗಿರುವುದರಿಂದ ವಿಧಿಯಿಲ್ಲದೆ ಕೊಳಚೆ ನೀರನ್ನು ಕುಡಿಯವಂತಾಗಿದೆ. ಇದನ್ನು ತಪ್ಪಿಸಲು ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ಸಂಘಟಿತರಾಗಿ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ತರುವವರೆಗೊ ನಿರಂತರವಾಗಿ ಹೋರಾಟ ಮಾಡಬೇಕೆಂದು ಮಾಜಿ ಸಂಸದ ಎಸ್. ಮುನಿಸ್ವಾಮಿ ಹೇಳಿದರು.ಪಟ್ಟಣದ ಗಾಯಿತ್ರಿ ಭವನದಲ್ಲಿ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲು ಸರ್ಕಾರಗಳ ಮೇಲೆ ಒತ್ತಡ ತರಲು ಹಮ್ಮಿಕೊಂಡಿದ್ದ ಜಲಗ್ರಹ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳಿಲ್ಲದ ಕಾರಣ ರೈತರು ಕೃಷಿಗೆ ಮಳೆಯನ್ನೇ ಆಶ್ರಯಿಸುವಂತಾಗಿದೆ. ಕುಡಿಯಲೂ ನೀರಿಲ್ಲ. ಹಲವು ಬಾರಿ ಹೋರಾಟ ಮಾಡಿದರೂ ಎಲ್ಲಾ ಸರ್ಕಾರಗಳು ಎಚ್ಚರವಹಿಸದೆ ಕಡೆಗಣಿಸಿದೆ. ಬೆಂಗಳೂರಿನ ಕೊಳಚೆ ನೀರನ್ನು ಹರಿಸಲು ಮುಂದಾಗಿದ. ಈ ನೀರನ್ನು ಕೃಷಿಗೆ ಬಳಸಿದರೆ ಬೆಳೆಗಳು ಗುಣಮಟ್ಟದಲ್ಲಿ ಬರುವುದಿಲ್ಲ, ಇನ್ನು ಮನುಷ್ಯರು ಕುಡಿದರೆ ಹಲವು ಅನಾರೋಗ್ಯಗಳಿಗೆ ತುತ್ತಾಗುವರು ಎಂದು ಆರೋಪಿಸಿದರು.ಆದರೂ ಜನಪ್ರತಿನಿಧಿಗಳು ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಶಾಶ್ವತ ನೀರಾವರಿಯಾದ ಕೃಷ್ಣ, ಮೇಕೆದಾಟು, ಎತ್ತಿನಹೊಳೆ ಯೋಜನೆ ಹೆಸರನ್ನು ಮುಂದಿಟ್ಟುಕೊಂಡು ಕೊಳಚೆ ನೀರು ಹರಿಸುತ್ತಿದ್ದಾರೆ. ಕೃಷ್ಣ ನೀರು ಹರಿಸಿದರೆ ರಾಜಕಾರಣಿಗಳ ಜೇಬು ತುಂಬಲ್ಲವೆಂದು ಜನರನ್ನು ವಂಚಿಸುತ್ತಿದ್ದಾರೆ. ಆದ್ದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ರೂಪಿಸಲು ಸರ್ಕಾರಗಳ ಮೇಲೆ ಒತ್ತಡ ಹೇರಲು ಅದಕ್ಕೂ ಮುಂಚೆ ಕೋಲಾರದಲ್ಲಿ ಬೃಹತ್ ಸಮಾವೇಶ ಮಾಡಿ ಸರ್ಕಾರಗಳ ಕಣ್ಣು ತೆರೆಸಲು ಹೋರಾಟ ಮಾಡಬೇಕಿದೆ. ಈ ಹೋರಾಟಕ್ಕೆ ಎಲ್ಲಾ ಪಕ್ಷಗಳ ನಾಯಕರು, ಸಂಘ ಸಂಸ್ಥೆಗಳು,ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.ಮಾಜಿ ಜಿಪಂ ಸದಸ್ಯ ಬಿ.ವಿ.ಮಹೇಶ್ ಮಾತನಾಡಿ, 2016ರಲ್ಲಿ ಜಿಲ್ಲೆಗೆ ಶಾಶ್ವತ ನೀರಿಗಾಗಿ ಮಾಡಿದ ಹೋರಾಟದ ಸಮಯದಲ್ಲಿ ಸರ್ಕಾರ ಕೆಸಿ ವ್ಯಾಲಿ ನೀರು ಹರಿಸುವ ಭರವಸೆ ನೀಡಿ ಹೋರಾಟವನ್ನು ದಿಕ್ಕು ತಪಿಸಿತು.ಈಗ ಕೆಸಿ ವ್ಯಾಲಿ ನೀರು ಅನುಕೂಲಕ್ಕಿಂತಲೂ ಅನಾನುಕೂಲವೇ ಹೆಚ್ಚಾಗಿದೆ, ಕೃಷಿಗೆ ಮಾರಕವಾಗಿ ಪರಿಣಮಿಸಿದೆ, ಅಂತರ್ಜಲ ಕಲುಷಿತವಾಗಿದೆ, ಮುಂದಿನ ಪೀಳಿಗೆಗೆ ಶುದ್ದವಾದ ನೀರು ಲಭಿಸಲೆಂದು ಮತ್ತೆ ಹೋರಾಟ ಮಾಡಬೇಕಾಗಿದೆ. ಈ ಹೋರಾಟದಿಂದ ಯಾರಿಗೋ ಹೆಸರು ಬರುತ್ತದೆಂದು ಹಿಂಜರಿಯಬೇಡಿ ಇದರಲ್ಲಿ ರಾಜಕೀಯ ಬೆರಸದೆ ನಮ್ಮ ಭವಿಷ್ಯಕ್ಕಾಗಿ ಹಾಗೂ ಮುಂದಿನ ಭವಿಷ್ಯಕ್ಕಾಗಿ ಹೋರಾಟ ಮಾಡಬೇಕಿದೆ ಎಂದರು.ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯಗೌಡ ಮಾತನಾಡಿ, ರಾಜ್ಯದಲ್ಲಿ ಅಗಾದವಾದ 3 ಟಿಎಂಸಿ ನೀರಿದೆ ಬಳಕೆ ಮಾಡುತ್ತಿರುವುದು 1 ಟಿಎಂಸಿ ನೀರು ಮಾತ್ರ ಉಳಿದಿರುವ 2 ಟಿಎಂಸಿ ನೀರನ್ನು ಬಯಲು ಸೀಮೆ ಕೋಲಾರಕ್ಕೆ ಯಾಕೆ ಸರ್ಕಾರ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು. ಸ್ವಾತಂತ್ರ ಬಂದು 75 ವರ್ಷವಾದರೂ ನಮಗೆ ಸರ್ಕಾರ ಶುದಧ ನೀರು ಕೊಡಲು ವಿಫಲವಾಗಿದೆ. ನಮ್ಮ ಹಕ್ಕನ್ನು ದಕ್ಕಿಸಿಕೊಳ್ಳಲು ಯುವ ಜನತೆ ಸಂಘಟಿತರಾಗಿ ಹೋರಾಟದ ದಾರಿ ಹಿಡಿಯುವಂತಾಗಿದೆ, ಇದಕ್ಕೆ ಎಲ್ಲರೂ ಕೈಜೋಡಿಸಿ ದಕ್ಕಿಸಿಕೊಳ್ಳಬೇಕೆಂದು ಕರೆ ನೀಡಿದರು.ಸಭೆಯಲ್ಲಿ ಹೊಳಲಿ ಪ್ರಕಾಶ್, ಪುರಸಭೆ ಸದಸ್ಯ ಕಪಾಲಿಶಂಕರ್, ಮುಖಂಡರಾದ ಮಾರ್ಕಂಡೇಗೌಡ, ಮಂಜುನಾಥ್, ಶಿವಕುಮಾರ್, ರೈತ ಸಂಘದ ರಾಮೇಗೌಡ, ಶ್ರೀನಿವಾಸ್, ದಲಿತ ಸಂಘದ ರಾಜಪ್ಪ, ಸೂಲಿಕುಂಟೆ ರಮೇಶ್, ಐಪಲ್ಲಿ ನಾರಾಯಣಸ್ವಾಮಿ, ಹುನ್ಕುಂದ ವೆಂಕಟೇಶ್, ಕನ್ನಡ ಬಳಗದ ರಾಮಪ್ರಸಾದ್ ಇತರರು ಇದ್ದರು.