ವಕ್ಫ್ ಬಾಧಿತ ರೈತರಿಗೆ ನ್ಯಾಯ ಸಿಗೋವರೆಗೂ ಹೋರಾಟ: ಶಾಸಕ ಬಸನಗೌಡ ಯತ್ನಾಳ

| Published : Nov 11 2024, 11:53 PM IST

ಸಾರಾಂಶ

ಮಾಲ್ಕಿ ಹೊಂದಿದ್ದ ರೈತರ ಜಮೀನುಗಳು, ಮಠ-ಮಾನ್ಯಗಳ ಜಾಗಗಳು ತಕ್ಷಣ ಮೊದಲಿನಂತೆ ಅವರ ಹೆಸರಿಗೆ ಬದಲಾಗಬೇಕು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ರಾಜ್ಯಾದ್ಯಂತ ರೈತರ, ಧಾರ್ಮಿಕ ಕೇಂದ್ರಗಳ ಮತ್ತು ಮಠ-ಮಾನ್ಯಗಳ ಒಡೆತನದ ಜಮೀನು, ಜಾಗಗಳಲ್ಲಿ ವಕ್ಫ್ ಬೋರ್ಡ್ ಮಾಲ್ಕಿಯ ಹೆಸರು ಸೇರ್ಪಡೆಗೊಳ್ಳುವಲ್ಲಿ ಸಿಎಂ ಸ್ಪಷ್ಟ ನಿರ್ದೇಶನದಲ್ಲಿ ಸಚಿವ ಜಮೀರ್ ಅಹ್ಮದ್‌ ನೇರ ಹಸ್ತಕ್ಷೇಪವಿದೆ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ ಆರೋಪಿಸಿದರು.

ತೇರದಾಳದ ಭೂಪಾಲ ಮಾನಗಾಂವಿ ತೋಟದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಕ್ಫ್‌ ಬೋರ್ಡ್‌ನ ೪೨ ವಿಧಿಗಳನ್ನು ತಿದ್ದಲು ನಿರ್ಧರಿಸುತ್ತಿದ್ದಂತೇ ರಾಜ್ಯದ ರೈತರ ಜಮೀನುಗಳು ವಕ್ಫ್ ಹೆಸರಲ್ಲಿ ಬದಲಿಸಲಾಗಿದೆ. ರೈತರ ಮತ್ತು ವಕ್ಫ್‌ ಪೀಡಿತರ ಆಕ್ರೋಶ ಹೆಚ್ಚುತ್ತಿದ್ದಂತೆ ರಾಜ್ಯ ಸರ್ಕಾರ ತಾನು ನೀಡಿದ್ದ ಆದೇಶ ಹಿಂಪಡೆಯಲಾಗಿದೆ ಎಂದು ಸಿಎಂ ಹೇಳುತ್ತಿದ್ದರೂ ಅದೆಲ್ಲ ಮೊಸಳೆ ಕಣ್ಣೀರು ಎಂದು ಸಾಬೀತಾಗಿದೆ. ಈ ಹಿಂದೆ ಮಾಲ್ಕಿ ಹೊಂದಿದ್ದ ರೈತರ ಜಮೀನುಗಳು, ಮಠ-ಮಾನ್ಯಗಳ ಜಾಗಗಳು ತಕ್ಷಣ ಮೊದಲಿನಂತೆ ಅವರ ಹೆಸರಿಗೆ ಬದಲಾಗಬೇಕು. ಇಲ್ಲವಾದಲ್ಲಿ ನಾವು ರೈತರೊಡನೆ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಯತ್ನಾಳ ತಿಳಿಸಿದರು.

ಬಸವಕಲ್ಯಾಣದ ಅನುಭವ ಮಂಟಪ ನಡೆಯುತ್ತಿದ್ದ ಜಾಗವೂ ವಕ್ಫ್‌ ಪಾಲಾಗಿ, ಅಲ್ಲಿ ಮಾಂಸ ಮಾರಾಟ ದಂಧೆ ನಡೆಯುತ್ತಿದೆ. ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಅಲ್ಲಮಪ್ರಭುದೇವರ ನೇತೃತ್ವದ ಮೊಟ್ಟ ಮೊದಲ ಸಂಸತ್ತು ದೇಶದ ಸಾಂಸ್ಕೃತಿಕ ಆಸ್ತಿ ಎಂದು ಪರಿಗಣಿಸಿ ತಕ್ಷಣ ಅಲ್ಲಿ ಮೊದಲಿದ್ದಂತೆ ಅನುಭವ ಮಂಟಪ ರಚನೆಯಾಗಬೇಕೆಂದು ಆಗ್ರಹಿಸಿದ್ದೇನೆ. ಅದನ್ನೇ ನಾನು ಧಾರ್ಮಿಕ ಸಭೆಯಲ್ಲಿ ಮಾತನಾಡುತ್ತಿದ್ದಂತೆ ಉದ್ದೇಶಪೂರ್ವಕವಾಗಿ ಕೆಲವರು ಅಡ್ಡಿಪಡಿಸಿದ್ದರಿಂದ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಅಗೌರವವಾಗಬಾರದೆಂದು ವೇದಿಕೆಯಿಂದ ಕೆಳಗಿಳಿದು ಬಂದಿದ್ದೇನೆ ಎಂದು ಹೇಳಿದರು.ಧರ್ಮಸಭೆಯಲ್ಲಿ ಧರ್ಮ ರಕ್ಷಕರಾಗಿರುವ ಮಠಾಧೀಶರು ವಕ್ಫ್ ಕರಾಳತೆ ವಿರುದ್ಧ ಧ್ವನಿಯೆತ್ತಿ ನೊಂದ ಮಠ-ಮಾನ್ಯಗಳ ಮತ್ತು ರೈತರ ಪರವಾಗಿ ನಿಲ್ಲಲು ಕೋರುತ್ತಿದ್ದೆ. ಈಗಲೂ ನಮ್ಮ ನಿಲುವು ಅಚಲವಾಗಿದೆ. ರಾಜ್ಯದಲ್ಲಿನ ಸರ್ಕಾರ ಒಂದೇ ಕೋಮಿನ ಓಲೈಕೆಗೆ ಮುಂದಾಗಿ ರೈತರ, ಮಠ-ಮಾನ್ಯಗಳ ಹೆಸರಿನ ಆಸ್ತಿಗಳ ಮೇಲೆ ಗದಾಪ್ರಹಾರ ನಡೆಸುವುದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂಜು ತಿಳಿಸಿದರು.

ಸಂಸದೀಯ ಜಂಟಿ ಸಮಿತಿ ನವದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಕರ್ನಾಟಕ ರಾಜ್ಯದ ರೈತರ ಮತ್ತು ವಕ್ಫ್ ಪೀಡಿತರ ಅಳಲು ಕೇಳಲು ಒಂದು ದಿನ ಅವಕಾಶ ಕಲ್ಪಿಸುವುದಾಗಿ ಹೇಳಿದೆ. ದಿನಾಂಕ ತಿಳಿದ ಬಳಿಕ ಕ್ಷೇತ್ರದ ಶಾಸಕರು, ಸಂಸದರ ಸಮ್ಮುಖದಲ್ಲಿ ರೈತರ ನಿಯೋಗವನ್ನು ನವದೆಹಲಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಕಿರಣ ಕುಳ್ಳಿ ಮಾತನಾಡಿ, ೧೯೭೧ರಲ್ಲಿ ಟೆನೆಂಟ್ ಮತ್ತು ಇನಾಂ ಕಾಯ್ದೆಗಳು ರದ್ದಾದರೂ ವಕ್ಫ್ ಕಾಯ್ದೆ ರದ್ಧತಿಯಾಗದ ಕಾರಣ ರೈತರು ಪರಿತಪಿಸುವಂತಾಗಿದೆ. ಕೇಂದ್ರ ಸರ್ಕಾರ ವಕ್ಫ್ ಬೋರ್ಡ್‌ನ ೪೨ ವಿಧಿಗಳನ್ನು ತಿದ್ದುಪಡಿ ಮಾಡಲು ಮುಂದಾಗಿದ್ದು, ಅವುಗಳ ಸ್ವರೂಪದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಮತ್ತು ದೇಶಾದ್ಯಂತ ೩೩ ಲಕ್ಷ ಎಕರೆ ಜಮೀನು ಕಬಳಿಸಿರುವ ವಕ್ಫ್ ಬೋರ್ಡ್‌ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಆಗ್ರಹಿಸಿ ಬಾಧಿತ ರೈತರೊಡನೆ ಮನವಿ ಸಲ್ಲಿಸಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ತೇರದಾಳ ಪಟ್ಟಣದ ೪೨೦ ಎಕರೆ, ಹೊಸೂರಿನ ೧.೩೬ ಎಕರೆ, ಆಸಂಗಿಯ ೫ ಎಕರೆ, ನಾವಲಗಿಯ ೯.೩೬ ಎಕರೆ ಪ್ರದೇಶಗಳು ವಕ್ಫ್ ಪಾಲಾಗಿ ರೈತರು ನರಳುವಂತಾಗಿದೆ. ವಕ್ಫ್ ಬೋರ್ಡ್‌ನಲ್ಲಿ ಸಿಪಾಯಿ ಹುದ್ದೆಯಿಂದ ಅಧ್ಯಕ್ಷರವರೆಗೆ ಮುಸ್ಲಿಂ ಸಮುದಾಯದ ಸಿಬ್ಬಂದಿಯೇ ಇರುವುದರಿಂದ ನಮ್ಮ ರೈತರಿಗೆ ನ್ಯಾಯ ಸಿಗುವುದು ಮರೀಚಿಕೆಯಾಗಿದೆ. ರಾಜ್ಯ ಸರ್ಕಾರ ಆದೇಶ ಹಿಂಪಡೆದ ಬಗ್ಗೆ ಘೋಷಿಸಿದೆಯಾದರೂ ಮೊದಲಿನಂತೆ ರೈತರ ಹೆಸರಲ್ಲಿ ಮಾತ್ರ ಮಾಲ್ಕಿಯನ್ನು ಬದಲಿಸಲು ಸ್ಪಷ್ಟ ಆದೇಶ ಹೊರಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಲಕ್ಕಪ್ಪ ಪಾಟೀಲ, ಆನಂದ ಕಂಪು, ಸಂತೋಷ ಜಮಖಂಡಿ, ಬಸವರಾಜ ಹಿರೇಮಠ, ತಾತ್ಯಾಸಾಹೇಬ ಶೇಡಬಾಳ, ಪರಪ್ಪ ಮದನಮಟ್ಟಿ, ಪ್ರಕಾಶ ಮಾನಶೆಟ್ಟಿ, ಅಪ್ಪಾಸಾಹೇಬ ತಳ್ಳಿ ಸೇರಿದಂತೆ ಕ್ಷೇತ್ರದ ವಕ್ಫ್ ಬಾಧಿತ ೧೧೦ ರೈತರು ಉಪಸ್ಥಿತರಿದ್ದರು.