ಬಾಲಕಿ ಕುಟುಂಬಕ್ಕೆ ನ್ಯಾಯ ಸಿಗುವ ತನಕ ಹೋರಾಟ: ಬಿಜೆಪಿ

| Published : Jan 18 2025, 12:49 AM IST

ಸಾರಾಂಶ

ಪ್ರಕರಣವನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದೇಯಾದರೇ ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷದಿಂದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಬಿಜೆಪಿ ಜಿಲ್ಲಾ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ್, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಎಚ್ಚರಿಸಿದರು. ಜೇವರ್ಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಬಿಜೆಪಿ ನಾಯಕರು ಹೇಳಿಕೆ । ಪ್ರಕರಣದ ದಿಕ್ಕು ತಪ್ಪಿದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ । ತನಿಖೆಗೆ ಆಗ್ರಹ

ಕನ್ನಡಪ್ರಭ ವಾರ್ತೆ ಜೇವರ್ಗಿ

ಬಾಲಕಿಯ ಸಾವಿಗೆ ಕಾರಣನಾದ ಕಿರಾತಕನನ್ನು ಉಗ್ರ ಶಿಕ್ಷೆಗೆ ಗುರಿಪಡಿಸುವವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದ್ದು, ಪ್ರಕರಣವನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದೇಯಾದರೇ ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷದಿಂದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಬಿಜೆಪಿ ಜಿಲ್ಲಾ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ್, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಎಚ್ಚರಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಪ್ರಾಪ್ತೆಯ ಮೇಲಿನ ಕಿರುಕುಳ ಹಾಗೂ ಸಾವು ಇಡೀ ರಾಜ್ಯದ ಜನತೆ ಮರುಗುವಂತೆ ಮಾಡಿದೆ. ಈಗಾಗಲೆ ಸಾವಿನ ನೋವಿನಿಂದ ಜರ್ಜಿರಿತಗೊಂಡ ಕುಟುಂಬಕ್ಕೆ ನಾಲ್ಕಾರು ಜನ ದೂರವಾಣಿ ಮೂಲಕ ಹೆದರಿಸಿ, ಬೆದರಿಸುವ ಮೂಲಕ ದೂರು ಹಿಂದಕ್ಕೆ ಪಡೆಯುವಂತೆ ಕಿರುಕುಳ ನೀಡುತ್ತಿದ್ದಾರೆ. ಸಾವಿನ ನೋವಿನಿಂದ ಹೊರಬರಲಾಗದ ಕುಟುಂಬಕ್ಕೆ ಹೆದರಿಕೆ ಬೆದರಿಕೆ ಕರೆಗಳಿಂದ ಬರಸಿಡಿಲು ಬಡಿದಂತಾಗಿದೆ. ಕುಟುಂಬಕ್ಕೆ ಜಿಲ್ಲಾಡಳಿತ ಸೂಕ್ತ ರಕ್ಷಣೆ ನೀಡಬೇಕು. ಪ್ರಕರಣವನ್ನು ತಿರುಚುವ ಷಡ್ಯಂತ್ರ ನಡೆದಿದ್ದು, ಆರೋಪಿಯ ಹಲ್ಲು, ಮತ್ತು ಮೂಳೆಗಳ ತಪಾಸಣೆ ಮಾಡಿ ಅವನ ವಯಸ್ಸು ಗುರುತಿಸಬೇಕು. ಕಳೆದ ಲೋಕಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆಧಾರ ಕಾರ್ಡ್ ಸೇರಿದಂತೆ ಇತರ ಧಾಖಲಾತಿಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಅದನ್ನು ತನಿಖೆ ಮಾಡಬೇಕು. ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಕ್ಷ ನೊಂದ ಮಹಿಳೆ ಹಾಗೂ ಕುಟುಂಬಕ್ಕೆ ನ್ಯಾಯ ಸಿಗುವ ವರೆಗೂ ನಿರಂತರ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.

ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಶಾಸಕರು ಅಧಿಕಾರಿಗಳ ಸಭೆ ಕರೆಯದೆ ಇಂತಹ ಘಟನೆಗಳು ಮರು ಕಳಿಸುತ್ತಿವೆ. ಪ್ರತಿ ತಿಂಗಳು ಅಧಿಕಾರಿಗಳ ಸಭೆ ಕರೆದರೆ ಇಂತಹ ಘಟನೆಗಳು ಮರು ಕಳಿಸದಂತೆ ನೀಗಾ ವಹಿಸಬಹುದು. ಆದರೆ ಶಾಸಕರು ತಿಗಂಳಿಗೆ ಒಂದು ಬಾರಿ ಕ್ಷೇತ್ರಕ್ಕೆ ಪಿಕ್‌ನೀಕ್‌ನಂತೆ ಬಂದು ಹಾಯ್ ಬಾಯ್ ಎಂದು ಹೇಳಿ ಹೋಗುತ್ತಿರುವುದರಿಂದ ತಾಲೂಕು ಆಡಳಿತ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಬಾಲಕಿ ಪ್ರಕರಣ ಸೇರಿದಂತೆ ತಾಲೂಕಿನಲ್ಲಿ ಅಪಹರಣ ಪ್ರಕರಣ, ಹಾಡಹಗಲೇ ಕಳ್ಳತನ ಹಾಗೂ ಮಟಗಾ, ಇಸ್ಪೀಟ್‌ ದಂಧೆ ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಮುಖಂಡರಾದ ಎಂ.ಬಿ.ಪಾಟೀಲ್ ಹರವಾಳ, ಷಣ್ಮುಖಪ್ಪ ಸಾಹು ಗೋಗಿ, ಪ್ರವೀಣ ತೆಗನೂರ, ಬಾಪುಗೌಡ ಬಿರಾಳ, ಶಿವಾನಂದ ಪಿಸ್ತೆ, ಸಚೀನ ಕಡಗಂಚಿ, ಬಸವರಾಜ ಮುನ್ನಳ್ಳಿ, ಅಶೋಕ ಮಾನಕರ್, ಶಂಕರ ಶೆಟ್ಟಿ, ಶಾಂತಕುಮಾರ ದುದನಿ, ದೇವಿಂದ್ರಪ್ಪ ಮುತಕೋಡ, ರೇವಣಸಿದ್ದಪ್ಪ ಸಂಕಾಲಿ, ಗುಂಡು ಸಾಹು ಗೋಗಿ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ತಿಪ್ಪಣ್ಣ ರಾಠೋಡ, ಈಶ್ವರ ಹಿಪ್ಪರಗಿ, ಅನೀಲ ದೊಡ್ಡಮನಿ, ಸುರೇಶ ನೇದಲಗಿ, ಅನೇಕರು ಇದ್ದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಅರಾಜಕತೆ ಸೃಷ್ಟಿಯಾಗಿದ್ದು, ರಾಜ್ಯದ ಬಹುತೇಕ ಕಡೆಗಳಲ್ಲಿ ಮಹಿಳೆಯರು ಹಾಗೂ ಬಾಲಕಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕಳ್ಳರು, ಡಕಾಯಿತರು ಹಾಡಹಗಲೆ ದೋಚಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ರಾಜ್ಯದ ಜನ ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ.

ಚಂದು ಪಾಟೀಲ್, ಬಿಜೆಪಿ ಜಿಲ್ಲಾ ನಗರ ಘಟಕದ ಅಧ್ಯಕ್ಷ.