ಬಿಜೆಪಿ ಷಡ್ಯಂತ್ರ ಸೋಲಿಸಲು ಒಟ್ಟಾಗಿ ಹೋರಾಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

| Published : Oct 03 2024, 01:18 AM IST / Updated: Oct 03 2024, 09:51 AM IST

ಸಾರಾಂಶ

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಗಾಂಧಿ ಜಯಂತಿ ಹಾಗೂ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧಿವೇಶನಕ್ಕೆ ನೂರು ವರ್ಷ ಪೂರೈಸಿದ ಸಂಭ್ರಮಾಚರಣೆಯ ‘ಗಾಂಧಿ ಭಾರತ’ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

 ಬೆಂಗಳೂರು : ರಾಜ್ಯ ಮತ್ತು ದೇಶದಲ್ಲಿ ಕಾನೂನು ಮತ್ತು ಬಿಜೆಪಿಯ ಷಡ್ಯಂತ್ರದ ನಡುವೆ ಹೋರಾಟ ನಡೆಯುತ್ತಿದ್ದು, ನಾವೆಲ್ಲರೂ ಒಟ್ಟಾಗಿ ಆ ಷಡ್ಯಂತ್ರವನ್ನು ಸೋಲಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರಿಗೆ ನೀಡಿದರು.

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಗಾಂಧಿ ಜಯಂತಿ ಹಾಗೂ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧಿವೇಶನಕ್ಕೆ ನೂರು ವರ್ಷ ಪೂರೈಸಿದ ಸಂಭ್ರಮಾಚರಣೆಯ ‘ಗಾಂಧಿ ಭಾರತ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯ ಮತ್ತು ದೇಶದಲ್ಲಿ ಕಾನೂನು ಮತ್ತು ಬಿಜೆಪಿಯ ಷಡ್ಯಂತ್ರದ ನಡುವೆ ಹೋರಾಟ ನಡೆಯುತ್ತಿದೆ. ಷಡ್ಯಂತ್ರದ ಮೂಲಕ ಕಾನೂನನ್ನು ಸೋಲಿಸಲು ಯತ್ನಿಸಿ ರಾಜಕೀಯ ಅಸ್ಥಿರತೆ ಸೃಷ್ಟಿಸಲಾಗುತ್ತಿದೆ. ಈ ಷಡ್ಯಂತ್ರದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದರು.

ಗಾಂಧೀಜಿ ವಿಚಾರದಲ್ಲಿ ಬಿಜೆಪಿ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಗೋಡ್ಸೆ ಭಾರತ ನಿರ್ಮಾಣಕ್ಕೆ ಹೊರಟಿದೆ. ಈ ಷಡ್ಯಂತ್ರವನ್ನು ನಾವು ಸೋಲಿಸಬೇಕು. ಗಾಂಧೀ ಭಾರತದ ಆತ್ಮ, ಪ್ರಜ್ಞೆ. ಇಲ್ಲಿ ಗೋಡ್ಸೆಗಳು ಬೆಳೆಯಲು ಬಿಡಬಾರದು. ಧರ್ಮ, ಜಾತಿ ಹೆಸರಿನಲ್ಲಿ ಸಮಾಜವನ್ನು ಛಿದ್ರ ಮಾಡಲು ಅವಕಾಶ ನೀಡಬಾರದು. ಕೋಮು ಶಕ್ತಿಗಳನ್ನು ಸೋಲಿಸಬೇಕು. ಗಾಂಧೀಜಿ ಅವರನ್ನು ಕೊಂದರೂ ಅವರ ವಿಚಾರಗಳನ್ನು ಕೊಲ್ಲುವುದು ಅಸಾಧ್ಯ ಎಂದು ಹೇಳಿದರು.

ವರ್ಷವಿಡೀ ಬೆಳಗಾವಿ ಅಧಿವೇಶನ ಶತಾಬ್ದಿ:

ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತೀಯ ಕಾಂಗ್ರೆಸ್‌ ಅಧಿವೇಶನಕ್ಕೆ ವರ್ಷ ತುಂಬುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಗಾಂಧೀಜಿ ಅವರು ಹಿಂದು-ಮುಸ್ಲಿಂ ಐಕ್ಯತೆ, ಗ್ರಾಮ ಸ್ವರಾಜ್ಯ, ಸರ್ವೋದಯದ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ಸಂದೇಶ ನೀಡಿದ್ದರು. ಅದು ಕಾಂಗ್ರೆಸ್‌ನ ಸಿದ್ಧಾಂತ ಮತ್ತು ಕಾರ್ಯಕ್ರಮಗಳ ಭಾಗವಾಗಿದೆ. ಈ ಅಧಿವೇಶನ ಮತ್ತು ಗಾಂಧಿ ತತ್ವದ ಪ್ರಸ್ತುತತೆ ಕಾಪಾಡಲು ಬೆಳಗಾವಿ ಅಧಿವೇಶನದ ಶತಾಬ್ದಿಯನ್ನು ಅಥಪೂರ್ಣವಾಗಿ ವರ್ಷವಿಡೀ ನಡೆಸಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಆತ್ಮಸಾಕ್ಷಿಯ ನ್ಯಾಯಾಲಯದಂತೆ ನಡೆಯಬೇಕು:

ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ನಮ್ಮ ಎಲ್ಲ ನ್ಯಾಯಾಲಯಗಳ ಜತೆಗೆ ನಮ್ಮೊಳಗೇ ಇರುವ ಆತ್ಮಸಾಕ್ಷಿಯ ನ್ಯಾಯಾಲಯ ಬಹಳ ದೊಡ್ಡದು. ಅದರಂತೆ ನಾವೆಲ್ಲರೂ ನಡೆಯಬೇಕು. ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿಲ್ಲ. ಬದಲಿಗೆ, ಜನರ ಬದುಕನ್ನು ಬದಲಿಸಲು ರಾಜಕಾರಣ ಮಾಡುತ್ತಿದ್ದೇವೆ. ಐದು ಗ್ಯಾರಂಟಿ ಯೋಜನೆಗಳನ್ನು ಅದಕ್ಕಾಗಿಯೇ ಜಾರಿ ಮಾಡಿದ್ದೇವೆ. ಈ ಯೋಜನೆಗಳು ಗಾಂಧೀಜಿ ಅವರ ಆಶಯದಂತೆಯೂ ರೂಪಿಸಿ, ಅನುಷ್ಠಾನಗೊಳಿಸಿದ್ದೇವೆ ಎಂದರು.

ಮಹಾತ್ಮ ಗಾಂಧೀಜಿ ಅವರು ಊರಿಗೊಂದು ಪಂಚಾಯಿತಿ, ಶಾಲೆ, ಸಹಕಾರ ಸಂಘವಿರಬೇಕು ಎಂದು ಗಾಂಧೀಜಿ ಹೇಳಿದ್ದರು. ಅದರಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಸಬರಮತಿ ಆಶ್ರಮದ ಪ್ರತಿರೂಪವನ್ನು ಅಲ್ಲಿ ನಿರ್ಮಿಸಲಾಗಿದ್ದು, ಅದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಎಚ್‌.ಕೆ. ಪಾಟೀಲ್‌, ಲಕ್ಷ್ಮೀ ಹೆಬ್ಬಾಳ್ಕರ್‌, ವಿಧಾನಪರಿಷತ್‌ ಮುಖ್ಯ ಸಚೇತಕ ಸಲೀಂ ಅಹಮದ್‌ ಇದ್ದರು.

ಗಾಂಧಿ ಜ್ಯೋತಿ ನಡಿಗೆ

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೂ ಮುನ್ನ ಎಂಜಿ ರಸ್ತೆಯ ಗಾಂಧಿ ಪ್ರತಿಮೆಯಿಂದ ಕೆಪಿಸಿಸಿ ಕಚೇರಿವರೆಗೆ ಗಾಂಧಿ ಜ್ಯೋತಿ ನಡಿಗೆ ಪಾದಯಾತ್ರೆ ಮಾಡಲಾಯಿತು. ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಇದ್ದರು.