ಕರ್ನಾಟಕದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಅರಣ್ಯ ಭೂಮಿ ಸಾಗುವಳಿದಾರರು ಮತ್ತು ವಸತಿಹೊಂದಿದವರು ಇದ್ದು ನ್ಯಾಯಯುತವಾಗಿ ಅವರಿಗೆ ಸಿಗಬೇಕಾದ ಭೂಮಿ ಹಕ್ಕನ್ನು ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳೂ ಹೊಸ ಹೊಸ ಷರತ್ತು ಹೇರಿ ವಂಚನೆ ಮಾಡುತ್ತಿವೆ.
ಉ.ಕ. ಜಿಲ್ಲಾ ೬ನೇ ರೈತ ಸಮ್ಮೇಳನ
ಕನ್ನಡಪ್ರಭ ವಾರ್ತೆ ಅಂಕೋಲಾಕರ್ನಾಟಕದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಅರಣ್ಯ ಭೂಮಿ ಸಾಗುವಳಿದಾರರು ಮತ್ತು ವಸತಿಹೊಂದಿದವರು ಇದ್ದು ನ್ಯಾಯಯುತವಾಗಿ ಅವರಿಗೆ ಸಿಗಬೇಕಾದ ಭೂಮಿ ಹಕ್ಕನ್ನು ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳೂ ಹೊಸ ಹೊಸ ಷರತ್ತು ಹೇರಿ ವಂಚನೆ ಮಾಡುತ್ತಿವೆ. ಅತಿಕ್ರಮಣದಾರರಿಗೆ ಭೂಮಿ ಸಿಗುವವರೆಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ರಾಜ್ಯಾದ್ಯಂತ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಹೇಳಿದರು. ನಾಡವರ ಸಮುದಾಯ ಭವನದಲ್ಲಿ ಉ.ಕ ೬ನೇ ಜಿಲ್ಲಾ ರೈತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಅತಿಕ್ರಮಣದಾರರಿಗೆ ೨೦೦೫ಕ್ಕೂ ಪೂರ್ವದ ೭೫ ವರ್ಷದ ದಾಖಲೆ ಕೇಳುತ್ತಿರುವುದು ತೀವ್ರ ಅವೈಜ್ಞಾನಿಕವಾದದ್ದು. ೨೦೦೫ರವರೆಗೆ ಯಾರೆಲ್ಲ ಸಾಗುವಳಿ ಅಥವಾ ವಾಸ ಮಾಡುತ್ತಿದ್ದಾರೆ ಅವರಿಗೆಲ್ಲ ಭೂಮಿ ಸಿಗುವಂತಾಗಬೇಕು. ಅರಣ ಭೂಮಿ ಹಕ್ಕು ಪ್ರತಿಯೊಬ್ಬ ಅರ್ಜಿದಾರರಿಗೂ ಸಿಗಬೇಕು. ಗ್ರಾಮ ಅರಣ್ಯ ಹಕ್ಕು ಸಮಿತಿ ಅನುಮೋದನೆಯೇ ಅಂತಿಮವಾಗಿದ್ದು ಎಲ್ಲಾ ಕ್ಲೇಮಗಳನ್ನು ವಿಳಂಬವಿಲ್ಲದೆ ಇತ್ಯರ್ಥ ಪಡಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು. ಸಿಐಟಿಯು ಜಿಲ್ಲಾ ಅಧ್ಯಕ್ಷ ತಿಲಕ್ ಗೌಡ ಮಾತನಾಡಿ, ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿಗಳ ವಿರುದ್ಧ ಜಂಟಿ ಹೋರಾಟ ನಡೆಸಬೇಕಾದ ಬಗ್ಗೆ ವಿವರಿಸಿದರು. ರೈತ ಎಲ್ಲಾ ಹೋರಾಟಕ್ಕೆ ಸಿಐಟಿಯು ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದರು. ಮಹಿಳಾ ಮುಖಂಡರಾದ ಮೋಹಿನಿ ನಮಸೇಕರ, ಎಸ್.ಎಫ್.ಐ. ಮುಖಂಡರಾದ ವೀರೇಶ ರಾಠೋಡ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ಅರಣ್ಯ ಹಕ್ಕು ನೀಡುವ ಕಾನೂನು ಬಂದು ೨೦ ವರ್ಷ ಕಳೆದರು ಹಕ್ಕುಪತ್ರ ನೀಡದೆ ಸತಾಯಿಸುತ್ತಿದ್ದಾರೆ. ಈಗ ಮತ್ತೆ ತುರ್ತಾಗಿ ಅಧಿಕಾರಿಗಳ ತಂಡ ಪರಿಶೀಲನೆಗೆ ಇಳಿದಿದೆ. ಗ್ರಾಮ ಅರಣ್ಯ ಹಕ್ಕು ಸಮಿತಿಗಳನ್ನು ಕತ್ತಲೆಯಲ್ಲಿ ಇಡಲಾಗಿದೆ, ಇದು ಸರಿಯಾದ ಕ್ರಮವಲ್ಲ. ಭೂಮಿ ತೆರವುಗೊಳಿಸಲು ಪ್ರಯತ್ನಿಸಿದರೆ ಇನ್ನಷ್ಟು ಉಗ್ರ ಚಳವಳಿ ನಡೆಸಲಾಗುವುದು, ರೈತ ಹೊಸ ಬೀಜ ಕಾಯ್ದೆಯನ್ನು ವಿರೋಧಿಸುವುದಾಗಿ ತಿಳಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಸ್ವಾಗತಿಸಿದರು. ಗೌರೀಶ ನಾಯಕ ವಂದಿಸಿದರು. ತಿಮ್ಮಪ್ಪ ಗೌಡ, ಪ್ರೇಮಾನಂದ ವೇಳಿಪ್, ಸಂತೋಷ ನಾಯ್ಕ, ಪ್ರೇಮಾ ಉಳಗೇಕರ ಉಪಸ್ಥಿತರಿದ್ದರು.
ನಿರ್ಣಯಫೆ.೧೨ರಂದು ಕಾರ್ಮಿಕ ಕಾನೂನು ತಿದ್ದುಪಡಿ, ನರೇಗಾ ತಿದ್ದುಪಡಿ, ಬೀಜ ಕಾಯ್ದೆ ತಿದ್ದುಪಡಿ ವಿರುದ್ಧ ನಡೆಯುವ ಅಖಿಲ ಭಾರತ ಮುಷ್ಕರ ಬೆಂಬಲಿಸುವ ನಿರ್ಣಯವನ್ನು ಸಮ್ಮೇಳನ ತೆಗೆದುಕೊಂಡಿತು.