19ರಿಂದ ಕದಂಬ ಕನ್ನಡ ಜಿಲ್ಲೆಗಾಗಿ ಹೋರಾಟ: ಅನಂತಮೂರ್ತಿ ಹೆಗಡೆ

| Published : Nov 07 2024, 11:51 PM IST

19ರಿಂದ ಕದಂಬ ಕನ್ನಡ ಜಿಲ್ಲೆಗಾಗಿ ಹೋರಾಟ: ಅನಂತಮೂರ್ತಿ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹೋರಾಟದ ರೂಪುರೇಷೆಗಾಗಿ ನ. ೧೬ರಂದು ಶಿರಸಿಯ ನೆಮ್ಮದಿ ಕೇಂದ್ರದಲ್ಲಿ ಸಂಜೆ ೪.೩೦ಕ್ಕೆ ಸಮಾನ ಮನಸ್ಕರ ಸಭೆ ಕರೆಯಲಾಗಿದೆ.

ಶಿರಸಿ: ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಮುನ್ನುಡಿಯಾಗಿ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಸಮಿತಿ ಹುಟ್ಟುಹಾಕಲಾಗಿದ್ದು, ನ. ೧೯ರಂದು ಹೋರಾಟಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತಿದೆ ಎಂದು ನೂತನ ಸಮಿತಿಯ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತ್ಯೇಕ ಜಿಲ್ಲೆಯ ಹೋರಾಟಕ್ಕೆ ದೈವಿಕವಾದ ಅನುಗ್ರಹ ಬೇಕೆಂದು ನ. ೧೯ರಂದು ಚಂಡಿಕಾ ಯಾಗ ಮಾಡಲಾಗುತ್ತಿದೆ. ಅಂದು ಬೆಳಗ್ಗೆ ೧೦.೩೦ಕ್ಕೆ ಪೂರ್ಣಾಹುತಿ ಜರುಗಲಿದೆ. ಬಳಿಕ ಪ್ರಾರಂಭದ ಹೋರಾಟವಾಗಿ ಅದೇ ದಿನ ಬೆಳಗ್ಗೆ ೧೧ ಗಂಟೆಗೆ ಮಾರಿಕಾಂಬಾ ತಾಯಿಯ ರಕ್ಷೆ ಮತ್ತು ಕುಂಕುಮವನ್ನು ಮನವಿ ಪತ್ರಕ್ಕೆ ಹಚ್ಚಿ ಮಾರಿಕಾಂಬಾ ದೇವಸ್ಥಾನದಿಂದ ಹೊರಟು ಬೃಹತ್ ಪಾದಯಾತ್ರೆಯ ಮೂಲಕ ವಿಭಾಗಾಧಿಕಾರಿ ಕಚೇರಿಯವರೆಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು. ಹೋರಾಟದಲ್ಲಿ ಪಾಲ್ಗೊಳ್ಳಲು ಇಷ್ಟ ಇದ್ದವರು, ಹಿಂದೆ ಹೋರಾಟ ಮಾಡಿದವರು, ಸಲಹೆ ನೀಡಲು ಇಚ್ಛೆ ಪಡುವವರು ಎಲ್ಲರೂ ಭಾಗವಹಿಸಬೇಕು ಎಂದು ಕೇಳಿಕೋತ್ತೇವೆ. ಅಲ್ಲದೇ ಜಿಲ್ಲೆಯ ಎಲ್ಲ ಸಂಘ- ಸಂಸ್ಥೆಗಳಿಗೆ, ಸಂಘಟನೆಗಳಿಗೆ, ಎಲ್ಲರಿಗೂ ಪತ್ರ ಬರೆಯುತ್ತಿದ್ದೇವೆ. ಎಲ್ಲರನ್ನೂ ಕರೆದು ಮಾತನಾಡಿ ಒಮ್ಮತದ ತೀರ್ಮಾನದಿಂದ ಹೋರಾಟದ ರೂಪುರೇಷೆಗಳನ್ನು ಕಂಡುಕೊಳ್ಳುವುದು ನಮ್ಮ ಉದ್ದೇಶ ಎಂದರು.ಇದು ಕನ್ನಡದ ಮೊದಲ ಸಾಮ್ರಾಜ್ಯ ಸ್ಥಾಪಿಸಿದ ಕದಂಬರಾಳಿದ ಸ್ಥಳ. ಕದಂಬರ ರಾಜಧಾನಿ ಸಮೀಪದ ಬನವಾಸಿಯಲ್ಲಿದೆ. ನಾಡ ದೇವತೆ ಭುವನೇಶ್ವರಿಯ ದೇವಾಲಯ ಸಿದ್ದಾಪುರದ ಸಮೀಪದ ಭುವನಗಿರಿಯಲ್ಲಿದೆ. ತಾಯಿ ಭುವನೇಶ್ವರಿ ಮತ್ತು ಕದಂಬರಿಗೆ ಗೌರವ ಸೂಚಕವಾಗಿ ನಾವು ಕದಂಬ ಕನ್ನಡ ಜಿಲ್ಲೆ ಹಾಗೂ ಜಿಲ್ಲಾ ಕೇಂದ್ರ ಶಿರಸಿಗಾಗಿ ಹೋರಾಡೋಣ.

ಹೋರಾಟದ ರೂಪುರೇಷೆಗಾಗಿ ನ. ೧೬ರಂದು ಶಿರಸಿಯ ನೆಮ್ಮದಿ ಕೇಂದ್ರದಲ್ಲಿ ಸಂಜೆ ೪.೩೦ಕ್ಕೆ ಸಮಾನ ಮನಸ್ಕರ ಸಭೆ ಕರೆಯಲಾಗಿದೆ. ಅಂದು ಕದಂಬ ಕನ್ನಡ ಜಿಲ್ಲೆಗಾಗಿ ಹೋರಾಟ ಮಾಡಲು ಇಚ್ಛಿಸುವ ಸ್ವಯಂಸೇವಕರ ನೋಂದಣಿ ಕಾರ್ಯವನ್ನು ಮಾಡುತ್ತಿದ್ದೇವೆ. ನಮ್ಮ ಭಾಗದ ಯುವಕರು ತಮ್ಮ ಹೆಸರನ್ನು ಹೋರಾಟದಲ್ಲಿ ನೋಂದಾಯಿಸಿಕೊಂಡು ಕದಂಬ ಸೇನಾನಿಯಾಗಿ ಎಂದು ಈ ಮೂಲಕ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಸಿ.ಎಫ್. ಈರೇಶ, ಹೋರಾಟಗಾರ ಚಿದಾನಂದ ಹರಿಜನ, ಹುತ್ಗಾರ ಗ್ರಾಪಂ ಉಪಾಧ್ಯಕ್ಷೆ ಶೋಭಾ ನಾಯ್ಕ, ಪ್ರಮುಖರಾದ ಶಿವಾನಂದ ದೇಶಳ್ಳಿ, ಮಹಾದೇವ ಚಲುವಾದಿ, ನಾಗರಾಜ ಜೋಶಿ ಸೇರಿದಂತೆ ಮತ್ತಿತರರು ಇದ್ದರು.