ಮುಸ್ಲಿಂ ವಿರೋಧಿ ವೈದ್ಯನ ವಿರುದ್ಧ ಪ್ರಕರಣ ದಾಖಲು

| Published : Jul 17 2024, 12:59 AM IST

ಸಾರಾಂಶ

ಈ ಜಗತ್ತಿನಿಂದ ಏನನ್ನಾದರೂ ಇಲ್ಲವಾಗಿಸುವುದಾದರೆ ಅದು ಯಾವುದು ಎಂದು ಎಕ್ಸ್‌ನಲ್ಲಿ ಯಾರೋ ಕೇಳಿದ್ದ ಪ್ರಶ್ನೆಗೆ ಕೀರ್ತನ್, ಮುಸ್ಲಿಂ ಸಮುದಾಯ ಎಂದು ಉತ್ತರಿಸಿದ್ದರು. ಇದಕ್ಕೆ ಎಕ್ಸ್‌ನಲ್ಲಿ ವ್ಯಾಪಕ ಟೀಕೆ, ಆಕ್ರೋಶಗಳು ವ್ಯಕ್ತವಾಗಿದ್ದವು.

ಕನ್ನಡಪ್ರಭ ವಾರ್ತೆ ಉಡುಪಿ

ಮುಸ್ಲಿಂ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿಯಾಗಿ ಬರೆದ ಬ್ರಹ್ಮಾವರ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಕೀರ್ತನ್ ಉಪಾಧ್ಯ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಜಗತ್ತಿನಿಂದ ಏನನ್ನಾದರೂ ಇಲ್ಲವಾಗಿಸುವುದಾದರೆ ಅದು ಯಾವುದು ಎಂದು ಎಕ್ಸ್‌ನಲ್ಲಿ ಯಾರೋ ಕೇಳಿದ್ದ ಪ್ರಶ್ನೆಗೆ ಕೀರ್ತನ್, ಮುಸ್ಲಿಂ ಸಮುದಾಯ ಎಂದು ಉತ್ತರಿಸಿದ್ದರು. ಇದಕ್ಕೆ ಎಕ್ಸ್‌ನಲ್ಲಿ ವ್ಯಾಪಕ ಟೀಕೆ, ಆಕ್ರೋಶಗಳು ವ್ಯಕ್ತವಾಗಿದ್ದವು. ಇದರಿಂದ ಬೆದರಿದ ಕೀರ್ತನ್ ತಮ್ಮ ಕಮೆಂಟನ್ನು ಎಕ್ಸ್‌ನಿಂದ ಡಿಲೀಟ್ ಮಾಡಿದ್ದರು.

ಆದರೆ ಅವರ ಕಮೆಂಟ್‌ನ ಸ್ಕ್ರೀನ್ ಶಾಟ್ ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕೀರ್ತನ್ ಅವರ ಬಾವಚಿತ್ರ ಸಹಿತ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ ಪೊಲೀಸ್ ಉಪನಿರೀಕ್ಷಕ ಅಜ್ಮಲ್ ಇಬ್ರಾಹಿಂ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳವಾರ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್‌ ಸಿವಿಲ್ ರೈಟ್ಸ್‌ ವತಿಯಿಂದ ಡಾ.ಕೀರ್ತನ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಡಾ.ಕೀರ್ತನ್ ಅವರು ತಮ್ಮ ವೃತ್ತಿಯ ಮಾನದಂಡಕ್ಕೆ ವಿರುದ್ಧವಾಗಿ ಸಾಮಾಜಿಕ ಸೌಹಾರ್ದಗೆ ಧಕ್ಕೆ ಬರುವಂತೆ ಉದ್ದೇಶಪೂರ್ವಕವಾಗಿ ಈ ಕೃತ್ಯವನ್ನು ನಡೆಸಿದ್ದಾರೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.