ಡೆಪ್ಯುಟಿ ಸ್ಪೀಕರ್‌ ಲಮಾಣಿ ವಿರುದ್ಧ ಎಫ್‌ಐಆರ್‌ ದಾಖಲಿಸಿ: ಸಂತ ಬಾಲಕೃಷ್ಣ ಮಹಾರಾಜ್

| Published : Feb 21 2024, 02:04 AM IST

ಡೆಪ್ಯುಟಿ ಸ್ಪೀಕರ್‌ ಲಮಾಣಿ ವಿರುದ್ಧ ಎಫ್‌ಐಆರ್‌ ದಾಖಲಿಸಿ: ಸಂತ ಬಾಲಕೃಷ್ಣ ಮಹಾರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಯಜ್ಞದ ವೇಳೆ ನನ್ನನ್ನು ರುದ್ರಪ್ಪ ಲಮಾಣಿ ಎಳೆದು, ಕುತ್ತಿಗೆ ಹಿಡಿದು, ತಮ್ಮ ಅನುಯಾಯಿಗಳ ಸಹಾಯದಿಂದ ಸ್ಥಳದಿಂದ ಹೊರ ಹಾಕಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ, ದರ್ಪದಿಂದ, ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೇ, ಓರ್ವ ಸಂತನಾದ ತಮಗೆ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಅಲ್ಲಿನ ಅಧಿಕಾರಿಗಳು ಎಫ್ಐಆರ್ ದಾಖಲಿಸಲು ಸತಾಯಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ನ್ಯಾಮತಿ ತಾಲೂಕು ಚಿನ್ನಿಕಟ್ಟೆ(ಸೂರಗೊಂಡನಕೊಪ್ಪ) ಕ್ಷೇತ್ರದಲ್ಲಿ ಶ್ರೀ ಸೇವಾಲಾಲ್‌ರ ಜಯಂತ್ಯುತ್ಸವದ ಫೆ.15ರಂದು ಯಜ್ಞದ ವೇಳೆ ಅವಮಾನಿಸಿದ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ತಮಗೆ ಧಾರ್ಮಿಕ ಕಾರ್ಯಕ್ಕೆ ಅನುವು ಮಾಡಿಕೊಡಬೇಕು ಎಂದು ಶ್ರೀಪೀಠಾಧ್ಯಕ್ಷ ಸಂತ ಬಾಲಕೃಷ್ಣ ಮಹಾರಾಜ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂತ ಸೇವಾಲಾಲ್‌ರ ವಂಶಸ್ಥರಾದ ತಾವು 8-9ನೇ ಪೀಳಿಗೆಯವರಾಗಿದ್ದು, ಮಹಾರಾಷ್ಟ್ರದ ಬರಾಡ್‌ನ ಪೌರಾದೇವಿ ಶಕ್ತಿ ಪೀಠದ ಶ್ರೀ ರಾಮರಾವ್ ಮಹಾರಾಜರಿಂದ ತಾವು ದೀಕ್ಷೆ ಪಡೆದು, ಸೂರಕೊಂಡನಕೊಪ್ಪ ಸುಕ್ಷೇತ್ರದಲ್ಲಿ ತಮ್ಮ ವಂಶಸ್ಥರು ಚಿಕ್ಕ ಕಲ್ಲಿನ ಮಂಟಪ ಕಟ್ಟಿದ್ದಲ್ಲಿ ಪೂಜೆ ಮಾಡಿಕೊಂಡು ಬಂದಿದ್ದೇವೆ ಎಂದರು.

ಯಜ್ಞದ ವೇಳೆ ನನ್ನನ್ನು ರುದ್ರಪ್ಪ ಲಮಾಣಿ ಎಳೆದು, ಕುತ್ತಿಗೆ ಹಿಡಿದು, ತಮ್ಮ ಅನುಯಾಯಿಗಳ ಸಹಾಯದಿಂದ ಸ್ಥಳದಿಂದ ಹೊರ ಹಾಕಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ, ದರ್ಪದಿಂದ, ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೇ, ಓರ್ವ ಸಂತನಾದ ತಮಗೆ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಅಲ್ಲಿನ ಅಧಿಕಾರಿಗಳು ಎಫ್ಐಆರ್ ದಾಖಲಿಸಲು ಸತಾಯಿಸುತ್ತಿದ್ದಾರೆ ಎಂದು ದೂರಿದರು.

ಸೂರಗೊಂಡನಕೊಪ್ಪದ ಸಂತರಾದ ತಮ್ಮನ್ನು ಸಮಾಜ ಬಾಂಧವರ ಮುಂದೆ ಸಾರ್ವಜನಿಕವಾಗಿ ಎಳೆದಾಡಿ, ಅವಾಚ್ಯವಾಗಿ ನಿಂದಿಸಿದ ರುದ್ರಪ್ಪ ಲಮಾಣಿ ವಿರುದ್ಧ ಕ್ರಮ ಕೈಗೊಳ್ಳಬೇಕು. ರುದ್ರಪ್ಪ ಲಮಾಣಿ ಕ್ಷಮಾಪಣೆ ಕೇಳಬೇಕು. ಅಂದಿನ ಘಟನೆ ಬಗ್ಗೆ ಸ್ಪಷ್ಟನೆ ನೀಡಬೇಕು. ಅಲ್ಲದೇ, ಸುಕ್ಷೇತ್ರದಲ್ಲಿ ಶ್ರೀ ಸಂತ ಸೇವಾಲಾಲರ ಮೂರ್ತಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಶ್ರೀ ಬಾಲಕೃಷ್ಣ ಮಹಾರಾಜ ಆಗ್ರಹಿಸಿದರು.

ಸಮಾಜದ ಮುಖಂಡ ಕೆ.ಜಿ.ಪುರುಷೋತ್ತಮ ನಾಯ್ಕ ಮಾತನಾಡಿ, ರುದ್ರಪ್ಪ ಲಮಾಣಿ ಇತರರು ಆವೇಶದಿಂದ ಸಂತ ಶ್ರೀ ಬಾಲಕೃಷ್ಣ ಮಹಾರಾಜರನ್ನು ಎಳೆದಾಡಿರಬಹುದು. ಆದರೆ, ನೋವುಂಡವರು, ಅವಮಾನ ಅನುಭವಿಸಿದವರು ಮಹಾರಾಜರು. ಸೂರಗೊಂಡನಕೊಪ್ಪ ಕ್ಷೇತ್ರದ ಪೀಠವು ವಂಶ ಪಾರಂಪರ್ಯವಾಗಿ ಬಂದ ಪೀಠ. ಕಳೆದ 7-8 ದಶಕದಿಂದ ಈಚೆಗೆ ಅದು ಸೇವಾಲಾಲರ ಜನ್ಮಸ್ಥಳವೆಂಬುದು ಗೊತ್ತಾಗಿದೆ. ಆದರೆ, 2014ರಿಂದ ಈಚೆಗೆ ಸಂತಲಾಲ್‌ರ ವಂಶಸ್ಥರನ್ನು ದೂರವಿಟ್ಟು, ಟ್ರಸ್ಟ್ ಸ್ಥಾಪಿಸಲಾಗಿದೆ. ಈ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ನಾವೂ ಮಹಾರಾಜರ ಜೊತೆಗಿದ್ದೇವೆ ಎಂದರು.

ಸಮಾಜದ ಮುಖಂಡರಾದ ಡ್ಯೂರಾ ನಾಯ್ಕ, ಪ್ರಕಾಶ ನಾಯ್ಕ, ಹೀರಾನಾಯ್ಕ, ಅನಂತ ನಾಯ್ಕ ಇತರರಿದ್ದರು.

ಗಾಂಧಿ ಪುತ್ಥಳಿ ಬಳಿ ಆಮರಣಾಂತ ಉಪವಾಸ ಎಚ್ಚರಿಕೆ

ಸಂತ ಸೇವಾಲಾಲ್‌ರ ಜನ್ಮಸ್ಥಳದಲ್ಲಿ ಧರ್ಮ ಸಂಸ್ಥಾಪನೆಯಾಗಬೇಕು. ಆದರೆ, ರುದ್ರಪ್ಪ ಲಮಾಣಿ ಅನಗತ್ಯ ಹಸ್ತಕ್ಷೇಪ ಮೂಲಕ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಚ್ಯುತಿ ತರುತ್ತಿದ್ದಾರೆ. ತಮ್ಮ ಸ್ಥಾನದ ಘನತೆಯನ್ನೇ ಮರೆತು, ಅಮಾನವೀಯವಾಗಿ ವರ್ತಿಸಿ, ಕಾನೂನು ಉಲ್ಲಂಘಿಸಿದ ವ್ಯಕ್ತಿ ವಿರುದ್ಧ ಪೊಲೀಸ್ ಇಲಾಖೆ ಮೃದು ಧೋರಣೆ ತೋರುವುದು ಸರಿಯಲ್ಲ. ರುದ್ರಪ್ಪ ಲಮಾಣಿ ವಿರುದ್ಧ ನ್ಯಾಮತಿ ಪೊಲೀಸರು ಎಫ್ಐಆರ್ ದಾಖಲಿಸದಿದ್ದರೆ ಎಸ್ಪಿ, ಪೂರ್ವ ವಲಯ ಐಜಿಪಿಗೆ ದೂರು ನೀಡುತ್ತೇವೆ. ಈ ದೂರಿಗೆ ಎಸ್ಪಿ, ಐಜಿಪಿ ಸ್ಪಂದಿಸದಿದ್ದರೆ ವಿಧಾನಸೌಧ ಆವರಣದ ಗಾಂಧಿ ಪುತ್ಥಳಿ ಬಳಿ ಆಮರಣಾಂತ ಉಪವಾಸ ಕೂರುತ್ತೇನೆ ಎಂದು ಸಂತ ಶ್ರೀ ಬಾಲಕೃಷ್ಣ ಮಹಾರಾಜ್‌ ಎಚ್ಚರಿಕೆ ನೀಡಿದರು.