ಸಾರಾಂಶ
ಕಂದಾಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ । ಸಚಿವರಿಗೆ ಮನವಿ
ಕನ್ನಡಪ್ರಭ ವಾರ್ತೆ ಭಾಲ್ಕಿರಾಜ್ಯದ ಕಂದಾಯ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ಹಾಲಿ ಇರುವ ಕಂದಾಯ ಇಲಾಖಾ ನೌಕರರ ಕೆಲಸದ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸುವಂತೆ, ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಸೋಮವಾರ ಕಂದಾಯ ಇಲಾಖಾ ನೌಕರರ ಸಂಘದ ಪ್ರಮುಖರಾದ ಗೋಪಾಲ ಹಿಪ್ಪರಗಿ ನೇತೃತ್ವದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ ಕಂದಾಯ ಇಲಾಖಾ ನೌಕರರು, ಕಂದಾಯ ಇಲಾಖೆಯಲ್ಲಿ ಬೇರೆ ಇಲಾಖೆಯ ಕೆಲಸಗಳನ್ನು ಕಂದಾಯ ಸಿಬ್ಬಂದಿಯಿಂದ ಮಾಡಿಸುತ್ತಿದ್ದು, ಪ್ರತಿ ರಜಾ ದಿನಗಳಲ್ಲಿಯೂ ಕಾರ್ಯ ನಿರ್ವಹಿಸುವಂತಾಗಿದೆ ಎಂದು ಗೋಳು ತೋಡಿಕೊಂಡಿದ್ದಾರೆ.ಕೆಲಸದ ಒತ್ತಡದಿಂದ ಕಂದಾಯ ಇಲಾಖಾ ನೌಕರರು ಮಾನಸಿಕ ಒತ್ತಡಕ್ಕೆ ಒಳಗಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇಲಾಖೆಯಲ್ಲಿ ಸುಮಾರು 4 ಸಾವಿರ ಹುದ್ದೆ ಖಾಲಿಯಿವೆ. ಈ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ ಹಾಲಿ ನೌಕರರ ಕಾರ್ಯ ಒತ್ತಡ ಕಡಿಮೆ ಮಾಡಬೇಕು. ಕಂದಾಯ ಇಲಾಖೆಯಲ್ಲಿ ಕುಟುಂಬದ ಸಮಸ್ಯೆ, ಆರೋಗ್ಯ ಸಮಸ್ಯೆ ಇರುವ ನೌಕರರುಗಳಿಗೆ ಅಂತರ ಜಿಲ್ಲಾ ವರ್ಗಾವಣೆ ಯನ್ನು ಮರು ಜಾರಿಗೊಳಿಸಬೇಕು ಎಂದು ಕೋರಿದ್ದಾರೆ.
ಪ್ರಮುಖವಾಗಿ ಸಿವಿಲ್ ವ್ಯಾಜ್ಯ ಪ್ರಕರಣಗಳಲ್ಲಿ ಪೊಲೀಸರು ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡು, ಸುತ್ತೋಲೆ ಇದ್ದರೂ ಸಹ ಕಂದಾಯ ಅಧಿಕಾರಿಗಳ ಮೇಲೆ ಎಫ್‌ಐಆಪ್ ದಾಖಲಿಸುತ್ತಿದ್ದು, ಸದರಿ ಸುತ್ತೋಲೆಯನ್ನು ಸರ್ಕಾರದ ಆದೇಶವನ್ನಾಗಿ ಮಾಡಬೇಕು ಎಂದರು.ಕಾಲ ಕಾಲಕ್ಕೆ ಇಲಾಖೆಯಲ್ಲಿ ಬಡ್ತಿ ವ್ಯವಸ್ಥೆ ಸರಿಯಾಗಿ ಮಾಡಬೇಕು. ಗ್ರೇಡ್ 2 ಹುದ್ದೆಯಿಂದ ಗ್ರೇಡ್ 1 ಹುದ್ದೆಗೆ ನೇಮಕ ಮಾಡಿಕೊಳ್ಳು ತ್ತಿರುವ ಆದೇಶವು ದೋಷಪೂರಿತವಾಗಿದ್ದು, ಇದನ್ನು ಸರಿಪಡಿಸಬೇಕು ಎಂದು ನೌಕರರು ಸಚಿವ ಖಂಡ್ರೆ ಅವರಿಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ನೌಕರರ ಸಂಘದ ಗೋಪಾಲ ಹಿಪ್ಪಗರಗಿ, ಬೊಮ್ಮಣ್ಣ ಮಡಿವಾಳ, ಪರಶುರಾಮ ತಳವಾರ, ಶಿವಕುಮಾರ ಸ್ವಾಮಿ ಹಾಗೂ ಎಂಡಿ ಮುಲ್ಲಾ ಸೇರಿದಂತೆ ಮತ್ತಿತರರು ಇದ್ದರು.----