ಚಿತ್ರನಟ ಡಾ.ಅಂಬರೀಶ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ವಿತರಣೆ

| Published : May 30 2024, 12:45 AM IST

ಸಾರಾಂಶ

ಅಂಬರೀಶ್ ಅಣ್ಣನ ಮಾತು ಕಠಿಣವಾಗಿದ್ದರೂ ಅವರ ಹೃದಯ ಮೃದು ಸ್ವಭಾವದ್ದಾಗಿತ್ತು. ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಒಬ್ಬ ನಟನಾಗಿ, ಸಂಸದ, ಸಚಿವರಾಗಿ ಗಮನ ಸೆಳೆದಿದ್ದರು. ಅವರ ಸೇವೆಗಳು ಅಪಾರವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಹಿರಿಯ ನಟ ರೆಬಲ್‌ಸ್ಟಾರ್ ಡಾ.ಅಂಬರೀಶ್ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ಅಂಬರೀಶ್ ಅಭಿಮಾನಿ ಸಂಘದ ಗೌರವಾಧ್ಯಕ್ಷ ಎಸ್.ಎಲ್.ಲಿಂಗರಾಜು ನೇತೃತ್ವದಲ್ಲಿ ಪಟ್ಟಣದ ಮೈಸೂರು- ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದ ಬಳಿ ಅಂಬರೀಶ್ ಭಾವಚಿತ್ರ ಇರಿಸಿ ಅಭಿಮಾನಿಗಳು ವಿಶೇಷ ಪೂಜೆ ನಂತರ ಹಾಲಿನ ಅಭಿಷೇಕ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚಿದರು. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಅಲ್ಲಿನ ಒಳ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಿದರು.

ಈ ವೇಳೆ ಮಾತನಾಡಿದ ಎಸ್.ಎಲ್.ಲಿಂಗರಾಜು, ಅಂಬರೀಶ್ ಅಣ್ಣನ ಮಾತು ಕಠಿಣವಾಗಿದ್ದರೂ ಅವರ ಹೃದಯ ಮೃದು ಸ್ವಭಾವದ್ದಾಗಿತ್ತು. ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಒಬ್ಬ ನಟನಾಗಿ, ಸಂಸದ, ಸಚಿವರಾಗಿ ಗಮನ ಸೆಳೆದಿದ್ದರು. ಅವರ ಸೇವೆಗಳು ಅಪಾರವಾಗಿದೆ ಎಂದರು.

ಸಂಘದ ಮುಖಂಡರಾದ ಎನ್.ಗಂಗಾಧರ್, ಟಿ.ಎಂ.ಹೊಸೂರು ಮಹೇಶ್, ನಾಗರಾಜು, ಪುರಸಭೆ ಮಾಜಿ ಸದಸ್ಯ ಸುನೀಲ, ಗೋಪಾಲ್, ಒಕ್ಕಲಿಗರ ಸಂಘದ ಅಧ್ಯಕ್ಷ ಗೌಡಹಳ್ಳಿ ದೇವರಾಜು, ನಗುವನಹಳ್ಳಿ ಮಹದೇವ ಸ್ವಾಮಿ, ವೆಂಕಟೇಶ್, ಕೃಷ್ಣಕುಮಾರ್, ನಾಗರಾಜು, ಮೋಹನ್, ನೆಲಮನೆ ಹರೀಶ, ರವಿಚಂದ್ರ ಸೇರಿದಂತೆ ನೂರಾರು ಅಂಬರೀಶ್ ಅಭಿಮಾನಿಗಳು ಇದ್ದರು.

ಸಭೆ, ವೀಡಿಯೋ ಸಂವಾದ ನಡೆಸದಂತೆ ಆದೇಶ

ಮಂಡ್ಯ: ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ಹಾಗೂ ವಿಧಾನ ಪರಿಷತ್ ಚುನಾವಣಾ ಕಾರ್ಯ ಮುಕ್ತಾಯಗೊಳ್ಳುವವರೆಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಮತ್ತು ವೀಡಿಯೋ ಸಂವಾದ ನಡೆಸಬಾರದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ಆದೇಶಿಸಿದ್ದಾರೆ.ಈಗಾಗಲೇ ಸಭೆ ಮತ್ತು ವೀಡಿಯೋ ಸಂವಾದಗಳು ನಿಗದಿಯಾಗಿದ್ದಲ್ಲಿ ಮುಂದೂಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಸಭೆ, ವೀಡಿಯೋ ಸಂವಾದ ನಡೆಸಬೇಕಾದ ತುರ್ತು ಅಗತ್ಯವಿದ್ದಲ್ಲಿ ಕಚೇರಿಯೊಂದಿಗೆ ಸಮಾಲೋಚಿಸುವಂತೆ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಬೇಕೆಂದು ತಿಳಿಸಿದ್ದಾರೆ.

ಚುನಾವಣಾ ಸಂಬಂಧ ಮಾದರಿ ನೀತಿ ಸಂಹಿತೆ ಜೂ.೬ರ ವರೆಗೆ ಜಾರಿಯಲ್ಲಿರಲಿದೆ. ಈ ಹಂತದಲ್ಲಿ ಇಲಾಖೆಗಳಲ್ಲಿನ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಮತ್ತು ಇಲಾಖೆ ಮುಖ್ಯಸ್ಥರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮತ್ತು ವೀಡಿಯೋ ಸಂವಾದ ಏರ್ಪಡಿಸುತ್ತಿದ್ದಾರೆ. ಇದರಿಂದ ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ಹಾಗೂ ವಿಧಾನ ಪರಿಷತ್ ಚುನಾವಣಾ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.