ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದೇನೆ ಎಂದು ಪತ್ರ ಬರೆದಿಟ್ಟು ಅಪರಿಮಿತ ನಿದ್ದೆ ಮಾತ್ರೆ ಸೇವಿಸಿದ್ದ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ, ಚಿತ್ರ ಕಲಾ ಶಿಕ್ಷಕ, ರಾಜ್ಯಮಟ್ಟದ ಕಲಾವಿದ ಜಯರಾಮ್ ಕೆ ಅವರು (58) ಶುಕ್ರವಾರ ನಿಧನರಾದರು. ಅವರ ತಾಯಿ ಕಲ್ಯಾಣಿ ಅವರು ಮೂರು ದಿನಗಳ ಹಿಂದೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಮೇ 10ರಂದು ಜಯರಾಂ ಹಾಗೂ ಅವರ ತಾಯಿ ಮನೆಯೊಳಗೆ ದೇವರ ಕೋಣೆಯ ಎದುರು ಅಪರಿಮಿತ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥರಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಯಿತು. ಮೂರು ದಿನಗಳವರೆಗೂ ತೀವ್ರ ನಿಗಾ ಘಟಕದಲ್ಲಿದ್ದ ಅವರ ಪೈಕಿ ತಾಯಿ ಕಲ್ಯಾಣಿ 12 ರಂದು ಕೊನೆಯುಸಿರೆಳೆದಿದ್ದರು.ಮೃತ ಜಯರಾಂ ಪತ್ನನಿ, ಅಣ್ಣನನ್ನು ಅಗಲಿದ್ದಾರೆ. ಜಯರಾಂ ಕೆ. ಕಲಾವಿದ, ನಾಟಕ ರಚನೆಕಾರ, ಜಾನಪದ ಕಲಾರಾಧಕ, ಚಿತ್ರಕಲಾ ಶಿಕ್ಷಕರಾಗಿ, ಕುಣಿತ ಭಜನಾ ತರಬೇತುದಾರ, ಶೆಟ್ಲ್ ಬ್ಯಾಡ್ಮಿಂಟನ್ ಆಟಗಾರನಾಗಿ ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಯುವಜನ ಮೇಳದ ಏಕಪಾತ್ರಾಭಿನಯದಲ್ಲಿ ರಾಜ್ಯಮಟ್ಟದ ವರೆಗಿನ ಪ್ರಶಸ್ತಿ ಪಡೆದುಕೊಂಡಿದ್ದಲ್ಲದೆ ಅವರ ಶಿಷ್ಯವರ್ಗದವರಾದ ಅಶ್ರಫ್ ಆಲಿಕುಂಞಿ ಮುಂಡಾಜೆ, ಮುಸ್ತಫಾ ಸಿ, ರಂಜಿನಿ ರವಿ ಕುಮಾರ್, ಹೇಮಾವತಿ ದಮ್ಮಾನಂದ ಅವರಿಗೂ ರಾಜ್ಯಮಟ್ಟದ ಪ್ರಶಸ್ತಿ ಬರುವಲ್ಲಿ ಕಾರಣರಾಗಿದ್ದರು.ಸ್ಥಳೀಯ ಹಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿದ್ದರು. ವಿಶ್ವ ತುಳು ಸಮ್ಮೇಳನದ ಸಾಂಸ್ಕೃತಿಕ ಸಮಿತಿಯಲ್ಲಿ ಪದಾಧಿಕಾರಿಯಾಗಿದ್ದರು.ತುಳುನಾಡ ಸಂಸ್ಕೃತಿ, ನಾಟಿ ಔಷಧಿ, ಜನಜಾಗೃತಿ ವಿಚಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಪ್ರಸಿದ್ಧರಾಗಿದ್ದ ಅವರು ಕಳೆದ 26 ವರ್ಷಗಳಿಂದ ಮುಂಡಾಜೆಯಲ್ಲಿ ಕಲಾಕುಂಚ ಆರ್ಟ್ಸ್ ಎಂಬ ಟ್ಯೂಷನ್ ಸೆಂಟರ್ ನಡೆಸುತ್ತಿದ್ದರು. ಅವರ ಕಲಾ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯೊಬ್ಬರೂ ಡಾಕ್ಟರೇಟ್ ಪದವಿ ಪಡೆದಿರುವುದೂ ಇದೆ.