ಕೊತ್ತಲವಾಡಿ ಗ್ರಾಮಕ್ಕೆ ಕೊತ್ತಲವಾಡಿಗೆ ಚಿತ್ರತಂಡ ಭೇಟಿ

| Published : Jul 31 2025, 12:45 AM IST

ಸಾರಾಂಶ

ಬಹು ನಿರೀಕ್ಷೆ ಹುಟ್ಟುಹಾಕಿರುವ ಕೊತ್ತಲವಾಡಿ ಚಿತ್ರತಂಡವು ಗುಂಡ್ಲುಪೇಟೆ ತಾಲೂಕಿನ ಕೊತ್ತಲವಾಡಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಹು ನಿರೀಕ್ಷೆ ಹುಟ್ಟುಹಾಕಿರುವ ಕೊತ್ತಲವಾಡಿ ಚಿತ್ರತಂಡವು ಗುಂಡ್ಲುಪೇಟೆ ತಾಲೂಕಿನ ಕೊತ್ತಲವಾಡಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿತು.

ಕೊತ್ತಲವಾಡಿ ಚಿತ್ರದ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್, ಚಿತ್ರದ ನಾಯಕ ನಟ ಪೃಥ್ವಿ ಅಂಬರ್ ಹಾಗೂ ನಾಯಕಿ ನಟಿ ಕಾವ್ಯ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದೇವತೆ ಶ್ರೀ ಪಾರ್ವತಾಂಭೆಗೆ ನಮಿಸಿದರು. ಊರಿಗೆ ಬಂದ ಚಿತ್ರತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡ ಗ್ರಾಮಸ್ಥರು ಫಲ-ತಾಂಬೂಲ ಕೊಟ್ಟು, ಶಾಲು ಹೊದಿಸಿ ಸನ್ಮಾನಿಸಿ ಚಿತ್ರವು ಶತದಿನೋತ್ಸವ ಆಚರಿಸಲಿ ಎಂದು ಹಾರೈಸಿದರು.

ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಮಾತನಾಡಿ, ಕೊತ್ತಲವಾಡಿ ಊರಿಗೆ ಯಶ್ ಕುಟುಂಬದಿಂದ ಅಪೂರ್ವ ವಂದನೆಗಳನ್ನು ಸಲ್ಲಿಸುತ್ತೇನೆ. ಇಡೀ ಚಿತ್ರಕ್ಕೆ ಕೊತ್ತಲವಾಡಿ ಗ್ರಾಮಸ್ಥರು ತುಂಬಾ ಸಪೋರ್ಟ್ ಮಾಡಿದ್ದಾರೆ. ಅಣ್ಣಾವ್ರು ಹೇಳಿದಂತೆ ಹಳ್ಳಿ ಜನ ಒಳ್ಳೇಯವರು, ಅದರಂತೆ ಕೊತ್ತಲವಾಡಿ ಗ್ರಾಮಸ್ಥರು ಒಳ್ಳೇ ಜನ ಎಂದರು.

ಗ್ರಾಮದೇವತೆ ಆಶೀರ್ವಾದದಿಂದ ಕೊತ್ತಲವಾಡಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಲ್ಲರೂ ಥಿಯೇಟರ್ ನಲ್ಲಿ ಕೊತ್ತಲವಾಡಿ ಚಿತ್ರವನ್ನು ನೋಡಿ, ‌ಮನೆಯ ಗಂಡಸರು ಸಿನಿಮಾಗೆ ಕರೆದೊಯ್ಯದಿದ್ದರೇ ನೀವೆ ಹೋಗಿ, ‌ನನ್ನನ್ನು ನಮ್ಮ ಮನೆಯವರು ಚಿತ್ರಕ್ಕೆ ಕರೆದೊಯ್ಯಲ್ಲ, ಅವರು ನೋಡ್ಕಂಡು ಬರ್ತಾರೆ, ಅದಕ್ಕೆ ಗಂಡಸರು ಕರೆದುಕೊಂಡು ಹೋಗದಿದ್ದರೇ ನೀವ್ ನೀವೆ ಹೋಗಿ ಎಂದರು.

ಕೊತ್ತಲವಾಡಿ ಅನ್ನೋದು ಈಗ ಇಂಡಿಯಾ ನೋಡ್ತಿದೆ. ಅದೇ ರೀತಿ ಚಿತ್ರವೂ ಆಗಲಿ ಎಂಬುದು ನನ್ನಾಸೆ, ನಮ್ಮ ಎರಡನೇ ಚಿತ್ರವನ್ನೂ ಕೂಡ ಸಾಧ್ಯವಾದರೇ ಇದೇ ಊರಲ್ಲಿ ಚಿತ್ರೀಕರಿಸುತ್ತೇವೆ. ಯಶ್ ಕೂಡ ಮುಂದಿನ ದಿನಗಳಲ್ಲಿ ಈ ಊರಿಗೆ ಭೇಟಿ ಕೊಡ್ತಾರೆ ಎಂದು ತಿಳಿಸಿದರು.

ಕೊತ್ತಲವಾಡಿ ಚಿತ್ರದ ಹೀರೋ ಪೃಥ್ವಿ ಅಂಬಾರ್ ಮಾತನಾಡಿ, ನಾನು ಈ ಊರಿಗೆ ಬಂದಾಗಲೆಲ್ಲಾ ಒಂದು ರೀತಿ ವೈಬ್ರೇಷನ್ ಉಂಟಾಗುತ್ತದೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸಕ್ಕೆ ಯಾವತ್ತೂ ಋಣಿ, ಚಿತ್ರಕ್ಕೆ ಬೇರೊಂದು ಹೆಸರು ನೀಡುವ ಯೋಚನೆ ಇತ್ತು. ‌ನೀವು ನಮಗೆ ಕೊಟ್ಟಿರುವ ಪ್ರೀತಿ, ಅಭಿಮಾನಕ್ಕೆ ಕೊತ್ತಲವಾಡಿ ಹೆಸರು ಇಟ್ಟಿದ್ದೇವೆ. ಇಲ್ಲಿಯವರೆಗೆ ನಾನು ಹುಟ್ಟಿ ಬೆಳೆದ ಒಂದು ಹಳ್ಳಿ ಇತ್ತು ಇನ್ಮೇಲೆ ನನಗೆ ಮತ್ತೊಂದು ಹಳ್ಳಿ ಇದೆ ಅದು ಕೊತ್ತಲವಾಡಿ ಎಂದರು.