ಸಾರಾಂಶ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ, ನಟರಾದ ಅಜೇಯರಾವ್, ಡಾಲಿ ಧನಂಜಯ್, ರವಿಚಂದ್ರನ್ ಅವರನ್ನು ಆಹ್ವಾನಿಸಲಾಗುವುದು. ಸಿನಿ ಕಲಾವಿದರೊಂದಿಗೆ ಸ್ಥಳೀಯ ಹಾಗೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಕಲಾವಿದರು ಕೂಡ ಉತ್ಸವಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹಾಗೂ ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಹಂಪಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಫೆ. 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಫೆ. 2ರಿಂದ 4ರ ವರೆಗೆ ಉತ್ಸವ ಅದ್ಧೂರಿಯಾಗಿ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಹಲವು ಸುತ್ತಿನ ಚರ್ಚೆಗಳನ್ನು ನಡೆಸಲಾಗಿದೆ. ಹಂಪಿ ಉತ್ಸವ ಯಶಸ್ವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದರು.ನಾಲ್ಕು ವೇದಿಕೆಗಳು: ಹಂಪಿ ಉತ್ಸವಕ್ಕಾಗಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಗಾಯತ್ರಿ ಪೀಠದಲ್ಲಿ ಮುಖ್ಯ ವೇದಿಕೆ, ಎದುರು ಬಸವಣ್ಣ ಮಂಟಪದಲ್ಲಿ ಎರಡನೇ ವೇದಿಕೆ, ವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಮೂರನೇ ವೇದಿಕೆ ಮತ್ತು ಸಾಸಿವೆ ಕಾಳು ಗಣಪತಿ ಮಂಟಪದ ಬಳಿ ನಾಲ್ಕನೇ ವೇದಿಕೆ ನಿರ್ಮಿಸಲಾಗುತ್ತಿದೆ. ಹಂಪಿ ಗಜಶಾಲೆ ಆವರಣದಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಕೂಡ ಬರೆಯಲಾಗಿದೆ. 110 ಸ್ಥಳೀಯ ಕಲಾವಿದರನ್ನೊಳಗೊಂಡ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಸಂಪೂರ್ಣ ವೆಚ್ಚ ಭರಿಸಲಾಗುವುದು ಎಂದು ಪತ್ರದ ಮೂಲಕ ತಿಳಿಸಲಾಗಿದೆ ಎಂದರು.
ಜಾನಪದಕ್ಕೂ ಪ್ರಾಧ್ಯಾನ್ಯತೆ: ಈ ಬಾರಿಯ ಉತ್ಸವದಲ್ಲಿ ಚನಲಚಿತ್ರ ಗೀತೆಗಳ ರಸಮಂಜರಿಯೊಂದಿಗೆ ಸ್ಥಳೀಯ ಜಾನಪದ ಸೊಗಡಿನ ಗೀತೆಗಳಿಗೂ ಪ್ರಾಧ್ಯಾನ್ಯತೆ ನೀಡಲಾಗುವುದು. ಹಂಪಿ ಉತ್ಸವದ ರೂವಾರಿ ಎಂ.ಪಿ. ಪ್ರಕಾಶ ಅವರ ಆಶಯದಂತೆ ಉತ್ಸವವನ್ನು ಸಾಂಸ್ಕೃತಿಕ ಮಾದರಿಯಲ್ಲೇ ಆಚರಿಸಲಾಗುವುದು. ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ ಸೇರಿದಂತೆ ಸಂಗೀತ ಕಲೆಗೆ ಹೆಚ್ಚಿನ ಅವಕಾಶ ನೀಡಲಾಗುವುದು. ಭರತನಾಟ್ಯ, ಸಾಂಸ್ಕೃತಿಕ ಕಲೆಯ ಅನಾವರಣಕ್ಕೆ ಅವಕಾಶ ನೀಡಲಾಗುವುದು ಎಂದರು.ಬಂಡಿ ಎತ್ತುಗಳ ಪ್ರದರ್ಶನ: ಈ ಬಾರಿಯ ಹಂಪಿ ಉತ್ಸವದಲ್ಲಿ ಬಂಡಿ ಎತ್ತುಗಳ ಪ್ರದರ್ಶನ ವಿಶೇಷವಾಗಿ ನಡೆಯಲಿದೆ. ಗುಂಡು ಎತ್ತುವುದು, ಬಂಡಿ ಗಾಲಿ ಪ್ರದರ್ಶನ, ಕುಸ್ತಿ ಪಂದ್ಯಾವಳಿ ಕೂಡ ಆಯೋಜಿಸಲಾಗುವುದು. ಶಿಲ್ಪಕಲಾ ಪ್ರದರ್ಶನ, ಚಿತ್ರಕಲೆ, ಫೋಟೋ ಪ್ರದರ್ಶನ ಕೂಡ ನಡೆಯಲಿದೆ. ಹಂಪಿಗೆ ಸಂಬಂಧಿಸಿದ ಫೋಟೋಗಳನ್ನು ಫೋಟೋಗ್ರಾಫರ್ ಪ್ರದರ್ಶಿಸಲಿದ್ದಾರೆ. ಉತ್ಸವದ ನಿಮಿತ್ತ ಕುರಿಗಳ ಪ್ರದರ್ಶನ, ಶ್ವಾನ ಪ್ರದರ್ಶನ ಕೂಡ ನಡೆಯಲಿದೆ ಎಂದರು.
ಮಂಜಮ್ಮ ಜೋಗತಿಗೆ ವಿಶೇಷ ಗೌರವ: ಪದ್ಮಶ್ರೀ ಮಂಜಮ್ಮ ಜೋಗತಿ ಅವರಿಗೆ ಎದುರು ಬಸವಣ್ಣ ವೇದಿಕೆ ರಾಯಭಾರಿಯನ್ನಾಗಿಸಲಾಗುವುದು. ಸಂಪೂರ್ಣ ವೇದಿಕೆ ಹೊಣೆ ಅವರಿಗೆ ನೀಡಲಾಗುವುದು. ಈ ವೇದಿಕೆಗೆ ಆಗಮಿಸುವ ಕಲಾವಿದರಿಗೆ ಅವರೇ ಸನ್ಮಾನಿಸಲಿದ್ದಾರೆ. ಮೂರು ದಿನವೂ ಈ ವೇದಿಕೆ ಸಂಪೂರ್ಣ ಅವರಿಗೆ ವಹಿಸಲಾಗುವುದು ಎಂದರು.ತುಂಗಾರತಿ, ವಸಂತ ವೈಭವ: ತುಂಗಾರತಿ ಹಾಗೂ ವಸಂತ ವೈಭವ ನಡೆಯಲಿದೆ. ತುಂಗಭದ್ರಾ ನದಿಯಲ್ಲಿ ಶ್ರೀವಿದ್ಯಾರಣ್ಯ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ತುಂಗಾರತಿ ನಡೆಯಲಿದೆ. ವಸಂತ ವೈಭವದಲ್ಲಿ ಆನೆಗಳು, ಕುದುರೆಗಳನ್ನು ತರಲಾಗುವುದು. ಹೊಸಪೇಟೆಯಲ್ಲಿ ವಸಂತ ವೈಭವ ನಡೆಯಲಿದೆ. ಹೊಸಪೇಟೆಯಿಂದ ಹಂಪಿಗೆ 100 ಉಚಿತ ಬಸ್‌ಗಳನ್ನು ಉತ್ಸವದ ವೇಳೆ ಬಿಡಲಾಗುವುದು ಎಂದರು.
ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಲಾಗುವುದು. ಪ್ರವಾಸಿಗರಿಗೆ ಪಂಚೆ ವ್ಯವಸ್ಥೆ ಮಾಡಲಾಗುವುದು. ಹಂಪಿಯಲ್ಲಿ ಕುಡಿಯುವ ನೀರು, ಎಂಟು ಕಡೆ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗುವುದು. 10 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಹಂಪಿಯಲ್ಲಿ ವಿದ್ಯುದೀಪಾಲಂಕಾರ ಮಾಡಲಾಗುವುದು. ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಾತನಾಡಿ, ಹಂಪಿ ಉತ್ಸವವನ್ನು ಮೈಸೂರು ದಸರೆ ಮಾದರಿಯಲ್ಲಿ ಪ್ರತಿವರ್ಷ ಆಚರಣೆ ಮಾಡಬೇಕು, ಗೆಜೆಟ್‌ನಲ್ಲಿ ಆದೇಶ ಆಗಿರುವಂತೆ ಪ್ರತಿವರ್ಷ ನ. 3,4 ಮತ್ತು 5ರಂದು ಹಂಪಿ ಉತ್ಸವ ಆಚರಣೆ ಮಾಡಬೇಕು. ಹಂಪಿ ಉತ್ಸವ ಎಂ.ಪಿ. ಪ್ರಕಾಶ ಅವರ ಆಶಯದಂತೇ ನಡೆಯಬೇಕು. ಸಾಂಸ್ಕೃತಿಕ ವೈಭವ ಮೇಳೈಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ, ಜಿಪಂ ಸಿಇಒ ಸದಾಶಿವ ಪ್ರಭು, ಹೆಚ್ಚುವರಿ ಎಸ್ಪಿ ಸಲೀಂ ಪಾಷಾ, ಸಹಾಯಕ ಆಯುಕ್ತ ಎನ್. ಮಹಮ್ಮದ್ ಅಲಿ ಅಕ್ರಂ ಶಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ್, ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಗ್ರಾಪಂ ಅಧ್ಯಕ್ಷೆ ರಜನಿಗೌಡ, ಕಮಲಾಪುರ ಪಪಂ ಸದಸ್ಯರಾದ ಮುಕ್ತಿಯಾರ್ ಪಾಷಾ, ಸೈಯದ್ ಅಮಾನುಲ್ಲಾ, ರಾಮಸ್ವಾಮಿ ಮತ್ತಿತರರಿದ್ದರು.ಖುದ್ದು ತೆರಳಿ ಆನಂದ ಸಿಂಗ್‌ರನ್ನು ಆಹ್ವಾನಿಸುವೆ: ಗವಿಯಪ್ಪ
ಹೊಸಪೇಟೆ: ಈ ಬಾರಿಯ ಹಂಪಿ ಉತ್ಸವದಲ್ಲಿ ಎಂ.ಪಿ. ಪ್ರಕಾಶ್ ಅವರಂತೆ ಪ್ರತಿಪಕ್ಷದ ನಾಯಕರನ್ನು ಖುದ್ದಾಗಿ ತೆರಳಿ ಉತ್ಸವಕ್ಕೆ ಆಮಂತ್ರಿಸುವೆ. ಮಾಜಿ ಸಚಿವ ಆನಂದ ಸಿಂಗ್ ಅವರನ್ನು ಖುದ್ದಾಗಿ ತೆರಳಿ ಆಹ್ವಾನಿಸುವೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಾಹಿತಿ ಕುಂ. ವೀರಭದ್ರಪ್ಪರನ್ನು ಸೇರಿದಂತೆ ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳ ರಾಜಕಾರಣಿಗಳು, ಸಾಹಿತಿಗಳು, ಸಾಂಸ್ಕೃತಿಕ ಕಲಾವಿದರು, ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಖುದ್ದು ಆಹ್ವಾನಿಸುವೆ. ಉಭಯ ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ಮಾಜಿ ಸಂಸದರನ್ನು ಕೂಡ ಆಹ್ವಾನಿಸುವೆ ಎಂದರು.